ಮಂಜು ಕೋಟೆ
ಟಿಎಪಿಸಿಎಂಎಸ್ ಆಡಳಿತ ಮಂಡಳಿ ಮುಂದುವರಿಕೆಗೆ ಆದೇಶ
ಎಚ್.ಡಿ.ಕೋಟೆ: ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ನಡೆಸುವಂತೆ ಮತ್ತು ಟಿಎಪಿಸಿಎಂಎಸ್ ಆಡಳಿತ ಮಂಡಳಿಯನ್ನು ಮುಂದಿನ ಚುನಾವಣೆವರೆಗೆ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ,ಉಪಾಧ್ಯಕ್ಷರ ಚುನಾವಣೆ ನ.೩ರಂದು ನಿಗದಿಯಾಗಿತ್ತು. ಚುನಾವಣೆ ಅಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಸಿಡಿಒ ರೇಣುಕಾ ಅಂದು ನಾಪತ್ತೆಯಾಗಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಈ ಕುರಿತು ಬೆಳಗನಹಳ್ಳಿ ಶಿವರಾಜ್ ನೇತೃತ್ವದ ಬಣ ಅಧಿಕಾರಿ ರೇಣುಕಾರವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಅನಾರೋಗ್ಯದ ಕಾರಣ ಹಿಂದಿನ ಚುನಾವಣೆ ದಿನ ಗೈರಾಗಿದ್ದೆ ನ. ೨೦ರಂದು ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ನಡೆಸುತ್ತೇವೆ ಎಂದು ರೇಣುಕಾ ಅವರು ವಕೀಲರ ಮುಖಾಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ನ.೨೦ರಂದು ಚುನಾವಣೆ ನಡೆಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಟಿಎಪಿಸಿಎಂಎಸ್ ಆಡಳಿತ ಮಂಡಳಿ ಮುಂದುವರಿಸಲು ಸೂಚನೆ: ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಅಧಿಕಾರಾವಧಿ ನ.೯ಕ್ಕೆ ಪೂರ್ಣಗೊಂಡಿದ್ದು, ಆಡಳಿತ ಮಂಡಳಿಯ ನೇತೃತ್ವದಲ್ಲಿ ಎಲ್ಲ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡಿದ್ದರೂ ಮುಂದಿನ ಚುನಾವಣೆ ದಿನಾಂಕ ನಿಗದಿ ಆಗದೇ ಇರುವುದರಿಂದ ಅಲ್ಲಿಯವರೆಗೂ ಆಡಳಿತ ಮಂಡಳಿಯನ್ನು ಮುಂದುವರಿಸುವಂತೆ ಅಧ್ಯಕ್ಷರಾದ ಮೊತ್ತ ಬಸವರಾಜಪ್ಪ, ಉಪಾಧ್ಯಕ್ಷರಾದ ನೂರ್ ಅಹ್ಮದ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಸಹಕಾರ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ (ಎ.ಆರ್. )ಅನಸೂಯಾರವರು ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿರುವುದರಿಂದ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಚುನಾವಣೆ ನಡೆಸಲು ಕೆಲವೊಂದು ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲಾ ಗುತ್ತಿದೆ ಎಂದು ಸರ್ಕಾರದ ವಕೀಲರ ಮುಖಾಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು ಇನ್ನು ನಾಲ್ಕು ತಿಂಗಳ ಒಳಗಾಗಿ ಅಧಿಕಾರಿಗಳ ಸಮ್ಮುಖದಲ್ಲಿ ನಿರ್ದೇಶಕರ ಸ್ಥಾನಗಳ ಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ.
” ನ್ಯಾಯಾಲಯಕ್ಕೆ ಇದೇ ತಿಂಗಳು ೨೦ರಂದು ಕಸಬಾ ವಿಎಸ್‌ಎಸ್‌ಎನ್ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿದೆ. ಅದರಂತೆ ಎಲ್ಲಾ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ.”
ರೇಣುಕಾ, ಸಿಡಿಒ, ಸಹಕಾರ ಇಲಾಖೆ
” ಟಿಎಪಿಸಿಎಂಎಸ್ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿದ್ದು, ನನ್ನನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಚುನಾವಣೆ ನಡೆಸಲು ಅನೇಕ ದಾಖಲಾತಿಗಳನ್ನು ಸರಿ ಮಾಡಬೇಕಾಗಿರುವುದರಿಂದ ನ್ಯಾಯಾಲಯದ ನಿರ್ದೇಶನದಂತೆ ನಾಲ್ಕು ತಿಂಗಳ ಒಳಗಾಗಿ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆಸಲಾಗುವುದು”
ಅನಸೂಯ, ಸಹಾಯಕ ರಿಜಿಸ್ಟ್ರಾರ್ ಸಹಕಾರ ಇಲಾಖೆ





