ಬಿಸಿಲಿನ ತಾಪ ತಡೆಯಲು ಕಲ್ಲಂಗಡಿ ಹಣ್ಣಿಗೆ ಜನರು ಮೊರೆ
ಪ್ರಶಾಂತ್ ಎಸ್.
ಮೈಸೂರು: ಬೇಸಿಗೆ ಕಾಲ ಆರಂಭದಲ್ಲೇ ಬಿಸಿಲು ಜನರನ್ನು ಬೆಚ್ಚಿ ಬೀಳಿಸಿದೆ. ರಸ್ತೆಗಳಲ್ಲಿ ಓಡಾಡುವವರು, ವಾಹನ ಸವಾರರ ಒಂದು ಕಣ್ಣು ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ತಂಪು ಪಾನೀಯಗಳು ಮತ್ತು ಹಣ್ಣುಗಳು, ಎಳನೀರನ್ನು ಹುಡುಕುತ್ತಲೇ ಇರುತ್ತವೆ. ಅದರಲ್ಲಿಯೂ ಇತ್ತೀಚೆಗೆ ಮಾರುಕಟ್ಟೆಗೆ ದಾಂಗುಡಿ ಇಟ್ಟಿರುವ ಕಲ್ಲಗಂಡಿ ಹಣ್ಣು ಕಂಡರೆ ಸಾಕು ವಾಹನಗಳಿಗೆ ಸವಾರರು ಬ್ರೇಕ್ ಹಾಕುವುದು ಖಚಿತ. ಅಷ್ಟರಮಟ್ಟಿಗೆ ಕಲ್ಲಂಗಡಿ ಹಣ್ಣುಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಬಿಸಿಲಿನ ಝಳಕ್ಕೆ ಜನರು ದಾಹ ತಣಿಸಿಕೊಳ್ಳಲು ಕಲ್ಲಂಗಡಿ ಹಣ್ಣಿನ ಮೊರೆ ಹೋಗುತ್ತಿದ್ದಾರೆ.
ಎಲ್ಲೆಡೆ ಸಾಕಷ್ಟು ಕಲ್ಲಂಗಡಿ ಆಮದು ಆಗಿದ್ದು, ಅಷ್ಟೇ ಪ್ರಮಾಣದಲ್ಲಿ ಗ್ರಾಹಕರು ಅದರ ಮೊರೆ ಹೋಗಿರುವುದು ವ್ಯಾಪಾರಿಗಳಲ್ಲಿ ಸಂತಸ ತಂದಿದೆ. ಪ್ರತಿದಿನ ಮುಂಜಾವಿನಲ್ಲಿ ಚಳಿ ಇದ್ದರೂ, ಬೆಳಿಗ್ಗೆ ೯ ಗಂಟೆ ವೇಳೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದ್ದು, ಮಧ್ಯಾ ಹ್ನದ ಹೊತ್ತಿಗೆ ೩೦ರಿಂದ ೩೨ ಡಿಗ್ರಿ ಸೆಲ್ಸಿಯಸ್ ಗೆ ಏರಿ, ಜನರು ಹೈರಾಣಾಗುತ್ತಿದ್ದಾರೆ.
ಫೆಬ್ರವರಿ ಅಂತ್ಯ, ಮಾರ್ಚ್ ತಿಂಗಳ ಆರಂಭದಲ್ಲೇ ಉರಿಬಿಸಿಲಿನ ತಾಪ ತಾಳಲಾ ರದೆ ಜನರು ತಂಪು ಪಾನೀಯ ಮತ್ತು ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಜನರ ಬಯಕೆ ಅರಿತಂತೆ ನಗರದಾದ್ಯಂತ ಮಾರು ಕಟ್ಟೆಗೆ ಕಲ್ಲಂಗಡಿ ಹಣ್ಣುಗಳು ಬಂದಿವೆ. ವ್ಯಾಪಾರವೂ ಜೋರಾಗಿ ನಡೆಯುತ್ತಿದೆ.
ಆಂಧ್ರಪ್ರದೇಶ, ತಮಿಳುನಾಡು ರಾಜ್ಯ ಗಳಿಂದ ಆಮದು: ನಾಲ್ಕೈದು ಕಲ್ಲಂಗಡಿ ವ್ಯಾಪಾರಿಗಳು ಒಟ್ಟುಗೂಡಿ ಒಂದು ವಾರದಲ್ಲಿ ಎರಡು ಬಾರಿ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮಲ್ಕರ್ ಚೆರವು, ಪುಲಿವೆಂದಲು ಹಾಗೂ ತಮಿಳು ನಾಡಿನ ವಿವಿಧ ಭಾಗಗಳಿಂದ ದಿನಕ್ಕೆ ಮೂರ್ನಾಲ್ಕು ಲೋಡ್ ನಗರಕ್ಕೆ ತರಿಸಿಕೊಳ್ಳುತ್ತಿದ್ದಾರೆ. ಅಲ್ಲಿ ಒಂದು ಕೆಜಿ ಹಣ್ಣಿಗೆ ೧೦ ರೂ. ನಂತೆ ಖರೀದಿಸುವ ವ್ಯಾಪಾರಿಗಳು, ಇಲ್ಲಿ ಸಾಕಷ್ಟು ಲಾಭ ಇಟ್ಟುಕೊಂಡೇ ಮಾರಾಟ ಮಾಡುತ್ತಿದ್ದಾರೆ. ಜನದಟ್ಟಣೆ ಇರುವ ಪ್ರದೇಶ, ಪುರಭವನ, ಬಸ್ ನಿಲ್ದಾಣ, ರಸ್ತೆ ಬದಿ ಹಾಗೂ ವಿವಿಧ ಬಡಾವಣೆಗಳು ಸೇರಿದಂತೆ ಹಲವು ಸ್ಥಳಗಳಲ್ಲಿ ಕಲ್ಲಂಗಡಿ ಹಣ್ಣು, ಮಕ್ಕಳು, ವಿದ್ಯಾ ರ್ಥಿಗಳು, ಸಾರ್ವಜನಿಕರನ್ನು ತನ್ನತ್ತ ಸೆಳೆದು ಕೊಳ್ಳುತ್ತಿದೆ. ಬಿಸಿಲಿನ ಬೇಗೆಯನ್ನು ತಾಳಲಾ ರದೇ ಸ್ಥಳದಲ್ಲೇ ನಿಂತು, ಕಲ್ಲಂಗಡಿ ಹಣ್ಣಿನ ಒಂದೆರಡು ಪೀಸ್‌ಗಳನ್ನು ಸೇವಿಸುವ ಮೂಲಕ ಬಾಯಾರಿಕೆ ನಿವಾರಿಸಿಕೊಳ್ಳುವ ದೃಶ್ಯ ಸಾಮಾನ್ಯ ವಾಗಿದೆ. ಈ ಕಲ್ಲಂಗಡಿ ಹಣ್ಣುಗಳನ್ನು ಮನೆಗೆ ಕೊಂಡೊಯ್ಯುವವರ ಸಂಖ್ಯೆಯೂ ಹೆಚ್ಚಿದೆ.
ಗ್ಲಾಸ್ ಪೆಟ್ಟಿಗೆಯಲ್ಲಿಟ್ಟು ಸುರಕ್ಷತೆ: ತಿನ್ನುವ ಹಣ್ಣು ಶುಚಿಯಾಗಿರಬೇಕು ಎನ್ನುವ ಉದ್ದೇಶ ದಿಂದ ದೂಳು, ಕೀಟಗಳು ಮುತ್ತದಂತೆ ಗ್ಲಾಸ್ ಪೆಟ್ಟಿಗೆಯೊಳಗೆ ಸುರಕ್ಷಿತವಾಗಿಟ್ಟು ಗ್ರಾಹಕರನ್ನು ಆಕರ್ಷಿಸುವ ಮಾರ್ಗವನ್ನು ವ್ಯಾಪಾರಿಗಳು ಕಂಡುಕೊಂಡಿದ್ದಾರೆ. ಕತ್ತರಿಸಿದ ಕಲ್ಲಂಗಡಿಗೆ ಮೆಣಸಿನಪುಡಿ ಉದುರಿಸಿ ಕೊಡುವ ಹಣ್ಣಿನ ರುಚಿ ಸವಿದವರಿಗೇ ಗೊತ್ತು ಎಂಬುದು ಹಣ್ಣು ತಿಂದವರ ಮಾತು.
ಬೇಸಿಗೆಯಲ್ಲಿ ತಂಪು ಪಾನೀಯ ಸೇವನೆಯು ದಾಹ ಕಡಿಮೆ ಮಾಡುತ್ತದೆ ಯಾದರೂ ಅದರ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಉತ್ತಮವಾದ ಐಸ್ ಹಾಗೂ ಶುದ್ಧ ನೀರು ಬಳಸಿ ಮಾಡಿರುವ ಪಾನೀಯಗಳನ್ನು ಸೇವಿಸಬಹುದು. ಕೆಲವೆಡೆ ಕಡಿಮೆ ವೆಚ್ಚದಲ್ಲಿ ಸಂಸ್ಕರಿಸಲ್ಪಟ್ಟ ಮಂಜುಗಡ್ಡೆ ಬಳಸಿ ಪಾನೀಯ ತಯಾ ರಿಸುತ್ತಾರೆ. ಅದನ್ನು ಸೇವಿಸಿದರೆ ನೀರಿನ ಮೂಲಕ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಅಪಾಯ ಇರುತ್ತದೆ. ಆದ್ದರಿಂದ ಜನರು ನಿಗಾವಹಿಸಬೇಕು. –ಡಾ. ಪಿ. ಸಿ. ಕುಮಾರಸ್ವಾಮಿ, ಡಿಎಚ್‌ಒ
ಕಲ್ಲಂಗಡಿಗೆ ಹೆಚ್ಚು ಬೇಡಿಕೆ
ಮೈಸೂರು: ನೀರಿನ ದಾಹ ತಣಿಸಲು ಕಲ್ಲಂಗಡಿ ಅಷ್ಟೇ ಅಲ್ಲದೇ ಎಳನೀರು, ಕಬ್ಬಿನ ಹಾಲು, ನಿಂಬೆ ರಸ, ಹಣ್ಣಿನ ರಸಕ್ಕೂ ಬೇಡಿಕೆ ಹೆಚ್ಚಾಗಿದೆ. ಒಂದು ಎಳನೀರು ೪೦ರಿಂದ ೫೦ ರೂ. , ಒಂದು ಲೋಟ ಕಬ್ಬಿನ ಹಾಲಿಗೆ ೨೦ ರೂ. , ನಿಂಬೆ ಷರಬತ್ತು, ಕಿತ್ತಳೆಹಣ್ಣಿನ ಜ್ಯೂಸ್, ಗ್ರೇಪ್ ಜ್ಯೂಸ್, ಮಸಾಲೆ ಮಜ್ಜಿಗೆ ಮತ್ತು ಸೋಡಾ ಮಾರಾಟವೂ ನಡೆದಿದೆ. ಆದರೆ, ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚು ಮಾರ್ಚ್, ಏಪ್ರಿಲ್‌ನಲ್ಲಿ ಮಾರಾಟ ಜೋರಾಗಿರುತ್ತದೆ. ಈಗ ಪೂರ್ಣಪ್ರಮಾಣದ ಬೇಸಿಗೆ ಆರಂಭವಾಗುತ್ತಿದ್ದು, ಸಹಜವಾಗಿ ಕಲ್ಲಂಗಡಿ ವ್ಯಾಪಾರ ಜೋರಾಗುವ ನಿರೀಕ್ಷೆ ಇದೆ.
ದಿನಕ್ಕೆ ೨,೦೦೦ ರೂ. ಆದಾಯ ಕಲ್ಲಂಗಡಿ ಸುಗ್ಗಿ ಫೆಬ್ರವರಿಯಲ್ಲಿ ಆರಂಭವಾಗಿದ್ದು, ಮಾರ್ಚ್, ಏಪ್ರಿಲ್, ಮೇ ವರೆಗೂ ವ್ಯಾಪಾರ ಮಾಡುತ್ತೇನೆ. ನಿತ್ಯ ನಮ್ಮಲ್ಲಿ ೧೫೦ರಿಂದ ೨೦೦ ಕೆಜಿ ಹಣ್ಣು ಮಾರಾಟವಾಗುತ್ತಿದೆ. ದಿನಕ್ಕೆ ೧,೦೦೦ರಿಂದ ೨ ಸಾವಿರ ರೂ. ಗಳಷ್ಟು ಆದಾಯ ಗಳಿಸುತ್ತಿದ್ದೇವೆ. -ಮಹಮ್ಮದ್ ಅಲಿ, ಕಲ್ಲಂಗಡಿ ವ್ಯಾಪಾರಿ





