ಪ್ರಶಾಂತ್ ಎಸ್.
ಆರು ತಿಂಗಳಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ
ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಕೆಎಸ್‌ಆರ್‌ಟಿಸಿ ವಿಫಲ
ಮೈಸೂರು: ನಗರದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದ್ದು, ನಾನಾ ಕಡೆಗಳಿಂದ ಮೈಸೂರಿಗೆ ಬಂದು ಹೋಗುವ ಪ್ರಯಾಣಿಕರಿಗೆ ಕುಡಿಯುವ ನೀರಿನ ಬವಣೆಯ ಬಿಸಿ ತಟ್ಟಿದೆ.
ಚಾಮರಾಜನಗರ, ಗುಂಡ್ಲುಪೇಟೆ, ಗೋಣಿಕೊಪ್ಪ, ವಿರಾಜಪೇಟೆ, ಮಡಿಕೇರಿ, ಎಚ್.ಡಿ.ಕೋಟೆ, ಸರಗೂರು, ಹಾಸನ, ಬೆಂಗಳೂರು, ಕೆ.ಆರ್.ಪೇಟೆ ಸೇರಿದಂತೆ ರಾಜ್ಯದ ಹಲವೆಡೆ ಹೋಗಲು ಪ್ರತಿ ನಿತ್ಯ ಸಾವಿರಾರು ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಆದರೆ, ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ.
ಇದ್ದರೂ ಇಲ್ಲದಂತಿರುವ ನೀರಿನ ಘಟಕ: ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ಅದು ಸ್ಥಗಿತವಾಗಿ ತಿಂಗಳುಗಳೇ ಕಳೆದಿವೆ. ಆದರೆ ಕೆಎಸ್‌ಆರ್ಟಿಸಿ ಸಂಸ್ಥೆ ಮಾತ್ರ ಅದನ್ನು ದುರಸ್ತಿಪಡಿಸಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ನಗರಕ್ಕೆ ಬರುವ ಪ್ರಯಾಣಿಕರು ಅನಿವಾರ್ಯವಾಗಿ ಹೊರಗೆ ದುಡ್ಡು ಕೊಟ್ಟು ಮಿನರಲ್ ವಾಟರ್‌ಗಳನ್ನು ತೆಗೆದುಕೊಳ್ಳಬೇಕಿದೆ.
ಹೋಟೆಲ್‌ಗಳಲ್ಲಿ ನೀರು ಕುಡಿಯಲು ಹೋದರೆ ಹೋಟೆಲ್ ಅವರು ಕೊಡುವುದಿಲ್ಲ. ನೀರು ಪಡೆಯ ಬೇಕಾದರೆ ಅಲ್ಲಿ ಏನಾದರೂ ತಿನ್ನಬೇಕು. ಟೀ ಮತ್ತು ಕಾಫಿ ಕುಡಿಯಬೇಕು. ಇದು ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ.
ಇಂದು, ನಾಳೆ ಮಾಡಿಸೋಣ ಎಂದು ಕಾಲ ಕಳೆದು ಪ್ರಯಾಣಿಕರಿಗೆ ನೀರಿನ ಸಮಸ್ಯೆ ನೀಗಿಸಲು ಹಿಂದೇಟು ಹಾಕುತ್ತಿರುವ ಸಾರಿಗೆ ನಿಗಮದ ಅಧಿಕಾರಿಗಳು ಬಸ್ ನಿಲ್ದಾಣದಲ್ಲಿ ಆಗಿರುವ ಸಮಸ್ಯೆಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
” ಹಣವಂತರು ಮಿನರಲ್ ವಾಟರ್ ಬಾಟಲಿಗಳನ್ನು ಖರೀದಿಸುತ್ತಾರೆ. ಬಡ ಪ್ರಯಾಣಿಕರು ಏನು ಮಾಡಬೇಕು? ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್ಟಿಸಿಯವರು ತುರ್ತಾಗಿ ನೀರಿನ ಸೌಲಭ್ಯ ಕಲ್ಪಿಸಬೇಕು.”
ದೇವರಾಜು, ವಿರಾಜಪೇಟೆ
” ಶುದ್ಧ ಕುಡಿಯುವ ನೀರಿನ ಘಟಕದ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಕೂಡಲೇ ಪರಿಶೀಲಿಸಿ ಅದನ್ನು ದುರಸ್ತಿಗೊಳಿಸಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.”
ಶ್ರೀನಿವಾಸ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ




