Mysore
19
clear sky

Social Media

ಬುಧವಾರ, 14 ಜನವರಿ 2026
Light
Dark

ಸೋಮವಾರಪೇಟೆಯಲ್ಲಿ ಕುಡಿಯುವ ನೀರಿಗೆ ಪರದಾಟ

ಖಾಸಗಿ ಟ್ಯಾಂಕರ್‌ಗಳಿಂದ ನೀರು ಪೂರೈಕೆ; ಸಮರ್ಪಕವಾಗಿ ಲಭ್ಯವಾಗದ ಕಾವೇರಿ ನೀರು 

ಚಾಮರಾಜನಗರ : ನಗರದ ಸೋಮವಾರಪೇಟೆ ಬಡಾವಣೆಯಲ್ಲಿ ೧೫ ದಿನಗಳಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದ್ದು, ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಸ್ಥಳೀಯ ನಗರಸಭೆಯ ಒಂದನೇ ವಾರ್ಡ್‌ಗೆ ಸೇರಿದ ಬಡಾವಣೆಯಲ್ಲಿ ೧೦ಕ್ಕೂ ಹೆಚ್ಚು ಬೋರ್‌ವೆಲ್‌ಗಳಿವೆ. ಮುಂಗಾರು ಮತ್ತು ಹಿಂಗಾರು ಮಳೆಯಿಂದ ಬೋರ್‌ವೆಲ್ಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ನೀರು ಬರುತ್ತಿಲ್ಲ.

ನಗರದ ಸೋಮವಾರಪೇಟೆ ಸೇರಿದಂತೆ ವಿವಿಧ ಬಡಾವಣೆಗಳು ಸೇರಿದಂತೆ ಸೋಮವಾರಪೇಟೆ ಬಡಾವಣೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಬರುತ್ತಿಲ್ಲ. ತಿ.ನರಸೀಪುರದಲ್ಲಿ ಹರಿಯುವ ಕಾವೇರಿ ನೀರನ್ನು ಜಿಲ್ಲಾ ಕೇಂದ್ರವಾದ ನಗರದ ಬಡಾವಣೆಗಳಿಗೆ ಪೂರೈಸಲಾಗುತ್ತಿದೆ.

೧೫ ದಿನಗಳಿಂದ ನಗರಕ್ಕೆ ಸರಿಯಾಗಿ ಕಾವೇರಿ ನೀರು ಬರುತ್ತಿಲ್ಲ. ತಿ.ನರಸೀಪುರದಲ್ಲಿರುವ ಪಂಪ್‌ಹೌಸ್‌ನಲ್ಲಿ ನೀರೆತ್ತುವ ಮೋಟಾರ್ ಕೆಟ್ಟಿದೆ ಎಂಬ ಕಾರಣಕ್ಕೆ ನೀರು ಪೂರೈಕೆ ವಿಳಂಬವಾಗಿದೆ. ಆದ್ದರಿಂದ ಬಡಾವಣೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ.

ಬಡಾವಣೆಯಲ್ಲಿರುವ ನಗರಸಭೆಗೆ ಸೇರಿದ ಬೋರ್‌ವೆಲ್ಗಳಲ್ಲಿ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಜೊತೆಗೆ ಕಾವೇರಿ ನೀರು ಕೂಡ ಸಮರ್ಪಕವಾಗಿ ಬಾರದೆ ಇರುವುದರಿಂದನಿವಾಸಿಗಳು ಖಾಸಗಿ ನೀರಿನ ಟ್ಯಾಂಕರ್ ಮೊರೆ ಹೋಗಿದ್ದಾರೆ. ಬಡಾವಣೆಯಲ್ಲಿ ವಾಸಮಾಡುತ್ತಿರುವ ಬಹುತೇಕರು ಬಡವರ್ಗಕ್ಕೆ ಸೇರಿದವರಾಗಿದ್ದು, ಹಣ ನೀಡಿ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ನಿವಾಸಿಗಳು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರನ್ನು ಭೇಟಿ ಮಾಡಿ ಬಡಾವಣೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಅಂತರ್ಜಲ ಸಿಗುವ ಕಡೆ ಬೋರ್‌ವೆಲ್ ಕೊರೆಸಿ ನೀರು ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನೊಂದು ತಿಂಗಳ ಕಾಲ ಹಿಂಗಾರು ಮಳೆ ಬೀಳುವ ನಿರೀಕ್ಷೆಯಿದೆ. ಒಂದು ವೇಳೆ ಮಳೆ ಕೈಕೊಟ್ಟರೆ ನೀರಿನ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಕೂಡಲೇ ನಗರಸಭೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಿ ಸಮಸ್ಯೆಯನ್ನು ಪರಿಹರಿಸಬೇಕು. ತಪ್ಪಿದಲ್ಲಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

” ಮುಂಗಾರು ಮತ್ತು ಹಿಂಗಾರು ಮಳೆ ಸಾಕಷ್ಟು ಬಿದ್ದಿಲ್ಲ. ಬಡಾವಣೆಯ ಎಲ್ಲ ಕಡೆಗಳಿಗೂ ಕಾವೇರಿ ನೀರು ಒದಗಿಸಬೇಕೆಂದು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಆದ್ದರಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.”

ಎಸ್.ಮಹದೇವಯ್ಯ, ಸೋಮವಾರಪೇಟೆ ನಿವಾಸಿ

” ಸೋಮವಾರಪೇಟೆ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಬಡಾವಣೆಯ ವ್ಯಾಪ್ತಿಯಲ್ಲಿ ಅಂತರ್ಜಲ ಸಿಗುವ ಕಡೆ ಸ್ಥಳ ಗುರುತಿಸುವ ಕೆಲಸ ನಡೆದಿದೆ. ಈಗಾಗಲೇ ಬಡಾವಣೆಗೆ ಟ್ಯಾಂಕರ್ ಮೂಲಕ ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ.”

ಪ್ರಕಾಶ್, ನಗರಸಭೆ ಇಂಜಿನಿಯರ್

Tags:
error: Content is protected !!