Mysore
28
few clouds

Social Media

ಗುರುವಾರ, 05 ಫೆಬ್ರವರಿ 2026
Light
Dark

ಮೌನ ಸಾಧಕ ಎಂ.ಶ್ರೀನಿವಾಸ್ @ 75

ಮಂಡ್ಯದಲ್ಲಿ ಮೂರು ಬಾರಿ ಶಾಸಕರಾಗಿ ಗೆದ್ದು ದಾಖಲೆ

ಡಾ.ಎಸ್.ಶಿವರಾಮು

ಇತಿಹಾಸದಲ್ಲಿ ವ್ಯಕ್ತಿಚರಿತ್ರೆಗೆ ಮಹತ್ವವಾದ ಸ್ಥಾನವಿದೆ.ಇದನ್ನು ಮನಗಂಡೇ ಬ್ರಿಟಿಷ್ ಚರಿತ್ರೆಕಾರರಲ್ಲಿ ಪ್ರಮುಖರಾಗಿದ್ದ ಸ್ಕಾಟ್ಲೆಂಡಿನ ಥಾಮಸ್ ಕಾರ್ಲೈಲ್ ಚರಿತ್ರೆ ಎಂದರೆ ಮಹಾನ್ ವ್ಯಕ್ತಿಗಳ ಜೀವನ ವೃತ್ತಾಂತ’ ಎಂಬ ವ್ಯಾಖ್ಯೆಯನ್ನು ನೀಡಿದ್ದಾನೆ. ಚರಿತ್ರೆಯಲ್ಲಿ ವ್ಯಕ್ತಿಗಳ ಪಾತ್ರವೇ ಬಹಳ ಮುಖ್ಯವೆಂದು ಅವನು ಪರಿಭಾವಿಸುತ್ತಾನೆ. ಅವನು ಇತಿಹಾಸವನ್ನು ಜೀವನ ಚರಿತ್ರೆಯಾಗಿ ಸಂಕ್ಷೇಪಿಸುತ್ತಾನೆ. ಇತಿಹಾಸದಲ್ಲಿ ಮಹಾಪುರುಷ ಅಥವಾ ನಾಯಕನ ಪಾತ್ರ ಎಷ್ಟು ಮಹತ್ವ ಪೂರ್ಣವಾದುದು; ಅನಿವಾರ್ಯವಾದುದು ಎಂಬು ದನ್ನು ಎತ್ತಿ ಹಿಡಿಯಲು ಇಚ್ಛಿಸಿದನು. ಆದರೆ ಈ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೂಡ ಪ್ರಪಂಚದ ಚರಿತ್ರೆಯನ್ನು ಅವಲೋಕಿಸಿದಾಗ ವ್ಯಕ್ತಿಗಳ ಇತಿಹಾಸವು ಕೂಡ ಪ್ರಮುಖವಾದುದು ಎಂಬುದು ಅರಿವಾಗುತ್ತದೆ.

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಕೆ.ವಿ.ಶಂಕರಗೌಡ, ಎಸ್.ಎಂ. ಕೃಷ್ಣ, ಜಿ.ಮಾದೇಗೌಡರಂತಹ ನಾಯಕರು ತಮ್ಮ ಸಾಧನೆಯ ಹೆಗ್ಗುರುತನ್ನು ಮೂಡಿಸಿದ್ದಾರೆ. ಇಂಡಿಯಾದ ರಾಜಕಾರಣವನ್ನು ಬೇಕಾದರೂ ನಾವು ಅರ್ಥೈಸಬಹುದು. ಆದರೆ ಮಂಡ್ಯದ ರಾಜಕಾರಣವನ್ನು ಅರ್ಥೈಸಲಾಗದು ಎಂಬ ಜನಾಭಿಪ್ರಾಯವೇ ಇದೆ. ಅದು ಸ್ವಾತಂತ್ರ್ಯಾನಂತರದ ಹಲವು ಚುನಾವಣೆಗಳಲ್ಲಿ ಸಾಬೀತಾಗಿದೆ. ಜನಪರ ಕೆಲಸ ಮಾಡಿದವರನ್ನು ಕೈಹಿಡಿದು ನಾಯಕರನ್ನಾಗಿ ಅಪ್ಪಿಕೊಂಡಿದ್ದಾರೆ; ಜನ ವಿರೋಽ ನಾಯಕ ಯಾರೇ ಆಗಲಿ ಎಷ್ಟೇ ಹೆಸರುಗಳಿಸಿದವರಾಗಲಿ ಹಿಂದೆ ಮುಂದೆ ನೋಡದೆ ಸೋಲಿಸಿದ ಉದಾಹರಣೆಗಳು ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿವೆ.

ರಾಜಕಾರಣಿಗಳನ್ನು ಕುರಿತು ಬರೆಯುವಾಗ ಹಲವು ಎಡರು ತೊಡರುಗಳು ಎದುರಾಗುತ್ತವೆ. ಅವರಿಂದ ಉಪಕೃತರಾದವರು ಅವರನ್ನು ಕಾಣುವ ರೀತಿಗೂ; ಉಪಕೃತರಲ್ಲದವರು ಅವರನ್ನು ಕಾಣುವ ರೀತಿಗೂ ಸಾಕಷ್ಟು ಅಂತರವಿದೆ. ಕೆಲವರು ಉಪಕಾರವನ್ನು ಸ್ಮರಿಸಿದರೆ, ಕೆಲವರು ತೆಗಳುತ್ತಾರೆ. ಯಾರು ಎಲ್ಲರಿಂದ ಎಲ್ಲ ಕಾಲದಲ್ಲೂ ಉತ್ತಮ ಹೆಸರನ್ನು ಪಡೆಯುತ್ತಾರೋ ಅವರೇ ನಿಜವಾದ ಜನನಾಯಕರು ಎಂದರೆ ತಪ್ಪಾಗಲಾರದು. ಯಾರು ತಮ್ಮ ಸಮಾಜಮುಖಿ ಕೆಲಸಗಳಿಂದ ಜನಮನ್ನಣೆ ಗಳಿಸಿಕೊಂಡಿರುತ್ತಾರೋ ಅವರು ಗಟ್ಟಿಯಾಗಿ ರಾಜಕೀಯದಲ್ಲಿ ನೆಲೆಗೊಳ್ಳುತ್ತಾರೆ.

ಅಂತಹವರ ಸಾಲಿನಲ್ಲಿ ನಿಲ್ಲಬಹು ದಾದವರೆಂದರೆ ಮಂಡ್ಯ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಽಸಿ ಶಾಸಕರಾಗಿದ್ದ ಎಂ.ಶ್ರೀನಿವಾಸ್. ವಕೀಲರಾಗಿ ವೃತ್ತಿ ಬದುಕನ್ನು ಆರಂಭಿಸಿದ ಶ್ರೀನಿವಾಸ್ ಅವರು, ಈ ವೃತ್ತಿಯಿಂದ ಬಂದ ಗಳಿಕೆಯನ್ನೆಲ್ಲಾ ಹೋರಾಟ, ಸಂಘಟನೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ವಿನಿಯೋಗಿಸಿದ್ದಾರೆ. ರೈತಸಂಘದ ಹೋರಾಟಗಳ ಮೂಲಕ ರಾಜಕೀಯ ಪ್ರವೇಶಿಸಿದ ಇವರು ರೈತರ ನಾಡಿಮಿಡಿತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ರೈತರು ತಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಾಗ; ಕಂದಾಯ ಹೆಚ್ಚಳ, ಲೆವಿ ನೀತಿಯಂತಹ ರೈತ ವಿರೋಧಿ ನೀತಿಗಳು ಜಾರಿಗೆ ಬಂದಾಗ ಮಂಡ್ಯ ಜಿಲ್ಲೆಯಲ್ಲಿ ಅನ್ನದಾತರ ಬದುಕಿನ ನೇರ್ಪಿಗಾಗಿ ರೈತರನ್ನು ಸಂಘಟಿಸಿ ಚಳವಳಿ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ರೈತರ ಸಂಘವನ್ನು ಬಲಗೊಳಿಸಲು ಊರೂರು ಸುತ್ತಿ ರೈತರನ್ನು ಎಚ್ಚರಗೊಳಿಸಿದ್ದಾರೆ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ರೈತಪರ ನಿಲುವಿನಿಂದ ಆಕರ್ಷಿತಗೊಂಡು ರೈತಸಂಘವನ್ನು ಜಿಲ್ಲೆಯಲ್ಲಿ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದಾರೆ. ಹಸಿರು ಸಾಲನ್ನು ಬಾರು ಕೋಲಾಗಿ ಮಾಡಿಕೊಂಡು ರೈತ ವಿರೋಧಿ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಟ್ಟು, ರೈತಪರ ನಿಲುವು ತಳೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಂ.ಶ್ರೀನಿವಾಸ್ ಮಂಡ್ಯ ತಾಲ್ಲೂಕು ಹನಕೆರೆಯಲ್ಲಿ ೧೯೫೧ರ ಫೆಬ್ರವರಿ ೨ರಂದು ಮೆಣಸೇಗೌಡ ಮತ್ತು ಅರಸಮ್ಮ ದಂಪತಿಯ ಮಗನಾಗಿ ಜನಿಸಿದರು. ಇವರದು ಸಾಮಾನ್ಯ ರೈತ ಕುಟುಂಬ. ಪ್ರಸಿದ್ಧ ರಾಜಕಾರಣಿ ಮನೆತನದ ಹಿನ್ನೆಲೆಯನ್ನಾಗಲಿ, ಶ್ರೀಮಂತ ಕುಟುಂಬದ ಹಿನ್ನೆಲೆಯನ್ನಾಗಲಿ, ಸ್ವಾತಂತ್ರ್ಯಾನಂತರದ ಜಿಲ್ಲೆಯ ಪ್ರಸಿದ್ಧ ರಾಜಕಾರಣಿಗಳ ಹಿನ್ನೆಲೆಯನ್ನಾಗಲಿ ಹೊಂದಿದವರಲ್ಲ.

ತೀರಾ ಸಾಮಾನ್ಯ ನಿರಕ್ಷರ ರೈತ ಅವಿಭಕ್ತ ಕುಟುಂಬದಿಂದ ಬಂದು ಮೊದಲ ತಲೆಮಾರಿನ ಅಕ್ಷರಸ್ಥ ವ್ಯಕ್ತಿಯಾದ ಶ್ರೀನಿವಾಸ್, ಯಾವುದೇ ಮಹತ್ವಾಕಾಂಕ್ಷೆ ಇರಿಸಿಕೊಳ್ಳದೆ ಕೇವಲ ಅಕ್ಷರವಂತರಾಗಬೇಕು ಎಂದುಕೊಂಡವರು. ಆದರೆ, ಶಾಲೆಗೆ ಸೇರಿ ಹೇಗೋ ಏನೋ ಓದಿನಲ್ಲಿ ಮುಂದುವರಿದು ಬಿ.ಎಸ್ಸಿ., ಎಲ್‌ಎಲ್‌ಬಿ ಪದವೀಧರರಾದದ್ದೇ ಒಂದು ಸೋಜಿಗದ ಸಂಗತಿ. ವಿದ್ಯಾರ್ಥಿಯಾಗಿದ್ದಾಗಲೇ ಜಿಲ್ಲೆಯ ರಾಜಕಾರಣ ಹಾಗೂ ರಾಜಕಾರಣಿಗಳ ಬಗ್ಗೆ ತಿಳಿವಳಿಕೆಯನ್ನು ಇರಿಸಿಕೊಂಡದ್ದು ಮತ್ತಷ್ಟು ಸೋಜಿಗವೇ ಸರಿ.

ಎಂ.ಶ್ರೀನಿವಾಸ್ ರಾಜ್ಯ ಒಕ್ಕಲಿಗರ ಸಂಘಕ್ಕೆ ನಿರ್ದೇಶಕರಾಗಿ ಐದಾರು ಬಾರಿ ಆಯ್ಕೆಗೊಂಡು ಸಂಘದ ಹಲವಾರು ಹುದ್ದೆಗಳನ್ನು ಏರಿ ಎಲ್ಲರ ಪ್ರೀತಿವಿಶ್ವಾಸಕ್ಕೆ ಕಾರಣರಾಗಿದ್ದರಲ್ಲದೆ, ಆ ಮೂಲಕ ಸಂಘದ ಬಲ ವರ್ಧನೆ ಮಾಡಿದ್ದಾರೆ. ತಮಗೆ ದೊರೆತ ಅಧಿಕಾರಾವಾಧಿಯಲ್ಲಿ ಒಂದಿಷ್ಟೂ ಕಪ್ಪುಚುಕ್ಕೆ ಅಂಟಿಸಿಕೊಳ್ಳದ ಹಾಗೆ ಸಾಗಿ ಬಂದದ್ದು ಶ್ರೀನಿವಾಸ್ ಅವರ ಮಾದರಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಸ್ವಾತಂತ್ರ್ಯಾನಂತರ ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ವ್ಯಕ್ತಿಗತ ಪ್ರತಿಷ್ಠೆಗಳೇ ಮೇಲುಗೈಯಾಗಿ, ಅದು ಮನೆತನಗಳ ಸ್ವತ್ತಾಗಿ ಇದ್ದ ಸಂದರ್ಭದಲ್ಲಿ ಅಂತಹ ಪಾರಮ್ಯವನ್ನು ಕೊನೆಗಾಣಿಸಿ ಮಂಡ್ಯ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾದದ್ದು ಶ್ರೀನಿವಾಸ್ ಹೆಗ್ಗಳಿಕೆ. ರಾಜಕಾರಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳೆರಡರಲ್ಲೂ ಸಮಚಿತ್ತತೆಯನ್ನು ಹೊಂದಿರುವ ಶ್ರೀನಿವಾಸ್, ಜನರ ಜೊತೆ ಉತ್ತಮ ಒಡನಾಟವಿರಿಸಿಕೊಂಡವರು. ಸಮಗ್ರ ಮಂಡ್ಯದ ಅಭಿವೃದ್ಧಿಗಾಗಿ ಹಗಲಿರುಳು ದುಡಿದು ಕ್ಷೇತ್ರಾದ್ಯಂತ ಜನಪ್ರಿಯರಾದವರು.

ಮಂಡ್ಯದಲ್ಲಿ ಮಿನಿ ವಿಧಾನಸೌಧ, ಕಾವೇರಿ ಭವನ, ಅಬಕಾರಿ ಭವನ, ಲೋಕೋಪಯೋಗಿ ಭವನ ಸ್ಥಾಪನೆ, ಮಂಡ್ಯ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆಧುನೀಕರಣದ ಮತ್ತು ವಿಭಾಗೀಯ ಕಚೇರಿ ಸ್ಥಾಪನೆ; ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಸಮಗ್ರ ರಸ್ತೆ ಅಭಿವೃದ್ಧಿಗೆ ಮಹತ್ವದ ಆದ್ಯತೆ; ಹಳ್ಳಿಗಾಡಿನಲ್ಲಿ ಸಮುದಾಯ ಭವನ, ಶಾಲೆ, ಆಸ್ಪತ್ರೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆ, ಮಂಡ್ಯ ಮೆಡಿಕಲ್ ಕಾಲೇಜು ಸ್ಥಾಪನೆ ಇತ್ಯಾದಿಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇಂತಹ ಜನಮುಖಿ; ಸಮಾಜಮುಖಿ ಕೆಲಸಗಳೇ ಶ್ರೀನಿವಾಸ್ ಅವರನ್ನು ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಚಿರಸ್ಥಾಯಿಗೊಳಿಸಿವೆ. ಮಂಡ್ಯ ಕ್ಷೇತ್ರದ ಇತಿಹಾಸದಲ್ಲಿ ಇವರು ಮೂರು ಬಾರಿ ಗೆದ್ದದ್ದು ದಾಖಲೆಯಾಗಿದೆ. ಕೇವಲ ರಾಜಕೀಯದಲ್ಲಿ ಮಾತ್ರವಲ್ಲದೇ ಮಂಡ್ಯದ ಸಾಂಸ್ಕೃತಿಕ ವಲಯದಲ್ಲೂ ತಮ್ಮನ್ನು ಗುರುತಿಸಿಕೊಂಡು ಸಾಂಸ್ಕೃತಿಕ ಸಂವೇದನೆಯ ನಾಯಕರೆನಿಸಿದ್ದಾರೆ.

ಶ್ರೀನಿವಾಸ್ ಶೈಕ್ಷಣಿಕ ಚಿಂತಕರು. ಹುಟ್ಟೂರು ಹನಕೆರೆಯಲ್ಲಿ ‘ವಿವೇಕ ವಿದ್ಯಾಸಂಸ್ಥೆ’ ಸ್ಥಾಪಿಸಿ ಶಿಕ್ಷಣ ವಲಯದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀನಿವಾಸ್ ಜನಸಾಮಾನ್ಯರ ನಾಯಕ. ಅವರ ಬಳಿಯಲ್ಲಿ ಬಿಂಕವಾಗಲಿ, ಬಿಗುಮಾನವಾಗಲಿ, ದ್ವೇಷಾಸೂಯೆಯಾಗಲಿ ತಲೆದೋರುವುದಿಲ್ಲ. ಸದಾ ದೀನರ, ದಲಿತರ ಹಿಂದುಳಿದವರ ಬಗ್ಗೆ ಯೋಚಿಸುತ್ತಾ ಸಾಗುತ್ತಾರೆಯೇ ಹೊರತು ಶ್ರೀಮಂತರನ್ನೆಂದೂ ಹತ್ತಿರಕ್ಕೆ ಬಿಟ್ಟುಕೊಂಡವರಲ್ಲ. ಲಾಭ ಕೋರರನ್ನು, ದಲ್ಲಾಳಿಗಳನ್ನು ತಮ್ಮ ಬಳಿಗೆ ಸೇರಿಸಿದವರಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂಬಷ್ಟಕ್ಕೆ ಮೀಸಲಾಗಿ ರಾಜಕಾರಣ ಮಾಡಿದ್ದು ನಿಜಕ್ಕೂ ಅನುಕರಣೀಯ. ಶ್ರೀನಿವಾಸ್ ಅವರು ಮಾತು ಮತ್ತು ಮೌನಗಳ ನಡುವೆ ತಮ್ಮದೇ ಆದ ಹಾದಿಯನ್ನು ನಿರ್ಮಿಸಿಕೊಂಡು ಮೌನವಾಗಿಯೇ ಸಾಧನೆಗಳನ್ನು ಮಾಡುತ್ತಾ ‘ಮೌನ ಸಾಧಕ’ರೇ ಆಗಿದ್ದಾರೆ.

(ಲೇಖಕರು, ಮಂಡ್ಯದ ಮಹಿಳಾ ಸರ್ಕಾರಿ ಕಾಲೇಜಿನ(ಸ್ವಾಯತ್ತ) ಸಹ ಪ್ರಾಧ್ಯಾಪಕರು)

ಇಂದು ಮಾಜಿ ಶಾಸಕ ಎಂ.ಶ್ರೀನಿವಾಸ್ ಅಭಿನಂದನಾ ಗ್ರಂಥ ‘ಶ್ರೀನಿಧಿ’ ಬಿಡುಗಡೆ: ಸಾಹಿತಿ ಡಾ.ಎಸ್.ತುಕಾರಾಮ್, ಪ್ರಗತಿಪರ ರೈತ ಶಿವು ಬನ್ನಹಳ್ಳಿ ಗೆ ಪ್ರಶಸ್ತಿ ಪ್ರದಾನ ಮಂಡ್ಯ: ಕರ್ನಾಟಕ ಸಂಘದ ಸಹಕಾರದೊಂದಿಗೆ ಮಾಜಿ ಶಾಸಕರಾದ ಎಂ.ಶ್ರೀನಿವಾಸ್ ಅಭಿನಂದನಾ ಗ್ರಂಥ ‘ಶ್ರೀನಿಧಿ’ ಬಿಡುಗಡೆ ಸಮಾರಂಭವನ್ನು ಫೆ.೨ರಂದು ಸಂಜೆ ೪ ಗಂಟೆಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಎಂ.ಶ್ರೀನಿವಾಸ್ ಹುಟ್ಟುಹಬ್ಬದ ಅಂಗವಾಗಿ ಡಾ.ಎಸ್. ಶಿವರಾಮು, ಲೋಕೇಶ್ ಚಂದಗಾಲು ಸಂಪಾದಕತ್ವದ ‘ಶ್ರೀನಿಧಿ’ ಅಭಿನಂದನಾ ಗ್ರಂಥ ಬಿಡುಗಡೆ, ಸಾಹಿತಿ ಡಾ.ಎಸ್.ತುಕಾರಾಮ್ ಅವರಿಗೆ ಎಂ.ಶ್ರೀನಿವಾಸ್ ಸಮಾಜ ಸೇವಾ ಪ್ರಶಸ್ತಿ ಹಾಗೂ ಪ್ರಗತಿಪರ ರೈತ ಶಿವು ಬನ್ನಹಳ್ಳಿ ಅವರಿಗೆ ಅರಸಮ್ಮ ಮೆಣಸೇಗೌಡ ಕೃಷಿ ಪ್ರಶಸ್ತಿ ಮತ್ತು ತಲಾ ೨೫ ಸಾವಿರ ನಗದು ವಿತರಿಸಲಾಗುವುದು. ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಉಪಸ್ಥಿತರಿರುವರು. ಕಾರ್ಯಕ್ರಮವನ್ನು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದು, ಶಾಸಕ ಪಿ.ರವಿಕುಮಾರ ಗಣಿಗ ಅಧ್ಯಕ್ಷತೆ ವಹಿಸುವರು. ಅಭಿನಂದನಾ ಗ್ರಂಥವನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಜಯರಾಂ ರಾಯಪುರ ಬಿಡುಗಡೆ ಮಾಡುವರು. ಮಾಜಿ ಶಾಸಕ ಎಂ. ಶ್ರೀನಿವಾಸ್ ಅವರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂದಿಸುವರು. ಶಾಸಕರು ಹಾಗೂ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಪ್ರಶಸ್ತಿ ಪ್ರದಾನ ಮಾಡುವರು ಎಂದರು. ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ್ ಬಾಬು ಬಂಡಿಸಿದ್ದೇಗೌಡ, ಶಾಸಕರಾದ ಕೆ.ಎಂ.ಉದಯ್, ದರ್ಶನ್ ಪುಟ್ಟಣ್ಣಯ್ಯ, ಎಂಎಲ್‌ಸಿ ಮಧು ಜಿ.ಮಾದೇಗೌಡ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಬಿ.ರಾಮಕೃಷ್ಣ, ಕೆ.ಟಿ.ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಉಪಸ್ಥಿತರಿರುವರು. ನಿವೃತ್ತ ಪ್ರಾಂಶುಪಾಲರಾದ ಡಾ.ಮ.ರಾಮಕೃಷ್ಣ ಪ್ರಶಸ್ತಿ ಪುರಸ್ಕೃತರ ಕುರಿತು, ಡಾ.ಎಸ್.ಬಿ.ಶಂಕರಗೌಡ ಎಂ.ಶ್ರೀನಿವಾಸ್ ಕುರಿತು ಅಭಿನಂದನಾ ನುಡಿಗಳನ್ನಾಡುವರು ಎಂದು ವಿವರಿಸಿದರು.

 

 

Tags:
error: Content is protected !!