ಫೋನ್ ಇನ್ ಕಾರ್ಯಕ್ರಮಲ್ಲಿ ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಿಂದ ಹಲವು ಸಲಹೆ
ಕುಮಾರ್, ಬೆಂಗಳೂರು: ರೊಬೊಟಿಕ್ಸ್ ಶಸಚಿಕಿತ್ಸೆಗೂ, ಸಾಮಾನ್ಯ ಶಸ್ತ್ರಚಿಕಿತ್ಸೆಗೂ ಇರುವ ವ್ಯಾತ್ಯಾಸ ಹಾಗೂ ಅನುಕೂಲಗಳೇನು?
ಡಾ.ರಕ್ಷಿತ್: ರೊಬೊಟಿಕ್ಸ್ ಶಸಚಿಕಿತ್ಸೆಹೆಚ್ಚು ಸೂಕ್ತವಾದದ್ದು, ಇದರಿಂದ ರಕ್ತ ವ್ಯರ್ಥವಾಗುವುದು, ನರಗಳಿಗೆ ಹಾನಿಯಾಗುವುದು ತಪ್ಪುತ್ತದೆ. ಶಸ್ತ್ರಚಿಕಿತ್ಸೆನಡೆದ ೨ ದಿನಗಳಲ್ಲಿ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ. ಸಾಮಾನ್ಯ ಶಸಚಿಕಿತ್ಸೆಗೆ ಹೋಲಿಸಿದರೆ, ರೊಬೊಟಿಕ್ ಶಸಚಿಕಿತ್ಸೆ ಸ್ವಲ್ಪ ದುಬಾರಿ. ಆದರೂ ರೋಗಿ ಗಳಿಗೆ ಅನುಕೂಲಗಳು ಹೆಚ್ಚು. ಇವತ್ತಿನ ದಿನಗಳಲ್ಲಿ ಎಲ್ಲ ರೀತಿಯ ಶಸಚಿಕಿತ್ಸೆಗಳನ್ನು ರೊಬೊಟಿಕ್ ತಂತ್ರಜ್ಞಾನದ ಮೂಲಕ ನಡೆಸಲು ಸಾಧ್ಯವಿದೆ.
ಲೋಕೇಶ್, ಎಚ್.ಡಿ.ಕೋಟೆ: ನನ್ನ ತಾಯಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಗರ್ಭಕೋಶದ ಮೇಲೆ ಗಡ್ಡೆ ಮೂಡಿದ್ದು, ಶಸಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸೂಚಿಸಿದ್ದಾರೆ. ಶಸಚಿಕಿತ್ಸೆ ಅನಿವಾರ್ಯವೇ?
ಡಾ.ರಕ್ಷಿತ್: ಗರ್ಭಕೋಶದ ಮೇಲೆ ಫೈಬ್ರಾಯಡ್ ಗಡ್ಡೆ, ಇನ್ನಿತರ ಗಡ್ಡೆಗಳು ಕಾಣಿಸಿಕೊಂಡರೆ, ಶಸ್ತ್ರಚಿಕಿತ್ಸೆಯೇ ಹೆಚ್ಚು ಸೂಕ್ತ. ಯಾವ ರೀತಿ ಕ್ಯಾನ್ಸರ್ ಎಂಬುದನ್ನು ಪತ್ತೆ ಹಚ್ಚಬೇಕಾಗುತ್ತದೆ. ಬಳಿಕ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬುದನ್ನು ಕಂಡುಕೊಳ್ಳಲು ಸಾಧ್ಯ. ಇಂತಹ ಗಡ್ಡೆಗಳು ಕಾಣಿಸಿಕೊಂಡರೆ ಅದನ್ನು ತೆಗೆಸಿಕೊಳ್ಳುವುದು ಉತ್ತಮ.
ಸಿತಾರಾ, ಮೈಸೂರು: ಗರ್ಭಕೋಶದ ಮೇಲಿನ ಗುಳ್ಳೆಗಳು ಕ್ಯಾನ್ಸರ್‌ಕಾರಕವೇ?
ಡಾ.ರಕ್ಷಿತ್: ಗರ್ಭಕೋಶದ ಮೇಲಿನ ಗುಳ್ಳೆಗಳ ಬಗ್ಗೆ ನಿರ್ಲಕ್ಷ್ಯವಹಿಸಿದರೆ, ಕ್ಯಾನ್ಸರ್‌ಗೆ ತಿರುಗುವಸಾಧ್ಯತೆ ಇರುತ್ತದೆ. ಹಾಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಶಸಚಿಕಿತ್ಸೆ ಅನಿವಾರ್ಯವಿದ್ದರೆ, ಗರ್ಭಕೋಶಕ್ಕೆ ರೊಬೊಟಿಕ್ ಹಿಸ್ಟ್ರಕ್ಟಮಿ ಶಸಚಿಕಿತ್ಸೆ ಸೂಕ್ತ. ಇದರಿಂದ ಒಂದು ಅಥವಾ ಎರಡು ದಿನಗಳಲ್ಲಿ ಗುಣಮುಖರಾಗಬಹುದು.
ಚಂದ್ರಶೇಖರ್, ಮೈಸೂರು: ಇವತ್ತಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿದ್ದು, ಹೆಣ್ಣು ಮಕ್ಕಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಹೇಗೆ?
ಡಾ.ರಕ್ಷಿತ್: ಭಾರತ್ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಸ್ತನ ಕ್ಯಾನ್ಸರ್ ಕುರಿತಾಗಿ ನಗರದ ಕುವೆಂಪುನಗರದಲ್ಲಿರುವ ಭಾರತ್ ಕ್ಯಾನ್ಸರ್ ಆಸ್ಪತ್ರೆ ಡೇ ಕೇರ್ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯ರಿಂದ ರಾತ್ರಿ ೯ ಗಂಟೆವರೆಗೆ ಉಚಿತವಾಗಿ ಸಲಹೆ, ಸೂಚನೆಗಳನ್ನು ನೀಡಲಾಗುತ್ತಿದೆ. ಯಾವುದೇ ಮುಜುಗರವಿಲ್ಲದೇ ಮಾಹಿತಿ ಪಡೆಯಬಹುದು.
ಸ್ತನ ಕ್ಯಾನ್ಸರ್ ಕುರಿತಾಗಿ ಕೇಂದ್ರ ಸರ್ಕಾರ ಪಿಂಕಥಾನ್ ಯೋಜನೆ ರೂಪಿಸಿದೆ. ಅದರ ಜತೆಗೆ ಆಸ್ಪತ್ರೆ ಕೈಜೋಡಿಸುತ್ತಿದೆ. ಅಲ್ಲದೇ ನಾರಿ ಸ್ವಾಸ್ಥ್ಯ ಯೋಜನೆಯನ್ನು ರೂಪಿಸಿ ಸ್ತನ ಕ್ಯಾನ್ಸರ್ ಇರುವ ಬಡ ಮಹಿಳೆಯರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯರಲ್ಲೇ ಹೆಚ್ಚು ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಮಹಿಳೆಯರಿಗಾಗಿ ಪ್ರತಿವರ್ಷ ಸ್ಕ್ರೀನಿಂಗ್ ಕಾರ್ಯಕ್ರಮ ನಡೆಸಲಾಗುತ್ತದೆ. ಮ್ಯಾಮೊಗ್ರಾಮ್, ಪ್ಯಾಸ್ಮಿಯರ್, ಅಲ್ಟ್ರಾಸೌಂಡ್ ಕ್ಲಿನಿಕಲ್ ಪರೀಕ್ಷೆಗಳನ್ನು ಪ್ರತಿ ವರ್ಷ ಮಾಡಿಸಿಕೊಳ್ಳುವುದು ಉತ್ತಮ.
ನಾಗೇಂದ್ರ, ಮೈಸೂರು: ಕ್ಯಾನ್ಸರ್ ಹರಡಲು ಕಾರಣವೇನು? ಬಾರದಂತೆ ತಡೆಯಲು ಕ್ರಮ ಹೇಗೆ?
ಡಾ.ರಕ್ಷಿತ್: ಕ್ಯಾನ್ಸರ್ ರೋಗ ಹೆಚ್ಚಾಗಲು ಜೀವನ ಶೈಲಿ, ಆಹಾರ ಪದ್ಧತಿ, ಹಾರ್ಮೋನ್ ಅಸಮತೋಲನ, ಅನುವಂಶೀಯತೆ, ದೈಹಿಕ ಹಾಗೂ ಮಾನಸಿಕ ಒತ್ತಡ, ಚಟುವಟಿಕೆ ಕೊರತೆ ಕಾರಣ. ಪ್ರತಿದಿನ ಒಂದು ಗಂಟೆ ಕಾಲ ದೈಹಿಕ ಶ್ರಮದಿಂದ ಶೇ.೨೦ರಷ್ಟು ಕ್ಯಾನ್ಸರ್ ತಡೆಯಬಹುದು. ಮಾನಸಿಕ ರೋಗ್ಯಕ್ಕಾಗಿ ಧ್ಯಾನ ಮಾಡುವುದು, ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವುದು, ಆಹಾರ ಕ್ರಮ ಉತ್ತಮವಾಗಿಟ್ಟುಕೊಳ್ಳವುದು ಮುಖ್ಯ. ತಂಬಾಕು, ಮದ್ಯಪಾನವನ ನಿರ್ಬಂಧಿಸಬೇಕು.
ಅನುಪಮಾ, ಬೆಂಗಳೂರು: ಕೆಲವೊಮ್ಮೆ ಯಾವುದೇ ಲಕ್ಷಣಗಳಿಲ್ಲದೇ ಕ್ಯಾನ್ಸರ್ ಕಾಯಿಲೆ ಅಂತಿಮ ಘಟ್ಟಕ್ಕೆ ತಲುಪಿರುತ್ತದೆ. ಕ್ಯಾನ್ಸರ್ ಪತ್ತೆ ಹಚ್ಚುವ ವಿಧಾನ ಹೇಗೆ?
ಡಾ.ರೆಜಿಲ್ ರಂಜನ್: ಕೆಲವು ವಿಧದ ಕ್ಯಾನ್ಸರ್‌ಗಳಲ್ಲಿ ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ. ನಿರಂತರ ಅನಾರೋಗ್ಯ, ಜ್ವರ, ದೇಹದಲ್ಲಿ ದಿಢೀರನೇ ಬದಲಾವಣೆ, ಯಾವುದಾರೂ ಗಡ್ಡೆ ಕಾಣಿಸಿಕೊಂಡರೆ ಕೂಡಲೇ ವೈದ್ಯರ ಸಲಹೆ ಪಡೆಯಬೇಕು. ಕೆಲವು ಬಗೆಯ ಕ್ಯಾನ್ಸರ್ ಅನುವಂಶಿಯತೆಯಿಂದ ಕಾಣಿಸಿಕೊಳ್ಳುತ್ತದೆ. ಇದನ್ನು ಪತ್ತೆಹಚ್ಚಲು ಅನುವಂಶಿಯ ಸ್ಕ್ರೀನಿಂಗ್ ಮಾಡಿಸಬೇಕು.
ಪ್ರೀತಿ, ಮೈಸೂರು: ಎಲ್ಲ ರೀತಿಯ ಕ್ಯಾನ್ಸರ್‌ಗಳಿಗೆ ಮುಂಜಾಗ್ರತಾ ವಾಕ್ಸಿನೇಷನ್ ಇದೆಯಾ?
ಡಾ.ರೆಜಿಲ್ ರಂಜನ್: ಗರ್ಭಕೋಶ ಕ್ಯಾನ್ಸರ್, ಲಿವರ್ ಕ್ಯಾನ್ಸರ್‌ಗಳಿಗೆ ಸೇರಿದಂತೆ ಮೂರು ನಾಲ್ಕು ಕ್ಯಾನ್ಸರ್‌ಗಳಿಗೆ ಮುಂಜಾಗ್ರತಾ ವಾಕ್ಸಿನೇಷನ್‌ಗಳಿವೆ.
ವಿನುತಾ, ಪಿರಿಯಾಪಟ್ಟಣ: ನನ್ನ ಪರಿಚಿತರೊಬ್ಬರಿಗೆ ಯಾವುದೇ ಅನಾರೋಗ್ಯ ಸಮಸ್ಯೆಗಳಿಲ್ಲದೆ ಏಕಾಏಕಿ ಸ್ತನ ಕ್ಯಾನ್ಸರ್ ಕಾಣಿಸಿಕೊಂಡಿದೆ. ಇದಕ್ಕೆ ಕಾರಣವೇನು?
ಡಾ.ರಕ್ಷಿತ್: ಇವತ್ತಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಹೆಚ್ಚುತ್ತಿದ್ದು, ಇದಕ್ಕೆ ಯಾವುದೇ ಲಕ್ಷಣಗಳಿರುವುದಲ್ಲ. ಸ್ತನದಲ್ಲಿ ಗಂಟುಗಳು ಕಾಣಿಸಿಕೊಂಡರೆ ಕೆಲವು ಸಂದರ್ಭದಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಇಂತಹ ವೇಳೆ ಕೊನೆಯ ಹಂತದವರೆಗೂ ಕಾಯಿಲೆ ಪತ್ತೆಯಾಗುವುದಿಲ್ಲ. ೪೦ ವರ್ಷ ಮೇಲ್ಪಟ್ಟ ಮಹಿಳೆಯರು ಕಡ್ಡಾಯವಾಗಿ ಸ್ಕ್ರೀನಿಂಗ್ ಪರೀಕ್ಷೆ ಮಾಡಿಸಿಕೊಂಡರೆ ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಗುಣಪಡಿಸಬಹುದು.





