ರಸ್ತೆ ಬದಿಯೇ ಕಸದ ವಾಹನ ನಿಲುಗಡೆಗೊಳಿಸಬೇಕಾದ ಪರಿಸ್ಥಿತಿ; ದುರ್ವಾಸನೆಯಿಂದ ಸಾರ್ವಜನಿಕರಿಕೆ ಕಿರಿಕಿರಿ
ಕೃಷ್ಣ ಸಿದ್ದಾಪುರ
ಸಿದ್ದಾಪುರ: ಪಟ್ಟಣದಲ್ಲಿ ಕಸ ವಿಲೇವಾರಿ ಸಮಸ್ಯೆ ತಲೆ ದೋರಿದ್ದು, ವಿಲೇವಾರಿಗೆ ಜಾಗವಿಲ್ಲದೆ ವಾಹನದಲ್ಲೆ ತುಂಬಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ನಾಲ್ವರು ಸದಸ್ಯರನ್ನು ಅನುಭವಿ ಹೊಂದಿರುವ ಸಿದ್ದಾಪುರದ ಒಂದನೇ ವಾರ್ಡ್‌ನ ಮೈಸೂರು ರಸ್ತೆಯ ಸ್ವರ್ಣಮಾಲ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಪ್ರತಿ ನಿತ್ಯ ಸಂಜೆ ಪಂಚಾಯಿತಿಯ ಕಸ ತುಂಬಿದ ಟ್ರಾಕ್ಟರ್‌ಅನ್ನು ತಂದು ನಿಲ್ಲಿಸಲಾಗುತ್ತದೆ. ಪಟ್ಟಣದಲ್ಲಿ ಸಂಚರಿಸಿ ಸಂಗ್ರಹಿಸಿದ ಕಸವನ್ನು ವಿಲೇವಾರಿ ಮಾಡಲು ಜಾಗವಿಲ್ಲದೆ ಈ ಪ್ರದೇಶದಲ್ಲಿ ತಂದು ನಿಲ್ಲಿಸಲಾಗುತ್ತಿದೆ.
ಈ ರೀತಿ ಕಸದ ವಾಹನ ನಿಲ್ಲಿಸುತ್ತಿರುವುದರಿಂದ ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು ಭಯದಲ್ಲಿ ಸಂಚರಿಸ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ಗ್ರಾಮ ಪಂಚಾಯಿತಿ ಸದಸ್ಯನ ಮಗನ ಮೇಲೆಯೇ ಬೀದಿ ನಾಯಿ ದಾಳಿ ನಡೆಸಿದ್ದರೂ ಪಂಚಾಯಿತಿ ಯಾವುದೇ ಕ್ರಮ ಕೈಗೊಂಡಿಲ್ಲ ವೆಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾಹನದಲ್ಲಿನ ಕೊಳೆತ ಕಸದಿಂದ ಇಡೀ ವಾತಾವರಣವೇ ದುರ್ನಾತ ಬೀರುತ್ತಿದ್ದು, ಜನ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ಕಪಕ್ಕದ ಮನೆಯವರೂ ಇದರಿಂದ ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಕಸ ತುಂಬಿದ ವಾಹನ ನಿಲ್ಲಿಸುವ ಸ್ಥಳದಲ್ಲಿದ್ದ ಸೋಲಾರ್ ಬೀದಿ ದೀಪ ಆಕಾಶ ನೋಡುತ್ತಿದೆ. ಇದರಿಂದ ಸ್ಥಳೀಯರು ಬೀದಿನಾಯಿ ಕಾಟದ ನಡುವೆಯೂ ಕತ್ತಲಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಸ ತುಂಬಿದ ವಾಹನವನ್ನೂ ತೆರವುಗೊಳಿಸುತ್ತಿಲ್ಲ. ಮತ್ತೊಂದೆಡೆ ಬೀದಿ ದೀಪವನ್ನು ಅಳವಡಿಸುತ್ತಿಲ್ಲ. ಕಸ ತುಂಬಿರುವ ವಾಹನ ಸಾರ್ವಜನಿಕರಿಗೆ ತಿಳಿಯಬಾರದೆಂದು ಗ್ರಾಮ ಪಂಚಾಯಿತಿಯೇ ಬೀದಿ ದೀಪವನ್ನು ಆಕಾಶಕ್ಕೆ ಮುಖ ಮಾಡಿದೆ ಎಂದು ಸ್ಥಳೀಯ ನಿವಾಸಿಗಳು ಟೀಕಿಸಿದ್ದಾರೆ. ಕಸ ತುಂಬಿದ ವಾಹನವನ್ನು ಈ ಪ್ರದೇಶದಲ್ಲಿ ನಿಲುಗಡೆಗೊಳಿಸಬಾರದು, ಬೀದಿದೀಪದ ದುರಸ್ತಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿಗಳ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.