Mysore
26
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಕೊಡಗಿನಲ್ಲಿ ಕೃಷಿ ಭೂಮಿ ಗಣನೀಯ ಪ್ರಮಾಣದಲ್ಲಿ ಇಳಿಕೆ

ನವೀನ್ ಡಿಸೋಜ

೫ ವರ್ಷಗಳಲ್ಲಿ ಶೇ. ೫೦ರಷ್ಟು ವಿಸ್ತೀರ್ಣ ಕುಸಿತ ; ಭತ್ತ, ಆಹಾರ ಧಾನ್ಯಗಳ ಉತ್ಪಾದನೆ ಕುಂಠಿತ

ಮಡಿಕೇರಿ: ಭತ್ತದ ಕಣಜ ಎಂದೇ ಖ್ಯಾತಿ ಪಡೆದಿದ್ದ ಕೊಡಗು ಜಿಲ್ಲೆಯಲ್ಲಿ ಈಗ ಕೃಷಿ ಭೂಮಿ ವಿಸ್ತೀರ್ಣ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುತ್ತಿದೆ. ಕೇವಲ ೫ ವರ್ಷಗಳ ಅವಧಿಯಲ್ಲಿ ಶೇ. ೫೦ರಷ್ಟು ಕೃಷಿಭೂಮಿಯ ವಿಸ್ತೀರ್ಣ ಕಡಿಮೆ ಆಗಿರುವ ಮಾಹಿತಿ ಲಭ್ಯವಾಗಿದ್ದು,ಭವಿಷ್ಯದಲ್ಲಿ ಕೃಷಿ ಉತ್ಪಾದನೆಗೆ ಪೆಟ್ಟು ಬೀಳುವ ಆತಂಕ ಸೃಷ್ಟಿಸಿದೆ.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಪ್ರೋತ್ಸಾಹದ ಹೊರತಾಗಿಯೂ ಕೃಷಿ ಭೂಮಿಯ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಇಳಿಕೆ ಆಗುತ್ತಿದೆ. ಕೃಷಿ ಪ್ರಧಾನ ಜಿಲ್ಲೆ ಕೊಡಗು ಜಿಲೆಯೂ ಕೂಡ ಈ ಬೆಳವಣಿಗೆಗೆ ಸಾಕ್ಷಿ ಆಗಿದೆ.

ಅಕ್ಕಿ ಉತ್ಪಾದನೆಗೆ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತಿದ್ದ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಕ್ಷೀಣಿಸುತ್ತಿದೆ. ಕೃಷಿ ಭೂಮಿಯ ವಿಸ್ತೀರ್ಣ ಪ್ರತಿ ವರ್ಷವೂ ವೇಗವಾಗಿ ಕಡಿಮೆ ಆಗುತ್ತಲೇ ಇದೆ. ಇದು ಆಹಾರ ಧಾನ್ಯಗಳ ಉತ್ಪಾದನೆ ಮೇಲೆ ಪರಿಣಾಮ ಬೀರಿದ್ದು, ಭತ್ತ ಸೇರಿದಂತೆ ಆಹಾರ ಧಾನ್ಯಗಳ ಉತ್ಪಾದನೆ ಪ್ರಮಾಣವು ಕುಸಿತಗೊಳ್ಳುತ್ತಿದೆ.

೨೦೧೯-೨೦ರಲ್ಲಿ ಜಿಲ್ಲೆಯಲ್ಲಿ ೨೯,೭೫೯ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆ ಮಾಡಲಾಗುತ್ತಿತ್ತು. ಈ ಪ್ರಮಾಣ ೨೦೨೩-೨೪ರಲ್ಲಿ ೧೫,೮೨೦ ಹೆಕ್ಟೇರ್ ಪ್ರದೇಶಕ್ಕೆ ಬಂದು ನಿಂತಿದೆ. ಇದರಿಂದಾಗಿ ಭತ್ತ ಸೇರಿದಂತೆ ಆಹಾರ ಧಾನ್ಯಗಳ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ೨೦೧೯-೨೦ರಲ್ಲಿ ಕೊಡಗಿನಲ್ಲಿ ೧,೦೬,೯೭೫ ಟನ್‌ಗಳಷ್ಟು ಭತ್ತ ಬೆಳೆಯಲಾಗುತ್ತಿತ್ತು. ೨೦೨೩-೨೪ರಲ್ಲಿ ಈ ಪ್ರಮಾಣ ೫೩,೧೫೨ ಟನ್‌ಗಳಿಗೆ ಕುಸಿದಿದೆ. ೩೭ ಟನ್ ಬೆಳೆಯಲಾಗುತ್ತಿದ್ದ ರಾಗಿ ಈಗ ೨೮ ಟನ್‌ಗೆ ಇಳಿದಿದೆ. ವಿಶೇಷ ಎಂದರೆ ಭತ್ತ ಬೆಳೆಯುವ ಪ್ರಮಾಣ ಇಳಿಕೆ ಕಂಡಿದ್ದರೂ ಮುಸುಕಿನ ಜೋಳ ಉತ್ಪಾದನೆ ತುಸು ಹೆಚ್ಚಾಗಿದೆ. ೫ ವರ್ಷಗಳ ಹಿಂದೆ ೭,೭೭೩ ಇದ್ದ ಮುಸುಕಿನ ಜೋಳದ ಉತ್ಪಾದನೆ ಈಗ ೮,೨೧೦ ಟನ್‌ಗೆ ಏರಿಕೆ ಕಂಡಿದೆ.

ಕೃಷಿ ಭೂಮಿ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಾ ಬರುತ್ತಿರುವುದನ್ನು ಗಮನಿಸಬಹುದಾಗಿದೆ. ೨೦೧೯-೨೦ರಲ್ಲಿ ಜಿಲ್ಲೆಯಲ್ಲಿ ೨೯,೭೫೯ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತಿತ್ತು. ಈ ಪ್ರಮಾಣ ೨೦೨೦-೨೧ರಲ್ಲಿ ೨೨,೨೨೯ ಹೆಕ್ಟೇರ್ ಪ್ರದೇಶಕ್ಕೆ ಇಳಿಕೆ ಆಯಿತು. ೨೦೨೧-೨೨ರಲ್ಲಿ ಸ್ವಲ್ಪ ಏರಿಕೆ ಕಂಡು ೨೨,೪೫೮ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆ ನಡೆದಿದ್ದರೂ ೨೦೨೨-೨೩ರಲ್ಲಿ ಏಕಾಏಕಿ ೧೫,೫೧೭ ಹೆಕ್ಟೇರ್ ಪ್ರದೇಶಕ್ಕೆ ಕುಸಿಯಿತು. ಕಳೆದ ವರ್ಷ ಇದು ಅಲ್ಪ ಏರಿಕೆ ಕಂಡಿದ್ದು ೧೫,೮೨೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿರುವುದಾಗಿ ಕೃಷಿ ಇಲಾಖೆ ಅಂಕಿ ಅಂಶಗಳು ತಿಳಿಸಿವೆ.

ಕೃಷಿ ಭೂಮಿ ವಿಸ್ತೀರ್ಣದ ಪ್ರಮಾಣ ಇಳಿಕೆ ಆಗುತ್ತಿರುವುದರಿಂದ ಆಹಾರ ಧಾನ್ಯಗಳ ಉತ್ಪಾದನೆಯೂ ಕಡಿಮೆ ಆಗುತ್ತಿದೆ. ೨೦೧೯-೨೦ರಲ್ಲಿ ಕೊಡಗಿನಲ್ಲಿ ೧,೦೬,೯೭೫ ಟನ್‌ಗಳಷ್ಟು ಭತ್ತ ಉತ್ಪಾದನೆ ಆಗಿದ್ದರೆ, ೨೦೨೦-೨೧ರಲ್ಲಿ ಪ್ರಮಾಣ ೮೪,೫೪೯ ಟನ್‌ಗಳಿಗೆ ಇಳಿಕೆ ಆಯಿತು. ೨೦೨೧-೨೨ರಲ್ಲಿ ೭೮,೫೫೪ ಟನ್‌ಗಳಷ್ಟು ಭತ್ತ ಬೆಳೆಯಲಾಗಿತ್ತು. ೨೦೨೨-೨೩ರಲ್ಲಿ ೫೦,೭೯೫ ಟನ್‌ಗಳಿಗೆ ಕುಸಿತ ಕಂಡಿತು. ಕಳೆದ ವರ್ಷ ಭತ್ತದ ಉತ್ಪಾದನೆಯಲ್ಲಿ ಅಲ್ಪ ಚೇತರಿಕೆ ಕಂಡುಬಂದಿದ್ದು, ೫೩,೧೫೨ ಟನ್‌ಗಳಷ್ಟು ಭತ್ತವನ್ನು ಬೆಳೆಯಲಾಗಿದೆ.

” ಕೊಡಗು ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ಕೆಲ ಪ್ರದೇಶಗಳಲ್ಲಿ ತೋಟಗಾರಿಕಾ ಬೆಳೆಗೆ ಬಳಕೆಯಾಗುತ್ತಿದೆ. ಅಡಕೆ, ತೆಂಗು, ಮೆಣಸು ಮತ್ತಿತರ ಬೆಳೆ ಬೆಳೆಯಲು ರೈತರು ಮುಂದಾಗುತ್ತಿದ್ದಾರೆ. ಬೆಳೆಗಾರರು ಭತ್ತ ಬೆಳೆಯಲು ಹಿಂದೇಟು ಹಾಕುತ್ತಿರುವುದರಿಂದ ಸಮಸ್ಯೆ ಉಂಟಾಗುತ್ತಿದೆ.”

ಡಾ. ಬಿ.ಎಸ್. ಚಂದ್ರಶೇಖರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ

” ಆಹಾರ ಬೆಳೆಗಳ ಕೃಷಿ ಲಾಭದಾಯಕ ಅಲ್ಲ. ಉದಾಹರಣೆಗೆ ಭತ್ತಕ್ಕೆ ಸಿಗುತ್ತಿರುವ ಬೆಲೆ ಏನೇನೂ ಸಾಲದು. ಕ್ವಿಂಟಾಲ್‌ಗೆ ಕನಿಷ್ಠ ೫ ಸಾವಿರ ರೂ. ಆದರೂ ಸಿಗಬೇಕು. ಹುಲ್ಲಿಗೆ ಬೇಡಿಕೆಯೇ ಇಲ್ಲ. ಕಾರ್ಮಿಕರ ಕೊರತೆಯೂ ಇದೆ. ಈ ವರ್ಷ ಉತ್ತಮ ಕಾಫಿ ಬೆಳೆ ಬಂದಿದೆ. ಮುಂದಿನ ವರ್ಷ ಹೆಚ್ಚು ಫಸಲು ಬರುವ ನಿರೀಕ್ಷೆ ಇದೆ. ಇದು ಕೂಡ ಕೃಷಿ ಭೂಮಿ ವಿಸ್ತೀರ್ಣ ಕಡಿಮೆ ಆಗಲು ಕಾರಣ ಆಗಬಹುದು.”

-ಬಿ.ಪಿ. ರವಿಶಂಕರ್, ಪ್ರಗತಿಪರ ರೈತ, ಪೊನ್ನಂಪೇಟೆ

Tags:
error: Content is protected !!