ನವೀನ್ ಡಿಸೋಜ
ಮಡಿಕೇರಿ: ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕ ಮಾನವ – ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆಯನ್ನು ಘೋಷಿಸಿದೆ. ಮುಂದಿನ ೫ ವರ್ಷಗಳಲ್ಲಿ ಈ ಯೋಜನೆಯಡಿ ೧,೫೦೦ ಕೋಟಿ ರೂ.ಗಳ ನಾನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಕಾಡಾನೆ, ಹುಲಿ ಹಾವಳಿಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಗೆ ಈ ಯೋಜನೆಯಿಂದ ಸಾಕಷ್ಟು ಅನುಕೂಲಗಳಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಕೊಡಗು ಜಿಲ್ಲೆಯಲ್ಲಿ ವನ್ಯಜೀವಿ-ಮಾನವ ಸಂಘರ್ಷ ದಿನೇದಿನೆ ಹೆಚ್ಚಾಗುತ್ತಿದೆ. ಒಂದೆಡೆ ಹುಲಿ ದಾಳಿಗೆ ಜಾನುವಾರುಗಳು ಬಲಿಯಾಗುತ್ತಿದ್ದರೆ, ಮತ್ತೊಂದೆಡೆ ಕಾಡಾನೆಗಳು ನಿರಂತರ ವಾಗಿ ಕಾರ್ಮಿಕರು, ಸಾರ್ವಜನಿಕರನ್ನು ಬಲಿಪಡೆ ಯುತ್ತಿವೆ. ಈ ವರ್ಷದಲ್ಲಿ ಐದು ಮಂದಿ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿ ದ್ದಾರೆ. ಇಂತಹ ದುರ್ಘಟನೆಗಳನ್ನು ತಪ್ಪಿಸುವ ಸಲುವಾಗಿ ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮಗಳು ತುರ್ತಾಗಿ ಆಗಬೇಕಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಘೋಷಿಸಿರುವ ಮಾನವ- ವನ್ಯಪ್ರಾಣಿ ಸಂಘರ್ಷ ನಿವಾರಣಾ ಕಾರ್ಯತಂತ್ರ ಯೋಜನೆ ಮಹತ್ವ ಪಡೆದುಕೊಂಡಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿರುವ ಸ್ಥಳಗಳಲ್ಲಿ ರೈಲ್ವೇ ಬ್ಯಾರಿಕೇಡ್ ನಿರ್ಮಾಣ, ಸೋಲಾರ್ ತಂತಿ ಬೇಲಿ ಅಳವಡಿಕೆ, ಕಂದಕಗಳ ನಿರ್ಮಾಣ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆಯಿದೆ. ರಾಜ್ಯದಲ್ಲಿ ವನ್ಯಜೀವಿ ಮಾನವ -ಸಂಘರ್ಷ ತಡೆಗೆ ಮೊದಲ ವರ್ಷ ೨೬೯ ಕೋಟಿ ರೂ. ಖರ್ಚು ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇದು ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ.
ದಕ್ಷಿಣ ಕೊಡಗಿನ ಕೆಲವೆಡೆ ರೈಲ್ವೇ ಕಂಬಿ ಬ್ಯಾರಿಕೇಡ್ ನಿರ್ಮಾಣದಿಂದ ನಿರ್ದಿಷ್ಟ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಕೊಂಚ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ಸಿದ್ದಾಪುರ, ಮಾಲ್ದಾರೆ ಸೇರಿದಂತೆ ಕೆಲ ಭಾಗಗಳಲ್ಲಿ ರೈಲ್ವೇ ಕಂಬಿ ಬೇಲಿ ನಿರ್ಮಾಣಕ್ಕೆ ಬೇಡಿಕೆಯಿದೆ.
ಉತ್ತರ ಕೊಡಗಿನ ಸೋಮವಾರಪೇಟೆ ಮುಂತಾದ ಕಡೆ ಸೋಲಾರ್ ತಂತಿ ಬೇಲಿ ಮತ್ತು ಕಂದಕಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಅನುದಾನವನ್ನು ಕೋರಲಾಗಿದೆ. ಇದೀಗ ಘೋಷಣೆಯಾಗಿರುವ ಯೋಜನೆಯಲ್ಲಿ ಇಂತಹ ಕಾಮಗಾರಿಗಳಿಗೆ ಅನುದಾನ ಸಿಗಲಿದೆ.
ಬೇಲಿ, ಕಂದಕಗಳ ನಿರ್ಮಾಣದಿಂದಷ್ಟೇ ಪ್ರಾಣಿ-ಮಾನವ ಸಂಘರ್ಷಕ್ಕೆ ಪರಿಹಾರ ಸಿಗುವುದಿಲ್ಲ. ಹೀಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ಅರಣ್ಯ ಇಲಾಖೆಯಲ್ಲಿ ನೂತನ ತಂತ್ರಜ್ಞಾನದ ಅಳವಡಿಕೆಯೂ ಇದರಲ್ಲಿ ಮುಖ್ಯವಾದದ್ದು, ಈಗಾಗಲೇ ವನ್ಯಜೀವಿಗಳ ಹಾವಳಿ ಸಮಸ್ಯೆ ಇರುವ ಜಿಲ್ಲೆಗಳಲ್ಲಿ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್‌ನ್ನು ಸ್ಥಾಪಿಸಲಾಗಿದೆ.
ಈ ಕೇಂದ್ರಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಐ ಕ್ಯಾಮೆರಾ, ಡ್ರೋನ್‌ಗಳ ಬಳಕೆ ಸೇರಿದಂತೆ ಸುಧಾರಿತ ಸಾಫ್ಟ್‌ವೇರ್‌ಗಳ ಅಳವಡಿಕೆಯಿಂದ ವನ್ಯಜೀವಿಗಳ ಉಪಟಳವನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ಮುಂದಾಗಿದ್ದು, ಮುಂದಿನ ೫ ವರ್ಷಗಳ ಈ ಯೋಜನೆಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಹೆಚ್ಚಾಗಲಿದೆ. ಜತೆಗೆ ಅರಣ್ಯ ಸಿಬ್ಬಂದಿಗೆ ಬೇಕಾ ಗುವ ಸುಧಾರಿತ ಸಲಕರಣೆಗಳನ್ನು ಒದಗಿಸುವುದೂ ಈ ಯೋಜನೆಯ ಭಾಗವಾಗಿದೆ. ಅಲ್ಲದೆ ಅರಣ್ಯದಲ್ಲಿ ವನ್ಯಜೀವಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕುಡಿಯುವ ನೀರಿಗಾಗಿ ಹೊಸ ಕೆರೆಗಳ ನಿರ್ಮಾಣ, ಇರುವ ಕೆರೆಗಳ ಅಭಿವೃದ್ಧಿ, ಅರಣ್ಯದಲ್ಲೇ ಪ್ರಾಣಿಗಳಿಗೆ ಬೇಕಾದ ಆಹಾರ ಉತ್ಪಾದನೆಯಂತಹ ವೈಜ್ಞಾನಿಕ ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತದೆ. ಇದರೊಂದಿಗೆ ಕಾಡಂಚಿನ ನಿವಾಸಿಗಳು, ಕಾರ್ಮಿಕರಿಗೆ ವನ್ಯಜೀವಿ ದಾಳಿಯಿಂದ ಪಾರಾಗುವ ಬಗ್ಗೆ ಜಾಗೃತಿ, ತರಬೇತಿ ಕಾರ್ಯಕ್ರಮಗಳನ್ನೂ ಈ ಯೋಜನೆ ಒಳಗೊಂಡಿದೆ.
” ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಈಗಾಗಲೇ ಅರಣ್ಯ ಇಲಾಖೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೆಲವೆಡೆ ಸೋಲಾರ್, ರೈಲ್ವೇ ಕಂಬಿ ಬೇಲಿ ನಿರ್ಮಾಣಕ್ಕೆ ಬೇಡಿಕೆಯಿದೆ. ಸಂಘರ್ಷ ತಡೆಗೆ ಎಐ ತಂತ್ರಜ್ಞಾನ ಬಳಕೆ, ಅರಣ್ಯದಲ್ಲಿ ಪ್ರಾಣಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವುದು, ಜನರಲ್ಲಿ ಜಾಗೃತಿ ಮೂಡಿಸುವುದು ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ಒಳಗೊಂಡ ವಿಸ್ತೃತ ಯೋಜನೆ ಇದಾಗಿದೆ. ಮುಂದಿನ ೫ ವರ್ಷಗಳಲ್ಲಿ ಇದು ಹಂತಹಂತವಾಗಿ ಜಾರಿಯಾಗಲಿದೆ.”
-ಅಭಿಷೇಕ್, ಡಿಸಿಎಫ್, ಮಡಿಕೇರಿ





