ಹಳೆಯ ತಪ್ಪುಗಳು, ಮತ್ತೆ ಅಕ್ರಮಗಳು ಮರುಕಳಿಸದಂತೆ ಕಣ್ಗಾವಲು
ಕೆ.ಬಿ.ರಮೇಶ ನಾಯಕ
ಮೈಸೂರು: ೫೦:೫೦ರ ಅನುಪಾತದಡಿ ನಿವೇಶನ ಹಂಚಿಕೆ ಹಗರಣದಿಂದಾಗಿ ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿ ಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತದ ಹಳಿ ತಪ್ಪದಂತೆ ಬಿಗಿ ನಿಯಂತ್ರಣಕ್ಕೆ ಆಯುಕ್ತರು ಮುಂದಾಗಿದ್ದಾರೆ.
ಹಳೆಯ ತಪ್ಪುಗಳು, ಅಕ್ರಮಗಳು ಮರುಕಳಿಸದಂತೆ ಪ್ರಮುಖ ಶಾಖೆಗಳ ಕೆಲಸ ಗಳ ಕಾರ್ಯಗಳ ಮೇಲೆ ಕಣ್ಗಾವಲು ಇಟ್ಟಿದ್ದು, ಪ್ರತಿ ಯೊಂದು ನಿರ್ಧಾರವನ್ನು ಅಳೆದು-ತೂಗಿ ಕೈಗೊಳ್ಳುತ್ತಿದ್ದಾರೆ. ಮುಡಾದಲ್ಲಿ ಈಗಾಗಲೇ ಖಾತೆ ಮಾಡುವುದನ್ನು ಸ್ಥಗಿತಗೊಳಿಸಿರುವುದರಿಂದ ನಕಲಿ, ಬೇನಾಮಿ ಆಸ್ತಿಗಳ ಖಾತೆಬದಲಾವಣೆ, ನೋಂದ ಣಿಗೂ ಬ್ರೇಕ್ ಹಾಕುವ ಮೂಲಕಒಂದಿಷ್ಟು ಸುಧಾರಣೆ ಮಾಡಲಾಗುತ್ತಿದೆ.
ಹಲವು ವರ್ಷಗಳಿಂದ ಬೇನಾಮಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿಸಿಕೊಳ್ಳುವುದು, ತಮ್ಮದಲ್ಲದ ಜಮೀನನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದ ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಲೇ ಇದ್ದವು. ಆದರೆ, ಕೆಸರೆ ಗ್ರಾಮದ ಸ.ನಂ.೪೬೪ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಹೆಸರಿನಲ್ಲಿದ್ದ ಜಮೀನು ಸ್ವಾಧೀನಪಡಿಸಿಕೊಂಡು ಭೂಪರಿಹಾರದ ಬದಲಿಗೆ ವಿಜಯನಗರ ಬಡಾವಣೆಯಲ್ಲಿ ೧೪ ನಿವೇಶನಗಳನ್ನು ಹಂಚಿಕೆ ಮಾಡಿ ಹಗರಣ ಹೊರಬಂದ ಬಳಿಕ ಮುಡಾದಲ್ಲಿ ಒಂ ದೊಂದೇ ಅಕ್ರಮಗಳು ಹೊರ ಬರಲು ಕಾರಣವಾಗಿತ್ತು. ಬದಲಿ ನಿವೇಶನ ಹಂಚಿಕೆಯ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದರಿಂದಾಗಿ ರಾಜ್ಯ ಸರ್ಕಾರ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿ ಪಿ.ಎನ್.ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚನೆ ಮಾಡಿದರೆ, ಟಿ.ಜೆ.ಅಬ್ರಾಹಂ, ಸ್ನೇಹಮಯಿ ಕೃಷ್ಣ, ಗಂಗರಾಜು ನೀಡಿದ ದೂರಿನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ, ಲೋಕಾಯುಕ್ತ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ.
ಪ್ರತ್ಯೇಕವಾಗಿ ಮೂರು ತನಿಖೆಗಳು ನಡೆಯುತ್ತಿರುವ ಹೊತ್ತಲ್ಲೇ ಆಡ ಳಿತಾತ್ಮಕ ವಿಚಾರದಲ್ಲಿ ಮತ್ತೆ ಲೋಪವಾಗದಂತೆ ನೋಡಿಕೊಳ್ಳಲು ಅದಕ್ಕೆ ಬೇಕಾದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿ ರುವುದು ವಿಶೇಷವಾಗಿದೆ.
ಮುಡಾದಲ್ಲಿ ಜುಲೈ ೩ರಿಂದಲೇ ಖಾತೆ ಮಾಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವ ಜತೆಗೆ ಸ್ಥಳೀ ಯ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸಿದೆ. ಮುಡಾದಿಂದ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ನಿವೇಶನ ಪಡೆದಿರುವವರಿಗೆ ಖಾತೆ ಮಾಡಿರುವುದನ್ನು ಬಿಟ್ಟರೆ ಹೊಸದಾಗಿ ಖಾತೆ, ಖಾತೆ ಬದಲಾವಣೆಯೂ ಈಗ ಸ್ಥಳೀಯ ಸಂಸ್ಥೆಗಳು ಮಾಡಬೇಕಿದೆ. ಅದೇ ರೀತಿ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದವರು ಮತ್ತು ಮಾರಾಟ ಮಾಡಿ ನೋಂದಣಿಯಾದರೆ ಅಂತಹವರ ಖಾತೆಗಳನ್ನೂ ಸ್ಥಳೀಯ ಸಂಸ್ಥೆಗಳೇ ಮಾಡಿಕೊಡಬೇಕೆಂಬ ನಿರ್ಧಾರ ಮಾಡಿರುವುದರಿಂದ ನಿವೇಶನಾದಾರರಿಗೆ ಅನುಕೂಲವಾಗಿದೆ.
ಮೂಲ ಸೌಕರ್ಯಗಳನ್ನು ಹೊಂದಿದ್ದರೆ ಬಿಡುಗಡೆ: ಮುಡಾದಿಂದ ಅನುಮೋದನೆಗೊಂಡು ರಚನೆಯಾಗುವ ಬಡಾವಣೆಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸದಿದ್ದರೆ ಶೇ.೧೦೦ರಷ್ಟು ನಿವೇಶನ ಬಿಡುಗಡೆ ಮಾಡದಿರುವುದಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ನಗರ ಯೋಜನಾ ಶಾಖೆ ಮತ್ತು ತಾಂತ್ರಿಕ ಶಾಖೆಯ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಿ ನೀಡುವ ವರದಿಯ ಆಧಾರದ ಮೇಲೆ ಮೊದಲನೇ ಹಂತದಲ್ಲಿ ಶೇ.೪೦, ಎರಡನೇ ಹಂತದಲ್ಲಿ ಶೇ.೩೦ ಮತ್ತು ಅಂತಿಮವಾಗಿ ಉಳಿದ ನಿವೇಶನಗಳನ್ನು ಬಿಡುಗಡೆ ಮಾಡ ಲಾಗುತ್ತಿತ್ತು. ಆದರೆ, ಕೆಲವರು ಮೂಲ ಸೌಕರ್ಯಗಳನ್ನು ಕಲ್ಪಿಸದೆ ಇದ್ದರೂ ತಾಂತ್ರಿಕ ವರದಿಯನ್ನು ಸಾಮಾನ್ಯ ಸಭೆಗೆ ಮಂಡಿಸುವಂತೆ ನೋಡಿಕೊಂಡು ಶೇ.೧೦೦ರಷ್ಟು ನಿವೇಶನಗಳ ಬಿಡುಗಡೆಗೆ ಒಪ್ಪಿಗೆ ಪಡೆಯುತ್ತಿದ್ದರು.
ನಂತರ, ನಿವೇಶನ ಖರೀದಿಸಿ ದವರು ಸಾಲ ಮಾಡಿ ಮನೆ ಕಟ್ಟಿದ ಮೇಲೆ ಮೂಲ ಸೌಕರ್ಯಗಳನ್ನು ಕಲ್ಪಿಸಿಲ್ಲವೆಂದು ಮುಡಾ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮೊರೆ ಹೋಗುತ್ತಿದ್ದರಿಂದ ಮುಂದಿನ ದಿನಗಳಲ್ಲಿ ಜಂಟಿ ಪರಿಶೀಲನೆ ಜತೆಗೆ ಮೂರನೇ ಏಜೆನ್ಸಿಯಿಂದ ಪರಿಶೀಲನಾ ವರದಿ ಪಡೆದುಕೊಂಡು ಸಭೆಯಲ್ಲಿ ಮಂಡಿಸಲು ಚಿಂತನೆ ನಡೆದಿದೆ.
ಮುಡಾ ಸಿಬ್ಬಂದಿ ಮೇಲೆ ಕಣ್ಗಾವಲು:
ಮೈಸೂರು: ಮುಡಾದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮತ್ತು ಯೋಜನಾ, ಖಾತೆ, ಕಂದಾಯ, ಭೂ ದಾಖಲೆಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಮೇಲೂ ನಿಗಾ ಇಡಲಾಗಿದೆ. ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕಡತಗಳನ್ನು ರವಾನಿಸು ವುದು, ಎರಡು-ಮೂರು ದಿನಗಳು ಕಳೆದರೂ ಕಡತವನ್ನು ಮೇಲಾಧಿಕಾರಿಗಳ ಗಮನಕ್ಕೆ ತಾರದೇ ತಮ್ಮ ಬಳಿಯಲ್ಲಿ ಇಟ್ಟುಕೊಳ್ಳುವಂತಹವರ ಮೇಲೆ ಗಮನಹರಿಸುವಂತೆ ಸೂಚನೆ ನೀಡಲಾಗಿದೆ. ಕಂದಾಯ ಹಣವನ್ನು ಬ್ಯಾಂಕ್‌ಗೆ ಪಾವತಿಸದೆ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿರುವುದರಿಂದ ಆಯಾಯ ದಿನದಂದು ಬರುವ ಕಂದಾಯದ ಮೊತ್ತ ಮತ್ತು ಬ್ಯಾಂಕಿಗೆ ಸಂದಾಯವಾಗಿರುವ ರಶೀತಿಯನ್ನು ಪರಿಶೀಲಿಸಿ ಪ್ರತ್ಯೇಕವಾದ ಲೆಡ್ಜರ್‌ನಲ್ಲಿ ಇಡುವಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
” ಮುಡಾದಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ನಿಧಾನವಾಗದಂತೆ ನೋಡಿಕೊಳ್ಳುವ ಜತೆಗೆ ಪಾರದರ್ಶಕ ಆಡಳಿತ ಕೊಡಬೇಕಿದೆ. ಯಾವುದೇ ತೀರ್ಮಾನವಾದರೂ ಮುಡಾ ಸಭೆಯಲ್ಲಿ ಚರ್ಚೆ ನಡೆಸಿಯೇ ಮುಂದಿನ ಕ್ರಮ ಅನುಸರಿಸಲು ಅಽಕಾರಿಗಳಿಗೆ ಹೇಳಲಾಗಿದೆ. ಹಳೆಯದರ ಬಗ್ಗೆ ತನಿಖೆಗಳು ನಡೆಯುತ್ತಿರುವುದರಿಂದ ನಾನೇನೂ ಮಾತನಾಡಲ್ಲ. ಮುಂದೆ ಎಲ್ಲವೂ ಪ್ರಾಽಕಾರದಲ್ಲಿ ಕಾನೂನು ಪ್ರಕಾರವೇ ನಡೆಯುವಂತೆ ಮಾಡಲಾಗುವುದು.”
-ಎ.ಎನ್. ರಘುನಂದನ್, ಮುಡಾ ಆಯುಕ್ತರು