Mysore
21
mist

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಡಿಎಚ್‌ಒ ವರ್ಗಾವಣೆಯಲ್ಲಿ ಎಡವಟ್ಟು

ಕೆ.ಬಿ.ರಮೇಶನಾಯಕ

ಟಿಎಚ್‌ಒ ಹುದ್ದೆಗೆ ಡಿಎಚ್‌ಒ ವರ್ಗಾವಣೆ

ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ

ಮೈಸೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಆಮೂಲಾಗ್ರವಾಗಿ ರಾಜ್ಯಸರ್ಕಾರ ವರ್ಗಾವಣೆ ಮಾಡಿದ್ದು, ಡಿಎಚ್‌ಒ ಆಗಿ ಕಾರ್ಯ ನಿರ್ವಹಿಸುತ್ತಿದ್ದವರನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಾಗಿ ವರ್ಗಾಯಿಸಿ ಹೊರಡಿಸಿರುವ ಆದೇಶ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಅಧಿಕಾರಿಗಳು ಈಗ ತಾಲ್ಲೂಕು ಮಟ್ಟದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಇಲಾಖೆಯಲ್ಲಿ ಇದು ಸಾಮಾನ್ಯ ಪ್ರಕ್ರಿಯೆ ಎನ್ನುವ ಮಾತನ್ನು ಹೇಳಿದರೂ ಜಿಲ್ಲೆಗೆ ಮುಖ್ಯಸ್ಥರಾಗಿದ್ದ ಅಧಿಕಾರಿ ತಾಲ್ಲೂಕಿಗೆ ಸೀಮಿತವಾಗಬೇಕಿರುವುದರಿಂದ ಗೊಂದಲ ಮತ್ತು ಮುಜುಗರಕ್ಕೆ ಸಿಲುಕಿಸುವಂತೆ ಮಾಡಿದೆ. ಇದರಿಂದಾಗಿ ಕೆಲವರು ನ್ಯಾಯಾಲಯದ ಮೊರೆ ಹೋಗಿ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ತಂದರೆ, ಹಲವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಕದ ತಟ್ಟಿದ್ದಾರೆ .

ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಅವರನ್ನು ತಿ.ನರಸೀಪುರ ತಾಲ್ಲೂಕು ಆರೋಗ್ಯಾಧಿಕಾರಿಯನ್ನಾಗಿ, ರಾಮನಗರ ಜಿಲ್ಲೆಯ ಸಿಎಂಒ ಡಾ. ಬಿ.ಜಿ.ಕುಮಾರಸ್ವಾಮಿ ಅವರನ್ನು ಮೈಸೂರು ತಾಲ್ಲೂಕು ಟಿಎಚ್‌ಒ ಆಗಿ ಹೀಗೆ ಅನೇಕರನ್ನು ವರ್ಗಾವಣೆ ಮಾಡಲಾಗಿದೆ. ಇದನ್ನು ಸಾರ್ವಜನಿಕರ ವಲಯದಲ್ಲಿ ಹಿಂಬಡ್ತಿ ಎಂದು ಹೇಳಲಾಗುತ್ತಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳು, ಮುಖ್ಯ ವೈದ್ಯಾಧಿಕಾರಿಗಳು, ಹಿರಿಯ ತಜ್ಞ ವೈದ್ಯರು, ಎಸ್‌ಎಂಒಗಳು, ಪತ್ರಾಂಕಿತ ಅಧಿಕಾರಿಗಳು, ಕಾರ್ಯಕ್ರಮ ಅಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಇನ್ನಿತರ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಡಿ.೧೨ರಂದು ಆದೇಶ ಹೊರಡಿಸಿತ್ತು. ಸರ್ಕಾರ ಸೂಚಿಸಿದ ಸ್ಥಳಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು.

ಆದರೆ, ಸರ್ಕಾರದಿಂದ ಆದೇಶ ಹೊರ ಬೀಳುತ್ತಿದ್ದಂತೆ ಇಲಾಖೆಯಲ್ಲಿ ದೊಡ್ಡ ಚರ್ಚೆ, ಅಸಮಾಧಾನಕ್ಕೂ ಕಾರಣವಾಗಿದೆ. ತುಮಕೂರಿನ ಕೆ.ಆರ್.ಮಂಜುನಾಥ್ ಮತ್ತು ಇತರರುಹೈಕೋರ್ಟ್ ಮೊರೆ ಹೋಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಿ  ಅಂಡ್ ಆರ್ ನಿಯಮ ಬದಿಗೊತ್ತಿ, ಸೇವಾ ಹಿರಿತನ, ಜೇಷ್ಠತೆಯನ್ನು ಬದಿಗೊತ್ತಿ ವರ್ಗಾವಣೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಲಯವು ಸರ್ಕಾರದ ಆದೇಶಕ್ಕೆ ತಡೆ ನೀಡಿರುವ ಜತೆಗೆ, ಮುಂದಿನ ವಿಚಾರಣೆಯನ್ನು ಜನವರಿ ೩೧ಕ್ಕೆ ಮುಂದೂಡಿದೆ.

ಅಧಿಕಾರಿಗಳಿಗೆ ಸಂಕಟ: ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಜಂಟಿ ನಿರ್ದೇಶಕರ ಹುದ್ದೆಯ ನಂತರ ಮುಂಬಡ್ತಿ ಕೊಡುವುದನ್ನು ಹೊರತುಪಡಿಸಿದರೆ ತಾಲ್ಲೂಕು ಆರೋಗ್ಯಾಧಿಕಾರಿ, ಆರ್‌ಸಿಎಚ್, ಕಾರ್ಯಕ್ರಮ ಅಧಿಕಾರಿ, ಡಿಎಚ್‌ಒಗಳು ಒಂದೇ ಕೇಡರ್‌ನ ಅಧಿಕಾರಿಗಳಾಗಿದ್ದಾರೆ. ಡಿಎಚ್‌ಒ ಸರಿಸಮಾನವಾಗಿ ಟಿಎಚ್‌ಒ, ಮೆಡಿಕಲ್ ಆಫೀಸರ್ ಹುದ್ದೆ ಇಲಾಖೆಯ ಹಂತದಲ್ಲಿ ಸರಿಸಮಾನವಾಗಿದ್ದರೂ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರನ್ನು ಟಿಎಚ್‌ಒ ಆಗಿ ನೇಮಕ ಮಾಡುವುದು ಅಪರೂಪ. ಡಿಎಚ್‌ಒ ಆಗಿದ್ದವರು ಟಿಎಚ್‌ಒ ಆಗಿ ವರ್ಗಾವಣೆಯಾದರೆ ಅದೊಂದು ಹಿಂಬಡ್ತಿ ಎನ್ನಿಸಿಕೊಳ್ಳುವ ಕಾರಣ ಯಾರೂ ಸರಿಸಮಾನವಾದ ಹುದ್ದೆ ಎನ್ನುವುದನ್ನು ಮುಂದಿಟ್ಟುಕೊಂಡು ಹೋಗಲ್ಲ.

ಆದರೆ, ಸರ್ಕಾರ ಏಕಾಏಕೀ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಅವರನ್ನು ತಿ.ನರಸೀಪುರ ಟಿಎಚ್‌ಒ ಆಗಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರ್‌ಸಿಎಚ್‌ಒ ಡಾ.ನದೀಮ್ ಅಹ್ಮದ್‌ಗೆ ಹೊಸಕೋಟೆ ಟಿಎಚ್‌ಒ, ಮಂಡ್ಯ ಜಿಲ್ಲೆಯ ಪ್ರಧಾನ ಜಿಲ್ಲಾ ತರಬೇತಿ ಕೇಂದ್ರದ ಡಾ.ಎಚ್.ಎಂ.ಮಮತ ಅವರನ್ನು ನಾಗಮಂಗಲ ತಾಲ್ಲೂಕು ಟಿಎಚ್‌ಒ ಆಗಿ ವರ್ಗಾವಣೆ ಮಾಡಿದೆ.

” ಸರ್ಕಾರ ಹೊಸದಾಗಿ ಪರಿಚಯಿಸಬೇಕೆಂಬ ಕಾರಣಕ್ಕಾಗಿ ಈ ರೀತಿ ಮಾಡಿದೆ. ಕೆಲವರಿಗೆ ವರ್ಗಾವಣೆ ಕೋರಿಕೆ ಮೇರೆಗೆ ಸ್ಥಳ ನಿಗದಿಪಡಿಸಲಾಗಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಲಾಗದು. ಆದರೆ, ಕೆಲವರು ಇದನ್ನು ಒಪ್ಪದೆ ನ್ಯಾಯಾ ಲಯದ ಮೊರೆ ಹೋಗಿದ್ದರಿಂದ ತಡೆಯಾಜ್ಞೆ ಸಿಕ್ಕಿದೆ.”

ಹೆಸರು ಹೇಳಲು ಬಯಸದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿ

Tags:
error: Content is protected !!