Mysore
19
scattered clouds

Social Media

ಭಾನುವಾರ, 11 ಜನವರಿ 2026
Light
Dark

ವಿದ್ಯಾನಿಧಿ, ವಿದ್ಯಾರ್ಥಿ ವೇತನಕ್ಕಾಗಿ ಪರದಾಟ

ಶ್ರೀಧರ್‌ ಆರ್‌ ಭಟ್‌ 

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಎನ್‌ಎಡಿ ತಂತ್ರಾಂಶದಲ್ಲಿ ತಾಂತ್ರಿಕ ದೋಷ

ಅರ್ಜಿ ಭರ್ತಿ ಮಾಡಲು ಮುಂದಾದರೆ ನಿಮ್ಮ ಪರೀಕ್ಷಾ ಫಲಿತಾಂಶ ಪ್ರಕಟವಾಗಿಲ್ಲವೆಂಬ ಸಂದೇಶ ಬಂದು ಅರ್ಜಿ ತಿರಸ್ಕೃತ

ಮೈಸೂರು ವಿವಿಯಲ್ಲಿ ವಿಚಾರಿಸಿದರೆ ಸಿಬ್ಬಂದಿಯಿಂದ ಹಾರಿಕೆಯ ಉತ್ತರ

ವಿದ್ಯಾರ್ಥಿವೇತನಕ್ಕೆ ಅರ್ಜಿ ಭರ್ತಿ ಮಾಡಲು ಫೆ.೨೫ ಕೊನೆಯ ದಿನ ಸಮಸ್ಯೆ ಬಗೆಹರಿಯದಿದ್ದರೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೈತಪ್ಪುವ ಆತಂಕ

ಮೈಸೂರು: ಸರ್ಕಾರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂಬ ಸದುದ್ದೇಶದಿಂದ ವಿದ್ಯಾನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ಪ್ರೋತ್ಸಾಹಧನ ಮುಂತಾದ ಧನ ಸಹಾಯ ಮಾಡುತ್ತದೆ. ಆದರೆ, ಈ ಯೋಜನೆಯಲ್ಲಿ ಲಭ್ಯವಾಗುವ ವಿದ್ಯಾರ್ಥಿ ವೇತನ ಆಡಳಿತಗಾರರ ಇಚ್ಛಾಸಕ್ತಿಯ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪುತ್ತಿಲ್ಲ.

ಕಾಲೇಜು, ವಿಶ್ವವಿದ್ಯಾನಿಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆಯಿಂದ ಕಾಲೇಜು ವ್ಯಾಸಂಗ ಮಾಡುತ್ತಿರುವ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ಗಳು ವಿದ್ಯಾನಿಽ ಯೋಜನೆಯಡಿ ವಿದ್ಯಾರ್ಥಿ ವೇತನ ಪ್ರೋತ್ಸಾಹ ನಿಧಿ ಸಿಗದೆ ಪರದಾಡುವಂತಾಗಿದೆ.

ಈ ಸೌಲಭ್ಯ ಪಡೆಯಲು ಕಾಲೇಜು ವಿದ್ಯಾರ್ಥಿಗಳು ತಮ್ಮದೇ ಆದ ಐಡಿಯಿಂದ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಎನ್‌ಎಡಿ ತಂತ್ರಾಂಶದಲ್ಲಿ ಭರ್ತಿ ಮಾಡಬೇಕಾಗಿದೆ.

ಹಾಗಾಗಿ ೨೦೨೩/೨೪ನೇ ಸಾಲಿನಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಲು ಆನ್‌ಲೈನ್ ಮೂಲಕ ಎನ್‌ಎಡಿ ತಂತ್ರಾಂಶದಡಿಯಲ್ಲಿ ಅರ್ಜಿ ಭರ್ತಿ ಮಾಡಲು ಮುಂದಾ ದಾಗ ನಿಮ್ಮ ಪರೀಕ್ಷಾ ಫಲಿತಾಂಶ ಪ್ರಕಟವಾಗಿಲ್ಲ ವೆಂಬ ಸಂದೇಶ ಬರುವ ಮೂಲಕ ಆ ಅರ್ಜಿ ತಿರಸ್ಕೃತವಾಗುತ್ತಿದೆ.

ಇದು ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ತಮ್ಮ ಅಂಕಪಟ್ಟಿಯ ಕುರಿತಾಗಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದರೆ ‘ನಾವು ಈಗ ಅಂಕಪಟ್ಟಿಯ ಪ್ರಿಂಟ್ ಹಾಗೂ ಮಾಹಿತಿಯನ್ನು ನಿಮಗೆ ಕೊಡುವ ಹಾಗಿಲ್ಲ. ಅದನ್ನು ಎನ್‌ಎಡಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ನೀವುಗಳು ಅಲ್ಲೇ ಪಡೆಯಿರಿ’ ಎನ್ನುವ ಸಿದ್ಧ ಉತ್ತರ ಸಿಬ್ಬಂದಿಯಿಂದ ಬರುತ್ತಿದೆ. ಅನೇಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎನ್‌ಎಡಿ ಬಗ್ಗೆ ಅರಿವು ಮೂಡಿಸಿಲ್ಲವಾದ್ದರಿಂದ ವಿದ್ಯಾರ್ಥಿಗಳ ಪಾಲಿಗೆ ಅದೂ ಹೊಸದಾಗಿದೆ. ವಿದ್ಯಾರ್ಥಿವೇತನಕ್ಕೆ ಅರ್ಜಿ ಭರ್ತಿ ಮಾಡಲು ಫೆ.೨೫ ಕೊನೆಯ ದಿನವಾಗಿದ್ದು, ಇನ್ನು ೨ ದಿನಗಳೊಳಗಾಗಿ ಅರ್ಜಿ ಭರ್ತಿಯಾಗದಿದ್ದರೆ ಈ ಸಾಲಿನ ವಿದ್ಯಾನಿಧಿ ಯೋಜನೆಯ ವಿದ್ಯಾರ್ಥಿ ವೇತನ ಕೈತಪ್ಪುವುದು ಗ್ಯಾರಂಟಿ

” ಪುನಾರಾವರ್ತಿತ ವಿದ್ಯಾರ್ಥಿಗಳ ಫಲಿತಾಂಶವನ್ನೂ ಈ ಪದ್ಧತಿಯಡಿಯಲ್ಲಿಯೇ ಅಪ್‌ಲೋಡ್ ಮಾಡಲು ಸಾಧ್ಯವಾಗದಿರುವುದರಿಂದ ಆಯಾ ಕಾಲೇಜಿನ ಪ್ರಾಂಶುಪಾಲರ ಸಹಿಯ ಆಧಾರಾದ ಮೇಲೆ ವಿದ್ಯಾರ್ಥಿವೇತನ ನೀಡಬಹುದಾಗಿದೆ.”

ಅವಿನಾಶ, ಅಂಕಪಟ್ಟಿ ವಿಭಾಗದ ಅಧಿಕಾರಿ, ಮೈಸೂರು ವಿವಿ

” ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಅರ್ಜಿ ತಿರಸ್ಕ ತವಾಗಲು ಸರ್ವರ್ನಲ್ಲಿನ ತಾಂತ್ರಿಕ ದೋಷ ಕಾರಣವಿರಬಹುದು. ಆ ಕುರಿತು ಗಮನ ಹರಿಸಲಾಗವದು.”

ಸುಲೋಚನಾ, ಜಿಲ್ಲಾ ವ್ಯವಸ್ಥಾಪಕರು, ಸಮಾಜ ಕಲ್ಯಾಣ ಇಲಾಖೆ

” ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾನಿಧಿ ಯೋಜನೆಯಡಿ ಪ್ರೋತ್ಸಾಹಧನವಾಗಿ ೭,೫೦೦ ರೂ., ಶೇ.೭೦ಕ್ಕಿಂತ ಹೆಚ್ಚು ಅಂಕಗಳಿಸಿದವರಿಗೆ ೧೫,೦೦೦ ರೂ., ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ೨೦,೦೦೦ ರೂ., ಪದವಿ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ೨೫,೦೦೦ ರೂ., ಸ್ನಾತಕೋತ್ತರ ಪದವಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ೩೦,೦೦೦ ರೂ.ಗಳನ್ನು ಸರ್ಕಾರ ನೀಡುತ್ತಿದ್ದು, ಎನ್‌ಎಡಿ ತಂತ್ರಾಂಶದ ಮೂಲಕ ಅರ್ಜಿ ತುಂಬಲು ಸಾಧ್ಯವಾಗದೆ ಸರ್ಕಾರದ ಪ್ರೋತ್ಸಾಹ ಧನ ಪಡೆಯಲು ಈಗ ಎಸ್‌ಸಿ, ಎಸ್‌ಟಿ ಮಕ್ಕಳು ಪರದಾಡುವಂತಾಗಿದೆ.”

ಸುರೇಶ ಶಂಕರಪುರ, ಸಂಚಾಲಕ, ದಲಿತ ಸಂಘರ್ಷ ಸಮಿತಿ

” ಮೈಸೂರು ವಿವಿಯು ೨೦೨೨-೨೩, ೨೦೨೩-೨೪ನೇ ಸಾಲಿನ ಎನ್‌ಇಪಿಗೆ ಒಳಪಡುವ ೨೫,೨೬೯ ವಿದ್ಯಾರ್ಥಿಗಳ ಫಲಿತಾಂಶವನ್ನು ಸರ್ಕಾರದ ಆದೇಶದಂತೆ ಜ.೧೮ರಂದೇ ಎನ್‌ಎಡಿ ಡಿಜಿ ಲಾಕರ್‌ಗೆ ಅಪ್‌ಲೋಡ್ ಮಾಡಿದೆ. ಅದರ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕಿದೆ. ಈ ಕುರಿತು -.೧೯ರಂದೇ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಈ ಬಗ್ಗೆ ಲಿಖಿತವಾಗಿ ತಿಳಿಸಲಾಗಿದೆ.”

-ಡಾ.ಎನ್.ನಾಗರಾಜ, ಪರೀಕ್ಷಾಂಗ ಕುಲಸಚಿವ, ಮೈವಿವಿ

” ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು -.೨೫ ಕೊನೆಯ ದಿನವಾಗಿದ್ದು, ಇನ್ನು ಒಂದು ದಿನದಲ್ಲಿ ಆನ್‌ಲೈನಲ್ಲಿ ಅರ್ಜಿ ಸಲ್ಲಿಕೆಯಾಗದಿದ್ದರೆ ಈ ಸಾಲಿನ ವಿದ್ಯಾರ್ಥಿವೇತನ ಕೈತಪ್ಪುತ್ತದೆ.”

-ಸುಲೋಚನಾ, ವಿದ್ಯಾರ್ಥಿನಿ, ಚನ್ನರಾಯಪಟ್ಟಣ

Tags:
error: Content is protected !!