ಸಾವಿರ ಗಂಡು ಮಕ್ಕಳಿಗೆ ೯೩೦ ಹೆಣ್ಣು ಮಕ್ಕಳು; ‘ಡೆಕಾಯ್’ ಕಾರ್ಯಾಚರಣೆಯಿಂದ ಭ್ರೂಣ ಹತ್ಯೆಗೆ ಕಡಿವಾಣ
ಬಿ.ಟಿ.ಮೋಹನ್ ಕುಮಾರ್
ಮಂಡ್ಯ: ಜಿಲ್ಲೆಯಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳ ಬಗ್ಗೆ ಜಿಲ್ಲಾ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಪತ್ತೆ ಹಚ್ಚಿ, ಶಿಕ್ಷೆಗೆ ಗುರಿಪಡಿಸಿದ ಹಿನ್ನೆಲೆಯಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತದಲ್ಲಿ ಗಣನೀಯವಾಗಿ ಹೆಚ್ಚಳ ಕಂಡಿದೆ.
ರೆಪ್ರೊಡ್ಯೂಕ್ಟಿವ್ ಮತ್ತು ಚೈಲ್ಡ್ ಹೆಲ್ತ್ (ಆರ್ ಸಿಎಚ್) ವರದಿಯ ಪ್ರಕಾರ ೨೦೨೪ರ ಆಗಸ್ ನಲ್ಲಿ ಜಿಲ್ಲೆಯಲ್ಲಿ ಪ್ರತಿ ಸಾವಿರ ಗಂಡು ಮಕ್ಕಳಿಗೆ ೮೬೯ ಹೆಣ್ಣು ಮಕ್ಕಳಿದ್ದರು. ಪ್ರಸಕ್ತ ಸಾಲಿನ ಆಗಸ್ನಲ್ಲಿ ಪ್ರಕಟಗೊಂಡಿರುವ ವರದಿಯಲ್ಲಿ ಪ್ರತಿ ಸಾವಿರ ಗಂಡಿಗೆ ೯೩೦ರ ಆಸುಪಾಸಿನಲ್ಲಿ ಹೆಣ್ಣು ಮಕ್ಕಳಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ೬೧ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
ಭ್ರೂಣ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳಿಂದ ಜಿಲ್ಲೆಯ ಪ್ರತಿಷ್ಠೆಗೆ ಕಳಂಕಎದುರಾಗಿತ್ತು. ಆದರಲ್ಲೂ ಕಳೆದ ವರ್ಷ ಬಯಲಾಗಿದ್ದ ದಂಧೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಇದಕ್ಕೆ ಕಡಿವಾಣ ಹಾಕಬೇಕೆಂಬ ದೃಢ ನಿರ್ಧಾರದೊಂದಿಗೆ ಆರೋಗ್ಯ ಇಲಾಖೆ ‘ಡೆಕಾಯ್’ ಕಾರ್ಯಾಚರಣೆ ನಡೆಸಲಾಗಿ ಭ್ರೂಣ ಹತ್ಯೆಗೆ ಕಡಿವಾಣ ಬಿದ್ದಿದೆ.
ಬೆಚ್ಚಿಬೀಳಿಸಿದ್ದ ದಂಧೆ: ಭ್ರೂಣ ಪತ್ತೆ ದಂಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿತ್ತು. ಪರಿಣಾಮ ಭ್ರೂಣ ಪತ್ತೆಗೆಂದು ಮಂಡ್ಯ ಮಾತ್ರವಲ್ಲದೆ ಮೈಸೂರು, ಬೆಂಗಳೂರು ಇನ್ನಿತರೆ ಜಿಲ್ಲೆಗಳಿಂದಲೂ ಬರುತ್ತಿದ್ದರು. ಈ ನಡುವೆ ಕಳೆದ ವರ್ಷ ಬೆಂಗಳೂರಿನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದು ಜಿಲ್ಲೆಯ ಹೆಸರು ಕೇಳಿಬಂದಿತ್ತು. ಬಳಿಕ ವಿಚಾರಣೆ ತೀವ್ರಗೊಳಿಸುತ್ತಾ ಹೋದಂತೆ ಒಂದೊಂದೇ ಪ್ರಕರಣಗಳು ಬಯಲಿಗೆ ಬರಲಾರಂಭಿಸಿದವು.
ಮೊದಲು ಪಾಂಡವಪುರ, ಬಳಿಕ ಮೇಲುಕೋಟೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಭ್ರೂಣ ಪತ್ತೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆಯಲಾಯಿತು. ಆದಾಗ್ಯೂ ದಂಧೆಗೆ ಸಂಪೂರ್ಣ ಕಡಿವಾಣ ಬೀಳಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿತ್ತು. ಆ ವೇಳೆ ಹಲವರನ್ನು ಬಂಧಿಸಲಾಗಿತ್ತು. ಇದು ಆರೋಗ್ಯ ಇಲಾಖೆಗೆ ಸಿಕ್ಕ ದೊಡ್ಡ ಯಶಸ್ಸಾಗಿತ್ತು. ಹಲವರು ಬಂಧನಕ್ಕೆ ಒಳಗಾಗಿದ್ದಾರೆಂದು ಆರೋಗ್ಯ ಇಲಾಖೆ ಸುಮ್ಮನಾಗಲಿಲ್ಲ. ಮತ್ತೆ ಇಂತಹ ದಂಧೆ ನಡೆಯದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಲಾಯಿತು. ಈ ಪ್ರಕರಣಗಳ ಪ್ರಮುಖ ಆರೋಪಿಗಳನ್ನು ಬಂಧಿಸಲಾಯಿತು.
ಅಲ್ಲದೆ, ಎಲ್ಲ ಖಾಸಗಿ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್ ಮೇಲೆ ಹದ್ದಿನ ಕಣ್ಣಿಟ್ಟಿತ್ತು. ಮುಖ್ಯವಾಗಿ ತಡವಾಗಿ ಅಂದರೆ ಮೂರು ತಿಂಗಳ ಬಳಿಕ ಸ್ಕ್ಯಾನಿಂಗ್‌ಗೆ ಬರುವ ಮಹಿಳೆಯರ ಬಗ್ಗೆ ಅದರಲ್ಲಿಯೂ ಮೊದಲ ಮಗು ಹೆಣ್ಣಾಗಿರುವಂತವರಿದ್ದರೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿತ್ತು. ಒಟ್ಟಾರೆ ಎಲ್ಲ ಕ್ರಮವೂ ಪರಿಣಾಮ ಬೀರಿದೆ.
ಜಿಲ್ಲೆಯ ಗಂಡು ಮತ್ತು ಹೆಣ್ಣಿನ ನಡುವಿನ ಲಿಂಗಾನುಪಾತದ ಅಂಕಿ-ಅಂಶಗಳನ್ನು ಗಮನಿಸಿದರೆ ಪ್ರತಿ ಸಾವಿರ ಪುರುಷರಿಗೆ ಹೆಣ್ಣಿನ ಸಂಖ್ಯೆ ೨೦೧೪-೧೫ರಲ್ಲಿ ೯೧೯, ೨೦೧೫-೧೬ರಲ್ಲಿ ೯೨೨, ೨೦೧೬-೧೭ರಲ್ಲಿ ೯೧೪, ೨೦೧೭-೧೮ರಲ್ಲಿ ೯೧೨, ೨೦೧೮-೧೯ರಲ್ಲಿ ೯೧೭, ೨೦೧೯-೨೦ರಲ್ಲಿ ೮೯೮, ೨೦೨೦-೨೧ರಲ್ಲಿ ೮೮೪, ೨೦೨೧-೨೨ರಲ್ಲಿ ೮೯೦ ಮತ್ತು ೨೦೨೨-೨೩ರಲ್ಲಿ ೮೭೫ ಇತ್ತು. ಭ್ರೂಣ ಪತ್ತೆ ಮತ್ತು ಹತ್ಯೆ ವಿಚಾರದಲ್ಲಿ ಎಚ್ಚರ ತಪ್ಪದೆ ಇಲಾಖೆ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ.
ನೂರಾರು ಭ್ರೂಣ ಹತ್ಯೆ?: ಹಲವು ವರ್ಷಗಳಿಂದ ದಂಧೆಯನ್ನು ನಿರಾಂತಕವಾಗಿ ನಡೆಸಿಕೊಂಡು ಬರುತ್ತಿದ್ದ ಆರೋಪಿಗಳು, ೨೦೦ಕ್ಕೂ ಹೆಚ್ಚು ಸ್ಕ್ಯಾನಿಂಗ್ ಮಾಡಿರುವುದಾಗಿ ಮಾಹಿತಿ ನೀಡಿದ್ದರು. ಗರ್ಭಪಾತದ ಬಳಿಕ ಭ್ರೂಣವನ್ನು ವೈದ್ಯಕೀಯ ಕಸದೊಂದಿಗೆ ಸೇರಿಸಿ ಕಳುಹಿಸಿದ್ದಾರೆನ್ನುವ ಮಾಹಿತಿ ಹೊರಬಿದ್ದಿತ್ತು. ಪ್ರಮುಖವಾಗಿ ಆರೋಪಿಗಳು ಪರಸ್ಪರ ಸಂಪರ್ಕಿಸಲು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಬದಲಿಗೆ ಇಂಟರ್‌ನೆಟ್ ಕರೆ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ತಂಡ ತಾಂತ್ರಿಕ ವಿಧಾನ ಬಳಸಿ ಆರೋಪಿಗಳನ್ನು ಬಂಧಿಸಿತ್ತು.
ಗಮನಾರ್ಹ ವಿಷಯವೆಂದರೆ ದಂಧೆಗೆ ಸಂಬಂಧಿಸಿದಂತೆ ಆರೋಪಿಗಳು ಎಲ್ಲ ಜಿಲ್ಲೆಗಳಲ್ಲಿ ನೆಟ್‌ವರ್ಕ್ ಬೆಳೆಸಿಕೊಂಡಿದ್ದರು. ಮಧ್ಯವರ್ತಿಗಳ ಮೂಲಕ ಗರ್ಭಿಣಿಯರು ಅಥವಾ ಸಂಬಂಧಿಕರನ್ನು ಸಂಪರ್ಕಿಸುತ್ತಿದ್ದರು.ಪ್ರಾರಂಭದಲ್ಲಿ ಆಸ್ಪತ್ರೆಗಳ ಹಿಂದೆ ನಡೆಯುತ್ತಿದ್ದ ದಂಧೆಯನ್ನು ದಿನ ಕಳೆದಂತೆ ತೋಟದ ಮನೆ,ಆಲೆಮನೆಗೆ ವರ್ಗಾಯಿಸಿಕೊಂಡಿದ್ದರು. ಕೆಲವೊಮ್ಮೆ ಒಮಿನಿ ಕಾರ್‌ನಲ್ಲಿ ಸ್ಕ್ಯಾನಿಂಗ್ ಮಾಡಿರುವುದು ತನಿಖೆ ವೇಳೆ ಬಯಲಾಗಿತ್ತು.
‘ಡೆಕಾಯ್’ ಕಾರ್ಯಾಚರಣೆ ಯಶಸ್ಸು: ಪಾಂಡವಪುರ, ಮೇಲುಕೋಟೆ ದಾಳಿ ಬಳಿಕ ನಾಗಮಂಗಲ ತಾಲ್ಲೂಕಿನಲ್ಲಿ ಭ್ರೂಣ ಪತ್ತೆ ಪ್ರಕರಣ ಕಂಡುಬಂದಿತ್ತು. ಇಲ್ಲಿ ಆರೋಪಿಗಳನ್ನು ಬಯಲಿಗೆಳೆಯಲು ಆರೋಗ್ಯ ಇಲಾಖೆ ಬಳಸಿದ ತಂತ್ರ ‘ಡೆಕಾಯ್’ ಕಾರ್ಯಾಚರಣೆ. ಇದು ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು. ಡೆಕಾಯ್ ಎಂದರೆ ಇಲಾಖೆಯಿಂದಲೇ ಮಹಿಳೆಯೊಬ್ಬರನ್ನು ನೇಮಿಸಿ, ಅವರಿಗೆ ಭ್ರೂಣ ಪತ್ತೆ ಮಾಡುವಂತೆ ಆರೋಪಿಗಳಿಗೆ ೨೦ ಸಾವಿರ ರೂ. ಕೊಡಲಾಗಿತ್ತು. ಈ ವೇಳೆ ಭ್ರೂಣ ಪತ್ತೆ ಮಾಡುವ ವೇಳೆಯೇ ಆರೋಪಿಗಳನ್ನು ಪೊಲೀಸರ ಸಹಾಯದಿಂದ ವಶಕ್ಕೆ ಪಡೆಯಲಾಗಿತ್ತು.
ಪೊಲೀಸರು ಹಾಗೂ ಸಾರ್ವಜನಿಕರ ಸಹಾಯದಿಂದ ದಂಧೆಗೆ ಕಡಿವಾಣ ಹಾಕುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ’ಡೆಕಾಯ್’ ಸೇರಿದಂತೆ ಕೆಲ ತಂತ್ರ ಅನುಸರಿಸಿದ ಪರಿಣಾಮ ಎಗ್ಗಿಲ್ಲದೆ ನಡೆಯುತ್ತಿದ್ದ ಭ್ರೂಣ ಪತ್ತೆ ಹಾಗೂ ಹತ್ಯೆಯನ್ನು ತಡೆಯುವಲ್ಲಿ ಇಲಾಖೆ ಸಫಲವಾಗಿದೆ. ಈ ಹಿನ್ನೆಲೆಯಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ಕಾಯ್ದೆ (ಪಿಸಿಪಿಎನ್ಡಿಟಿ) ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ಜಿಲ್ಲಾ ಆರೋಗ್ಯ ಇಲಾಖೆಗೆ ಪ್ರಶಸ್ತಿ ಜತೆಗೆ ಅಭಿನಂದನೆ ಸಿಕ್ಕಿದೆ.
” ಮುಂದಿನ ವರ್ಷ ಮತ್ತಷ್ಟು ಸುಧಾರಣೆಯಾಗಲಿದೆ ಆರ್‌ಸಿಎಚ್‌ನಲ್ಲಿ ಪ್ರಕಟವಾದ ವರದಿಯಂತೆ ಜಿಲ್ಲೆಯ ಲಿಂಗಾನುಪಾತಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಪ್ರತಿ ಸಾವಿರ ಗಂಡು ಮಕ್ಕಳಿಗೆ ೮೬೯ ಹೆಣ್ಣಿನ ಪ್ರಮಾಣವಿತ್ತು. ಈ ವರ್ಷ ೯೩೦ಕ್ಕೆ ಏರಿಕೆಯಾಗಿದೆ. ಇದು ಉತ್ತಮ ಬೆಳವಣಿಗೆ. ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಿದ್ದರಪರಿಣಾಮ ಲಿಂಗಾನುಪಾತದಲ್ಲಿ ಏರಿಕೆ ಕಂಡಿದೆ. ಮುಂದಿನ ವರ್ಷ ಮತ್ತಷ್ಟು ಸುಧಾರಣೆಯಾಗಲಿದೆ. ಜಿಲ್ಲೆಯಲ್ಲಿ ಭ್ರೂಣ ಪತ್ತೆ ಮಾಡುವಂತಹ ಕೃತ್ಯಗಳು ಕಂಡುಬಂದರೆ ಸಾರ್ವಜನಿಕರು ನೇರವಾಗಿ ನನ್ನನ್ನು ಸಂಪರ್ಕಿಸಿ, ನಿಮ್ಮ ಹೆಸರನ್ನು ಗೌಪ್ಯವಾಗಿರಿಸಲಾಗುವುದು.”
– ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ, ಮಂಡ್ಯ
ಬೆಂಬಲವಾಗಿ ನಿಂತ ಸಚಿವರು: ಭ್ರೂಣ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ದಂಧೆಕೋರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಬೆಂಬಲವಾಗಿ ನಿಂತರು. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಾಗೂ ಪ್ರತಿ ಹಂತದ ಕಾರ್ಯಾಚರಣೆಯ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಬಹುಮುಖ್ಯವಾಗಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದರು.





