ಪ್ರಸಾದ್ ಲಕ್ಕೂರು
ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ನೀಡಲು ಸಿದ್ಧತೆ ವಾರದ ಹಿಂದೆಯೇ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ
ಚಾಮರಾಜನಗರ: ಬೇಸಿಗೆ ಆರಂಭವಾಗಿದ್ದು, ಸೂರ್ಯನ ಶಾಖ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೀಟ್ ವೇವ್ (ಶಾಖದ ಹೊಡೆತ)ನಿಂದ ತೊಂದರೆಗೆ ಒಳಗಾದವರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆಯು ಸಿದ್ಧತೆ ಮಾಡಿಕೊಂಡಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ೨ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿರಿಸಲಾಗಿದೆ.
ಜಿಲ್ಲೆಯ ೫೯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ೪ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ ೨ ಹಾಸಿಗೆಗಳು, ೩ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತಲಾ ೫ ಹಾಸಿಗೆಗಳು ಮತ್ತು ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಬೋಧನಾ ಆಸ್ಪತ್ರೆಯಲ್ಲಿ ಒಂದು ವಾರ್ಡ್ ಅನ್ನು ಇದಕ್ಕಾಗಿ ಕಾಯ್ದಿರಿಸಲಾಗಿದೆ.
ಶಾಖದ ಹೊಡೆತದಿಂದ ನಿತ್ರಾಣರಾದವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಎ.ಸಿ.ಇರುವ ಕೊಠಡಿಗಳಲ್ಲಿ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಎ.ಸಿ.ಇಲ್ಲದ ಕಡೆ ಏರ್ ಕೂಲರ್ ಬಳಸಲಾಗುತ್ತದೆ. ಫ್ಯಾನ್‌ಗಳನ್ನು ಸಜ್ಜುಗೊಳಿಸಲಾಗಿದೆ. ಜೊತೆಗೆ ಒಆರ್‌ಎಸ್ ಪುಡಿ, ಕಾಟನ್ ಬಟ್ಟೆ, ಪ್ಲೂಯೆಡ್ಸ್ ಬಾಟೆಲ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೇಸಿಗೆ ಆರಂಭದಲ್ಲೇ ಜಿಲ್ಲೆಯಲ್ಲಿ ಉಷ್ಣಾಂಶ ೩೩-೩೪ ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದು, ಬಿಸಿಲಿನ ತಾಪ ಏರಿಕೆ ಯಾಗುತ್ತಿದೆ. ಇದರಿಂದಾಗಿ ಜನರು ಎಲ್ಲ ಕಡೆ ನೆರಳಿನ ಆಶ್ರಯ ಬಯಸುತ್ತಿದ್ದಾರೆ. ಬಿಸಿಲಿನ ತಾಪದಿಂದ ದೇಹ ನಿರ್ಜಲೀಕರಣಗೊಳ್ಳುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಜನರು ತಂಪು ಪಾನೀಯಗಳು, ಎಳನೀರು, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ.ಈ ನಡುವೆ ವಿವಿಧ ಕಾಯಿಲೆಗಳ ಪೀಡಿತರು, ವಯಸ್ಸಾದವರು, ಪುಟ್ಟ ಮಕ್ಕಳು, ಬಯಲಿನಲ್ಲಿ ಶ್ರಮದ ಕೆಲಸ ಮಾಡುವವರು ಬಿಸಿಲಿನ ತಾಪಕ್ಕೆ ಈಡಾಗುತ್ತಿದ್ದಾರೆ. ಇವರ ಪೈಕಿ ಯಾರಾದರೂ ಹೀಟ್‌ವೇವ್ ಸ್ಟ್ರೋಕ್‌ಗೆ ತುತ್ತಾದರೆ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆಯು ಜಿಲ್ಲೆಯಾದ್ಯಂತ ಸಜ್ಜಾಗಿದೆ. ಪ್ರತಿದಿನ ಮಧ್ಯಾಹ್ನ ೧೨ ರಿಂದ ಸಂಜೆ ೪ ಗಂಟೆಯವರೆಗೆ ಬಿಸಿಲಿನ ತಾಪ ಹೆಚ್ಚಾಗಿರುತ್ತದೆ. ಈ ವೇಳೆಯಲ್ಲಿ ಮನೆಯಿಂದ ಹೊರ ಹೋಗುವುದನ್ನು ಹಾಗೂ ಹೆಚ್ಚು ಶ್ರಮದ ಕೆಲಸ ಮಾಡುವುದನ್ನು ತಪ್ಪಿಸಬೇಕು. ಸುಸ್ತು, ಸಂಕಟ ನಿಲ್ಲದಿದ್ದರೆ ಸಮೀಪದ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಆರೋಗ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
” ಹೆಚ್ಚುತ್ತಿರುವ ಬಿಸಿಲಿನ ತಾಪದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಾರದ ಹಿಂದೆಯೇ ಎಲ್ಲ ಆಸ್ಪತ್ರೆಗಳಲ್ಲಿಯೂ ಹೀಟ್‌ವೇವ್ ಸ್ಟ್ರೋಕ್ ಮ್ಯಾನೇಜ್‌ಮೆಂಟ್ ವಾರ್ಡ್ಗಳನ್ನು ತೆರೆಯಲಾಗಿದೆ. ಇಲ್ಲಿಯ ತನಕ ಯಾರೊಬ್ಬರೂ ಹೀಟ್‌ವೇವ್ ಸ್ಟ್ರೋಕ್‌ಗೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿಲ್ಲ.”
– ಡಾ. ಚಿದಂಬರ, ಜಿಲ್ಲಾ ಆರೋಗ್ಯಾಧಿಕಾರಿ.
ಶಾಖದ ಹೊಡೆತ ತಡೆಗೆ ಸಲಹೆಗಳು…
ಹೀಟ್‌ವೇವ್ ಸ್ಟ್ರೋಕ್ ತಡೆಯಲು ಹವಾಮಾನ ಇಲಾಖೆ ನೀಡಿರುವ ಸಲಹೆಗಳನ್ನು ಅನುಸರಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಿಳಿಸಿದೆ. ಹೆಚ್ಚಾಗಿ ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹ, ಕಾಫಿ ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳು ಮತ್ತು ಹಳೆಯ ಆಹಾರವನ್ನು ಸೇವಿಸಬಾರದು. ಮೂರ್ಛೆ ಅಥವಾ ಅನಾರೋಗ್ಯ ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು. ಒಆರ್ ಎಸ್, ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಅಕ್ಕಿ ಗಂಜಿ, ನಿಂಬೆ ರಸ, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸುವುದರಿಂದ ದೇಹವನ್ನು ಮರು-ಜಲೀಕರಣ ಮಾಡಲು ಸಹಾಯವಾಗಲಿದೆ. ರಾತ್ರಿಯಲ್ಲಿ ಕಿಟಕಿಗಳನ್ನು ತೆರೆದ ಸ್ಥಿತಿಯಲ್ಲಿರಿಸಬೇಕು. ಫ್ಯಾನ್, ಒದ್ದೆ ಬಟ್ಟೆಗಳನ್ನು ಬಳಸಬೇಕು, ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ತುರ್ತು ಸೇವೆಗೆ ಶುಲ್ಕ ರಹಿತ ದೂ.ಸಂ. ೧೦೭೭ ಹಾಗೂ ೦೮೨೨೬-೨೨೩೧೬೦/೬೧/೬೩ ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಟಿ. ಶಿಲ್ಪಾನಾಗ್ ಅವರು ಮನವಿ ಮಾಡಿದ್ದಾರೆ.





