Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಂಜನಗೂಡು: ಸೋರುತಿಹುದು ಕಲಾ ಮಂಟಪ

• ಶ್ರೀಧರ್ ಆರ್.ಭಟ್

ನಂಜನಗೂಡು: ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿ ಉದ್ಘಾಟನೆಗಾಗಿ ಕಾದಿರುವ ಸರ್ಕಾರಿ ಶಾಲೆಯ ಕಲಾಮಂಟಪದ ಕಾಮಗಾರಿಯ ಬಣ್ಣವನ್ನು ಆಷಾಢದ ಸೋನೆ ಮಳೆ ಬಟ್ಟಬಯಲಾಗಿಸಿದೆ.

ಒಂದು ಶತಮಾನದ ಇತಿಹಾಸ ಹೊಂದಿರುವ ನಂಜನಗೂಡು ನಗರದ ಮಹಾತ್ಮ ಗಾಂಧಿ ರಸ್ತೆಯ ರಥ ಬೀದಿಯಲ್ಲಿರುವ ದಳವಾಯಿ ಶಾಲಾ ಆವರಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕಾಗಿ ನಿರ್ಮಿಸಿರುವ ಕಲಾ ಮಂಟಪ ಉದ್ಘಾಟನೆಗೂ ಮುನ್ನವೇ ಸೋರಲಾರಂಭಿಸಿದೆ.

ನಗರದ ದಿಗ್ಗಜರು ವ್ಯಾಸಂಗ ಮಾಡಿದ ಈ ಶಾಲಾ ಆವರಣದಲ್ಲಿ ಕಲಾ ಮಂಟಪ ಎನ್ನುವ ಬಹುದಿನಗಳ ಬೇಡಿಕೆಯನ್ನು ನಗರಸಭೆಯ 14ನೇ ಹಣಕಾಸು ನಿಧಿಯಲ್ಲಿ ಪೂರೈಸಬೇಕು ಎಂಬ ಅಭಿಲಾಷೆಯೊಂದಿಗೆ ಕಳೆದ ವರ್ಷ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಹಠಕ್ಕೆ ಬಿದ್ದ ಮಹಾನುಭಾವರೊಬ್ಬರು ಬರೋಬ್ಬರಿ 3.50 ಲಕ್ಷ ರೂ. ರಿಯಾಯಿತಿ ಘೋಷಿಸಿ ಗುತ್ತಿಗೆಗೆ ಪಡೆದುಕೊಂಡಿದ್ದರು. ಈ ಕಾಮಗಾರಿ ಪಡೆದ ಗುತ್ತಿಗೆದಾರರು 6 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಿದ್ದ ಕಾಮಗಾರಿಗೆ ಒಂದು ವರ್ಷ ಸಮಯ ತೆಗೆದುಕೊಂಡು ಸುಂದರವಾದ ಕಲಾ ಮಂಟಪವನ್ನು ನಿರ್ಮಿಸಿ ಅದಕ್ಕೆ ಸುಣ್ಣ-ಬಣ್ಣ ಬಳಿದು ಇನ್ನೇನು ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಿದ್ದರು.

ಆ ವೇಳೆಗೆ ಚುನಾವಣೆ ಘೋಷಣೆಯಾಯಿತು. ಉದ್ಘಾಟನೆಯ ದಿನಾಂಕ ನನೆಗುದಿಗೆ ಬಿದ್ದು ಮುಂದಕ್ಕೆ ಹೋಯಿತು. ಲೋಕಾರ್ಪಣೆಯಾಗುವ ಮೊದಲೇ ಆಷಾಢದ ಸೋನೆ ಮಳೆ ಆರಂಭವಾಗಿ, ಮಳೆಗೆ ಸಿಲುಕಿದ ಕಟ್ಟಡದಿಂದ ಮಳೆ ನೀರು ಸೋರಲಾರಂಭಿಸಿ 3.50 ಲಕ್ಷ ರೂ. ಬಿಟ್ಟು ಗುತ್ತಿಗೆ ಪಡೆದ ಕಾಮಗಾರಿಯ ನಿಜ ಬಣ್ಣ ಬಯಲು ಮಾಡಿತು.

ನೂತನ ಕಲಾಮಂಟಪ ಸೋರುತ್ತಿರುವುದನ್ನು ಕಂಡ ಶಿಕ್ಷಕರು ಹಾಗೂ ಮಕ್ಕಳು ವಿಚಲಿತರಾಗಿ ನಗರಸಭೆಯತ್ತ ದೌಡಾಯಿಸಿ ಮಂಟಪದ ಸ್ಥಿತಿಯನ್ನು ಅಲ್ಲಿನ ಅಧಿಕಾರಿಗಳಿಗೆ ವಿವರಿಸಿದರು.

ಕೋಟ್ಸ್‌))

ಶೇ.35ರಷ್ಟನ್ನು ಬಿಟ್ಟು ಪಡೆದ 10 ಲಕ್ಷ ರೂ. ಟೆಂಡರ್‌ನಲ್ಲಿ ಶೇ.40ರಷ್ಟು ಲಂಚದ ವ್ಯವಹಾರ ನಡೆದಿದೆ ಎಂದು ತಿಳಿದರೂ ಶೇ.25ರಷ್ಟು ಹಣದಲ್ಲಿ ಕಾಮಗಾರಿ ಮಾಡಿದರೆ ಆ ಕಾಮಗಾರಿಯ ಗುಣಮಟ್ಟ ಹೇಗಿರಲು ಸಾಧ್ಯ ಎಂಬುದಕ್ಕೆ ದಳವಾಯಿ ಶಾಲೆಯ ಕಲಾಮಂಟಪವೇ ಸಾಕ್ಷಿಯಾಗಿದೆ. ನಮ್ಮ ಆಡಳಿತದ ಭ್ರಷ್ಟಾಚಾರ ಶಾಲೆಯನ್ನೂ ಬಿಡದಿರುವುದು ವಿಷಾದನೀಯ.
-ಚಂದ್ರಶೇಖರ್, ಶಾಲೆಯ ಹಳೆಯ ವಿದ್ಯಾರ್ಥಿ, ಯುವ ಬ್ರಿಗೇಡ್ ನಾಯಕ

ಕಟ್ಟಡ ಸೋರುತ್ತಿರುವ ವಿಷಯ ಬೆಳಕಿಗೆ ಬಂದ ತಕ್ಷಣ ಅದನ್ನು ದುರಸ್ತಿಪಡಿಸಲು ಗುತ್ತಿಗೆದಾರರಿಗೆ ಈಗಾಗಲೆ ಸೂಚಿಸಲಾಗಿದೆ. ಕಟ್ಟಡ ಸೋರುವುದನ್ನು ಸರಿಪಡಿಸಿದ ನಂತರವೇ ಕಲಾ ಮಂಟಪವನ್ನು ಲೋಕಾರ್ಪಣೆ ಮಾಡಲಾಗುತ್ತದೆ. ಆವರೆಗೂ ಉದ್ಘಾಟನೆಯೂ ಇಲ್ಲ ಎಂದು ಹೇಳಲಾಗಿದ್ದು, ಅವರು ವಾರದಲ್ಲಿ ದುರಸ್ತಿ ಕಾರ್ಯ ಆರಂಭಿಸಿ ಪೂರ್ಣಗೊಳಿಸಿದ ನಂತರ ಮತ್ತೆ ನೀರು ಸುರಿಯುತ್ತಿದೆಯೇ ಎಂಬುದನ್ನು ಪರೀಕ್ಷಿಸಿದ ನಂತರವೇ ಬಿಲ್ ಪಾವತಿ ಮಾಡಲಾಗುತ್ತದೆ.
-ಕುಮಾರ್‌, ಇಂಜಿನಿಯರ್‌, ನಗರಸಭೆ

ಸೋರುತ್ತಿರುವ ಕಲಾಮಂಟಪದ ಕುರಿತು ಈಗಾಗಲೇ ನಗರಸಭೆ ಆಯುಕ್ತ ನಂಜುಂಡಸ್ವಾಮಿಯವರಿಗೆ ತಿಳಿಸಿ, ಕಾಮಗಾರಿಯ ಹಣ ತಡೆಹಿಡಿಯುವಂತೆ ಲಿಖಿತವಾಗಿ ದೂರು ನೀಡಲಾಗಿದೆ.
-ಯೋಗಿ, ನಗರಸಭಾ ಸದಸ್ಯ

Tags: