ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕರಾದ ಸ್ಟ್ಯಾನ್ಲಿ-ಪರಶು ಹಕ್ಕೊತ್ತಾಯ
ಚಿರಂಜೀವಿ ಸಿ. ಹುಲ್ಲಹಳ್ಳಿ
ಎಲ್ಲ ಅತ್ಯಾಚಾರ, ಕೊಲೆ ಪ್ರಕರಣಗಳ ತನಿಖೆಯೂ ಒಂದೇ ತಂಡದಿಂದ ಆಗಲಿ
ಧರ್ಮಸ್ಥಳ ಪ್ರಕರಣ ತನಿಖೆಗೆ ಎಸ್‌ಐಟಿ ರಚನೆ ಸೂಕ್ತ ನಿರ್ಧಾರ
ಮೈಸೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಸೌಜನ್ಯ ಎಂಬ ೧೨ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಪ್ರಕರಣದ ವಿರುದ್ಧ ಸುಮಾರು ಒಂದು ವರ್ಷದ ಹಿಂದೆ ಪ್ರತಿಭಟನೆಗಳು, ಸಾಮಾಜಿಕ ಜಾಲತಾಣದಲ್ಲಿ ವಿಶ್ಲೇಷಣೆ ರಾಜ್ಯಾದ್ಯಂತ ಗಮನ ಸೆಳೆದಿದ್ದವು.
ಈ ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳ ನೆರಳು ಇದೆ ಎಂಬ ಆರೋಪ ಕೇಳಿ ಬಂದಿತ್ತು. ಸುಮಾರು ಒಂದು ವರ್ಷದ ನಂತರ, ಅಂದರೆ ಇತ್ತೀಚೆಗೆ ಸೌಜನ್ಯ ಒಬ್ಬಳೇ ದುರಂತಕ್ಕೀಡಾಗಿಲ್ಲ, ಇಂತಹ ನೂರಾರು ಪ್ರಕರಣಗಳು ನಡೆದಿವೆ ಎಂಬಂತಹ ಅನುಮಾನ ಮೂಡಿಸುವ ಬೆಳವಣಿಗೆ ನಡೆಯಿತು. ಆ ಮೂಲಕ ಲಕ್ಷೋಪಲಕ್ಷ ಮುಗ್ಧ ಜನರು, ಅದರಲ್ಲಿಯೂ ಅಮಾಯಕ ಮಹಿಳೆಯರ ಮನಸ್ಸುಗಳು ಘಾಸಿಗೊಂಡಿವೆ. ಇಂತಹ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ತಂಡವನ್ನು ರಚಿಸಿದೆ. ಅದರಿಂದ ರಾಜ್ಯದಲ್ಲಿ ಸಂಚಲನ ಮೂಡಿದೆ.
ಧರ್ಮಸ್ಥಳದಲ್ಲಿ ನಾಪತ್ತೆಯಾಗಿರುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಪ್ರಕರಣಗಳು, ಅಸ್ವಾಭಾವಿಕವಾದ ಸಾವು ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಒಳ ಸುಳಿವು ಬಹಳ ನಿಗೂಢವಾಗಿದೆ ಎನ್ನುತ್ತಾರೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಹಾಗೂ ಪರಶು ಅವರು. ಬೇರೆಯವರ ಸೂಚನೆ ಮೇರೆಗೆ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ ನಂತರ, ಧರ್ಮಸ್ಥಳ ಪ್ರಕರಣಗಳನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂಬುದಾಗಿ ರಾಜ್ಯಾದ್ಯಂತ ಗಂಭೀರ ಕೂಗು ಎದ್ದಿತು. ನಿವೃತ್ತ ನ್ಯಾಯಾಧೀಶರೊಬ್ಬರು ಪತ್ರಿಕಾಗೋಷ್ಠಿ ನಡೆಸಿ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು. ಇದರ ಜೊತೆಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರ ಮೂಲಕ ಎಸ್‌ಐಟಿ ತನಿಖೆಗೆ ಶಿಫಾರಸು ಮಾಡಿತು.
ಈ ಹಿನ್ನೆಲೆಯಲ್ಲಿ, ಪ್ರಕರಣದ ವಿರುದ್ಧ ಹೋರಾಟ ನಡೆಸಿರುವ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶು ಅವರು ತಮ್ಮ ಅಭಿಪ್ರಾಯಗಳನ್ನು ‘ಆಂದೋಲನ’ ದೊಂದಿಗೆ ಹಂಚಿಕೊಂಡಿದ್ದು, ಅದರ ಪೂರ್ಣಪಾಠ ಇಲ್ಲಿದೆ. ಸೌಜನ್ಯಳ ಪ್ರಕರಣದ ನೆರಳಿನಲ್ಲಿ ಧರ್ಮಸ್ಥಳದಲ್ಲಿ ನಡೆದಿರುವ ನಾಪತ್ತೆಯಾಗಿರುವ ಮಹಿಳೆಯರು, ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ಒಡನಾಡಿ ಹೋರಾಟ ಮಾಡಿ ಕೊಂಡು ಬಂದಿದೆ. ಜೊತೆಗೆ ನಿರಂತರವಾಗಿ ಸರ್ಕಾರದೊಂದಿಗೆ ಪ್ರಕರಣದ ಕುರಿತು ಪತ್ರ ವ್ಯವಹಾರ ನಡೆಸಲಾಗುತ್ತಿದೆ.
ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಮುಖ್ಯಮಂತ್ರಿ ಆದಿಯಾಗಿ, ಸಾಂವಿಧಾನಿಕ ಸಂಸ್ಥೆಗಳ ಮೊರೆ ಹೋಗಿ ಸತತ ದೂರುಗಳನ್ನು ನೀಡುವ ಮೂಲಕ ಈ ಪ್ರಕರಣದ ಹೋರಾಟವನ್ನು ಗಟ್ಟಿಗೊಳಿಸಲು ಪ್ರಯತ್ನ ಮಾಡಿದ್ದೇವೆ. ಇದನ್ನು ರಾಜ್ಯ ಮಟ್ಟದಲ್ಲಿ ತೆಗೆದುಕೊಂಡು ಹೋಗಲು ಒಡನಾಡಿಯು ಕೊಂಡಿಯಾಗಿ ಕೆಲಸ ಮಾಡಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರು ಒಡನಾಡಿ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಸಂಬಂಧಪಟ್ಟ ಕಡತಗಳನ್ನು ಅವರಿಗೆ ನೀಡಲಾಯಿತು. ಜೊತೆಗೆ ಇದೀಗ ಸಾಕ್ಷಿದಾರರನೊಬ್ಬ ತಾನಾಗಿಯೇ ಬಂದು ದೂರು ಕೊಟ್ಟಿರುವುದರಿಂದ ಹೆಚ್ಚಿನ ತನಿಖೆಗೆ ಶಿಫಾರಸು ಮಾಡುವಂತೆ ಮನವಿ ಮಾಡಲಾಯಿತು. ನಮ್ಮ ಮನವಿಯನ್ನು ಮುಕ್ತವಾಗಿ ಸ್ವೀಕರಿಸಿದ ನಾಗಲಕ್ಷ್ಮೀ ಅವರು, ಸರ್ಕಾರಕ್ಕೆ ಪತ್ರ ಬರೆದು ಎಸ್‌ಐಟಿ ರಚನೆಗೆ ಆಗ್ರಹಿಸಿದರು.
ಎಸ್‌ಐಟಿ ರಚನೆಯಾಯಿತು ಎಂದು ಹೋರಾಟಗಾರರು ಸುಮ್ಮನಿರಬಾರದು. ೧೯೮೦ರಿಂದ ಭೇದಿಸಲಾಗದ ಅಪರಾಧಗಳನ್ನು ತನಿಖೆ ನಡೆಸಲು ರಚನೆಯಾದ ಎಸ್‌ಐಟಿ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಹೀಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ)ದಲ್ಲಿರುವ ಅಷ್ಟೂ ಅಧಿಕಾರಿಗಳು ಅನುಭವಿಗಳು, ಪರಿಣತರೇ ಆಗಿರಬೇಕು. ಧರ್ಮಸ್ಥಳದಲ್ಲಿ ಅತ್ಯಾಚಾರ, ಕೊಲೆ, ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣಗಳು ಇಂದು- ನಿನ್ನೆಯವಲ್ಲ. ಸುಮಾರು ೫೦ ವರ್ಷಗಳಿಂದಲೂ ನಿಗೂಢವಾಗಿ ಅಪರಾಧಗಳು ನಡೆದಿವೆ. ಹೇಮಲತಾ, ವೇದವಲ್ಲಿ, ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್, ಮಾವುತ ನಾರಾಯಣ ಸಫಲ್ಯ ಮತ್ತು ಸೋದರಿ ಯಮುನಾ ಸಫಲ್ಯ ಜೋಡಿ ಕೊಲೆ. ಕೇರಳದಿಂದ ಕೃಷಿ ಕೆಲಸಕ್ಕೆ ಬಂದ ಕ್ರಿಶ್ಚಿಯನ್ ಕುಟುಂಬದ ಹತ್ಯೆಯ ಪ್ರಕರಣದಲ್ಲಿ ಇಲ್ಲಿಯವರೆಗೂ ಅಪರಾಧಿಗಳ ಸುಳಿವೂ ಇಲ್ಲವಾಗಿದೆ. ಯಾವ ಕಾರಣಕ್ಕೆ ಈ ಕೊಲೆಗಳು ನಡೆದಿವೆ ಎಂಬುದು ಇಲ್ಲಿಯವರೆಗೂ ಚಿದಂಬರ ರಹಸ್ಯವಾಗಿ ಉಳಿದು ಕೊಂಡಿವೆ.
ಧರ್ಮಸ್ಥಳದಲ್ಲಿ ನಡೆದಿವೆ ಎನ್ನಲಾದ ಮಹಿಳೆಯರು, ಹೆಣ್ಣುಮಕ್ಕಳ ಕೊಲೆಗಳು ಕೇವಲ ದೈಹಿಕ ವಾಂಛೆಯ ವಿಚಾರಕ್ಕೆ ಸಂಬಂಧಿಸಿದವಲ್ಲ. ಇವುಗಳ ಹಿಂದೆ ಆಸ್ತಿ ಕಬಳಿಕೆ, ರಾಜಕೀಯ, ಕೋಮು ವೈಷಮ್ಯವೂ ಇರ ಬಹುದು ಎಂಬ ಅನುಮಾನಗಳು ದಟ್ಟವಾಗಿವೆ. ಸಾಕ್ಷಿಗಳಿಗೆ ಭದ್ರತೆ ಒದಗಿಸಬೇಕು ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಹತ್ಯೆಗಳಲ್ಲಿ ಆರೋಪಿಗಳೇ ಇಲ್ಲ. ಏಕೆಂದರೆ ಕಣ್ಣಾರೇ ಕಂಡವರೂ, ವಿಷಯ ತಿಳಿದವರು ಕೂಡ ಇಲ್ಲಿಯವರೆಗೂ ಸಾಕ್ಷಿ ಹೇಳಿಲ್ಲ. ಇದಕ್ಕೆ ಜೀವ ಭಯ ಕಾರಣ ಇರಬಹುದು. ಹೀಗಾಗಿ ಇನ್ನು ಮುಂದೆ ಸಿಗುವ ಸಾಕ್ಷಿಗಳಿಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಸಾಕ್ಷಿದಾರರ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕು. ಜೀವ ಭದ್ರತೆಯ ಜೊತೆಗೆ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನೂ ಒದಗಿಸಬೇಕು. ಸರ್ಕಾರದಿಂದ ಇದಕ್ಕೆ ಕೊರತೆ ಎದುರಾಗಬಾರದು.
ಸಾಕ್ಷಿದಾರರಿಗೆ ಬಹುಮಾನ ಘೋಷಿಸಿ: ಕಾಡುಗಳ್ಳ ವೀರಪ್ಪನ್ ಹಿಡಿದುಕೊಟ್ಟವರಿಗೆ ೧೦ ಕೋಟಿ ರೂ. ಬಹುಮಾನ ಘೋಷಣೆ ಮಾಡಿದಂತೆ ಧರ್ಮ ಸ್ಥಳ ಪ್ರಕರಣದಲ್ಲಿ ಸಾಕ್ಷಿ ನುಡಿಯುವವರಿಗೆ ನಗದು ಬಹುಮಾನ ಘೋಷಣೆ ಮಾಡಬೇಕು.
ಸಾಕ್ಷಿದಾರನನ್ನೂ ತನಿಖೆಗೆ ಒಳಪಡಿಸಿ: ಧರ್ಮಸ್ಥಳದಲ್ಲಿ ಅಸ್ವಾಭಾವಿಕ ಸಾವಿನ ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂದು ದೂರು ಸಲ್ಲಿಸಿರುವ ಪ್ರಮುಖ ಸಾಕ್ಷಿದಾರನನ್ನೂ ಕೂಡ ತನಿಖೆಗೆ ಒಳಪಡಿಸ ಬೇಕು. ಇಷ್ಟು ವರ್ಷಗಳು ಆತ ಎಲ್ಲಿದ್ದರು? ಆತನನ್ನು ಕರೆತಂದವರು ಯಾರು? ಆತನ ಹಿಂದೆ ಕಾಣದ ಕೈಗಳು ಇವೆಯೇ ಎಂಬುದನ್ನು ಪರಿಶೀಲಿಸಬೇಕು.
ಸ್ಥಳಗಳಿಗೆ ಪಹರೆ ಹಾಕಿ: ಈಗ ಸಾಕ್ಷಿ ಹೇಳುವುದಾಗಿ ಬಂದಿರುವ ವ್ಯಕ್ತಿ ಸಲ್ಲಿಸಿರುವ ದೂರಿನಂತೆ, ಆತ ಶವಗಳನ್ನು ಹೂತಿಟ್ಟಿರುವ ಸ್ಥಳಗಳನ್ನು ಗೌಪ್ಯವಾಗಿ ಇಡಬೇಕು. ತಕ್ಷಣ ಆ ಸ್ಥಳಗಳಿಗೆ ಪಹರೆಗಳನ್ನು ಹಾಕಿ ಯಾರೊಬ್ಬರೂ ಓಡಾಡದಂತೆ ಸರ್ಪಗಾವಲು ಹಾಕ ಬೇಕು. ಇದು ತಡವಾದಷ್ಟೂ ಸಾಕ್ಷಿಗಳು ನಾಶ ವಾಗುವ ಸಂಭವ ಹೆಚ್ಚು.
ಹಿಂಬಾಗಿಲಿನ ತನಿಖೆ ನಡೆಯಬೇಕು: ಸೌಜನ್ಯ ಪ್ರಕರಣದಲ್ಲಿ ನೇರವಾದ ತನಿಖೆಗೆ ಹಲವಾರು ಸವಾಲು, ತೊಂದರೆಗಳಿವೆ. ಹೀಗಾಗಿ ಈ ಪ್ರಕರಣದಲ್ಲಿ ಬ್ಯಾಕ್ ಡೋರ್ ಇನ್ವೆಸ್ಟಿಗೇಷನ್ (ಹಿಂಬಾಗಿಲಿನ ಮೂಲಕ ತನಿಖೆ) ನಡೆಯಬೇಕು. ಬೇರೆ ಪ್ರಕರಣಗಳಿಗೆ ಸಂಬಂಧಿತ ತನಿಖೆ ನಡೆಯುವ ಮೂಲಕ ಕಾಮನ್ ಆರೋಪಿಗಳು ಕಂಡು ಬರಬಹುದು. ಆದರೆ, ಎಲ್ಲ ಪ್ರಕರಣಗಳ ತನಿಖೆಯನ್ನು ಒಂದೇ ತಂಡ ನಡೆಸಬೇಕು. ಅದರಿಂದ ಸೌಜನ್ಯ ಪ್ರಕರಣಕ್ಕೂ ನ್ಯಾಯ ಸಿಗುವ ಸಂಭವ ಹೆಚ್ಚು.
ಎರಡು ವರ್ಷಗಳ ಹಿಂದೆ ಸೌಜನ್ಯ ಪ್ರಕರಣದಲ್ಲಿ ಸಿಬಿಐ ತೀರ್ಪು ಬಂದಾಗ, ತಕ್ಷಣ ಅದರ ವಿರುದ್ಧ ಹೋರಾಟ ರೂಪಿಸಿದೆವು. ಮೈಸೂರಿನಲ್ಲಿ ‘ಸೌಜನ್ಯ ನಮ್ಮ ಮಗಳು’ ಹೋರಾಟ ಆರಂಭವಾಯಿತು. ಒಡನಾಡಿಯಲ್ಲಿ ವಿಶ್ಲೇಷಣೆ ಸಭೆ ನಡೆಯಿತು. ನಂತರ ಬಹಳಷ್ಟು ನಡಾವಳಿಗಳು ಆದವು. ಧರ್ಮಸ್ಥಳ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾದಯಾತ್ರೆ ಆರಂಭಿಸಿದೆವು. ಇದು ಈಗ ರಾಜ್ಯ ವ್ಯಾಪಿಯಾಗಿದೆ. ಸೌಜನ್ಯ ಪ್ರಕರಣದ ತನಿಖೆಗಾಗಿ ಧರ್ಮ, ಜಾತಿ, ಸಂಘ-ಸಂಸ್ಥೆಗಳನ್ನು ಮೀರಿ ಚಳವಳಿಗಳನ್ನು ರೂಪಿಸಿದೆವು. ಇವುಗಳ ಕಾರಣದಿಂದ ಧರ್ಮ ಸ್ಥಳದ ಅಸ್ವಾಭಾವಿಕ ಅತ್ಯಾಚಾರ, ಸಾವಿನ ಪ್ರಕರಣಗಳ ತನಿಖೆಗೆ ಸರ್ಕಾರದಿಂದ ಎಸ್‌ಐಟಿ ರಚನೆಯಾಗಿದೆ. ಇದು ಸಂವಿಧಾನಾತ್ಮಕವಾಗಿ ಹೋರಾಟ ರೂಪಿಸುವ ಜನಪರ ಚಳವಳಿಗಳಿಗೆ ಸಂದ ಜಯವಾಗಿದೆ. ಅಂತಿಮವಾಗಿ ಸಂವಿಧಾನ ಮತ್ತು ಕಾನೂನು ಕೆಲಸ ಮಾಡಿವೆ.
ಸಾಮಾಜಿಕ ಜಾಲತಾಣ ಆಂದೋಲನ: ಧರ್ಮಸ್ಥಳದಲ್ಲಿ ನಡೆದಿರುವ ಪ್ರಕರಣಗಳ ಕುರಿತು ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಕೈ ಹಿಡಿಯಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕೂಗು ಎದ್ದಿದೆ. ಕೆಲವರು ನೇರವಾಗಿ ಪೋಸ್ಟ್‌ಗಳನ್ನು ಹಾಕಿದರೆ, ಇನ್ನು ಹಲವರು ಲೈಕ್, ಕಾಮೆಂಟ್ ಮೂಲಕ ಪರೋಕ್ಷ ಸಹಕಾರ ನೀಡಿದರು. ಆದರೆ, ಇವರೆಲ್ಲಾ ನಮ್ಮೊಂದಿಗೆ ಬೀದಿಗೆ ಇಳಿಯದಿದ್ದರೂ ಬೆನ್ನ ಹಿಂದೆ ನಿಂತು ಬೆಂಬಲ ನೀಡಿದರು.
” ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಅತ್ಯಂತ ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ತುಂಬ ಆಳವಾಗಿ ತನಿಖೆ ನಡೆಸಬೇಕು. ಅಲ್ಲದೆ, ಎಸ್‌ಐಟಿ ತಂಡವು ಪ್ರತಿ ಹಂತದ ಬೆಳವಣಿಗೆಯ ಬಗ್ಗೆ ನ್ಯಾಯಾಧೀಶರಿಗೆ ಮಾಹಿತಿ ಒದಗಿಸುತ್ತಿರಬೇಕು. ಈ ನಿಟ್ಟಿನಲ್ಲಿ ಉಚ್ಚ ಅಥವಾ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರೊಬ್ಬರು ಹಾಗೂ ಪ್ರಾಮಾಣಿಕ ದಕ್ಷ ಅಧಿಕಾರಿಗಳು ತಂಡದಲ್ಲಿರಬೇಕು:





