ಮೈಸೂರಿನ ಕುವೆಂಪುನಗರದ ಕೆ.ಎಚ್.ಬಿ.ಕಾಲೋನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ನೀರುಗಂಟಿಗಳು ತಮಗಿಷ್ಟ ಬಂದ ಸಮಯಕ್ಕೆ ನೀರು ಬಿಡುತ್ತಿರುವುದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆ ಉದ್ಭವಿಸಿದೆ.
ಇಲ್ಲಿನ ನಿವಾಸಿಗಳು ಬೆಳಿಗ್ಗೆ 10 ಗಂಟೆಯ ನಂತರ ಕೆಲಸಕ್ಕೆಂದು ತೆರಳಿ ಬಿಡುತ್ತಾರೆ. ಅಷ್ಟರಲ್ಲಿಯೇ ಮನೆಗೆಲಸಗಳನ್ನು ಮಾಡಿ ಮುಗಿಸಬೇಕು. ಇಲ್ಲವೇ ಸಂಜೆ ಬಂದು ಮಾಡಬೇಕು. ಆದರೆ ನೀರುಗಂಟಿಗಳ ತಮಗಿಷ್ಟ ಬಂದಸಮಯದಲ್ಲಿ ನೀರುಬಿಡುವುದರಿಂದಸಮಯಹೊಂದಿಸಿಕೊಂಡು ನೀರು ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಯಾವ ಸಮಯಕ್ಕೆ ನೀರು ಬರಬಹುದು ಎಂಬ ಗೊಂದಲ ಜನರಲ್ಲಿ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ಬಳಿಕ ಒಂದೆರಡು ದಿನಗಳು ಸರಿಯಾದ ಸಮಯಕ್ಕೆ ನೀರು ಬಿಡುತ್ತಾರೆ ಅಷ್ಟೇ. ಇನ್ನು ಈ ಬಡಾವಣೆಯಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದ್ದು, ಇಲ್ಲಿನ ಪಾರ್ಕ್‌ಗಳ ವಾತಾವರಣವೇ ಹಾಳಾಗಿದೆ. ಅಲ್ಲದೆ ಸರಿಯಾದ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಸಂಜೆಯಾಗುತ್ತಲೇ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟವರು ನಮ್ಮ ಬಡಾವಣೆಯತ್ತ ಗಮನಹರಿಸಿ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.
-ಶಶಿಕುಮಾರ್, ಕುವೆಂಪುನಗರ, ಮೈಸೂರು