Mysore
24
few clouds

Social Media

ಶುಕ್ರವಾರ, 09 ಜನವರಿ 2026
Light
Dark

ವರ್ಷಕ್ಕೊಮೆ ೩೬ ಗಂಟೆ ದರ್ಶನ ಕೊಡುವ ಶ್ರೀ ಚೌಡೇಶ್ವರಿ ದೇವಿ

ಹೆಮ್ಮನಹಳ್ಳಿಯಲ್ಲಿ ಮಾ. ೨೦, ೨೧ರಂದು ಎರಡು ದಿನಗಳ ಜಾತ್ರಾ ಮಹೋತ್ಸವ

ಎಂ. ಆರ್. ಚಕ್ರಪಾಣಿ
ಮದ್ದೂರು: ವರ್ಷದಲ್ಲಿ ಕೇವಲ ೩೬ ಗಂಟೆಗಳ ಕಾಲ ಮಾತ್ರ ನಿಜ ದರ್ಶನ ನೀಡುವ ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಶ್ರೀ ಚೌಡೇಶ್ವರಿ ಅಮ್ಮನ ದೇವಸ್ಥಾನ ಹಲವಾರು ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ.

ಈ ತಾಯಿಯು ತನ್ನನ್ನು ನಂಬಿದವರಿಗೆ ಸುಖ,ಶಾಂತಿ ನೀಡುತ್ತಾಳೆ ಎಂಬ ನಂಬಿಕೆಯಿದೆ. ಚೌಡೇಶ್ವರಿ ದೇವಿಯ ಗರ್ಭಗುಡಿ ಯಲ್ಲಿರುವ ನಂದಾದೀಪವು ಇಡೀ ವರ್ಷ ಬೆಳಗಲಿದ್ದು, ದೇವಿಯ ದರ್ಶನದ ಸಮಯದಲ್ಲಿ ಬೆಳಗುತ್ತಿರುವ ನಂದಾ ದೀಪದ ಕಿರಣಗಳು ಬಿದ್ದಾಗ ಅದರಿಂದ ಜನರ ಸಂಕಷ್ಟಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ.

ಅದ್ಧೂರಿ ಜಾತ್ರಾ ಮಹೋತ್ಸವ: ಹೆಮ್ಮನಹಳ್ಳಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವು ಮಾ. ೨೦,೨೧ರಂದು ಎರಡು ದಿನಗಳ ಕಾಲ ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಮಾ. ೨೦ರ ಗುರುವಾರ ಮಧ್ಯಾಹ್ನ ೧೨ ಗಂಟೆಗೆ ಚೌಡೇಶ್ವರಿ ಅಮ್ಮನವರ ದೇಗುಲದ ಅಮೃತ ಮಣ್ಣಿನ ದ್ವಾರವನ್ನು ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ತೆರೆಯಲಿದ್ದು, ಕಳೆದ ವರ್ಷ ಅಮ್ಮನವರ ಗುಡಿಯಲ್ಲಿ ಹಚ್ಚಲಾಗಿದ್ದ ನಂದಾದೀಪದ ದರ್ಶನದೊಂದಿಗೆ ಅಮ್ಮನವರ ದರ್ಶನದ ಭಾಗ್ಯ ಸಿಗುತ್ತದೆ. ಜಾತ್ರಾ ಮಹೋತ್ಸವ ಅಂಗವಾಗಿ ದೂರದ ಊರುಗಳಿಂದ ಬರುವ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಸಂಜೆ ೫ ಗಂಟೆಗೆ ಅಮ್ಮನವರ ಬಂಡಿ ಉತ್ಸವ ನಡೆಯಲಿದ್ದು, ರಾತ್ರಿ ೧೨ ಗಂಟೆಗೆ ಅಮ್ಮನವರ ಕರಗ ಉತ್ಸವ ನಡೆಯಲಿದೆ. ರಾತ್ರಿ ೧೨. ೩೦ ಕ್ಕೆ ಸರಿಯಾಗಿ ಕೊಂಡಕ್ಕೆ ಅಗ್ನಿ ಸ್ಪರ್ಶ ನೆರವೇರುವುದು.

ಮಾ. ೨೧ರ ಶುಕ್ರವಾರ ಬೆಳಗಿನ ಜಾವ ೪ ಗಂಟೆಗೆ ಅಮ್ಮನವರ ಉತ್ಸವದೊಂದಿಗೆ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ ೧೨ ಗಂಟೆಗೆ ವೇಳೆಗೆ ಮಹಾ ರಥೋತ್ಸವ ನಡೆಯಲಿದ್ದು, ರಾತ್ರಿ ೧೨ ಗಂಟೆಗೆ ಪುನಃ ಅಮ್ಮನವರ ಗರ್ಭ ಗುಡಿಯ ದ್ವಾರವನ್ನು ಅಮೃತ ಮಣ್ಣಿನಿಂದ ಮುಚ್ಚುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬೀಳಲಿದೆ.

ದೇವಾಲಯ ಜೀರ್ಣೋದ್ಧಾರ
ಹೊಯ್ಸಳ ಕಾಲಕ್ಕೆ ಸೇರಿರುವ ಶಿಥಿಲಾವಸ್ಥೆ ತಲುಪಿದ್ದ ಈ ದೇಗುಲವನ್ನು ೬೦ ಲಕ್ಷ ರೂ. ವೆಚ್ಚದಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಜೀರ್ಣೋದ್ಧಾರ ಮಾಡಿದ್ದಾರೆ. ದೇಗುಲದ ಮುಖ ಮಂಟಪ ಸೇರಿದಂತೆ ದೇಗುಲದ ಸುತ್ತೋಲೆಯಲ್ಲಿ ಸಪ್ತ ಮಾತೃಕೆಯರನ್ನು, ಅಷ್ಟ ಲಕ್ಷ್ಮಿಯರ ವಿಗ್ರಹಗಳನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ದೇಗುಲದ ವಿಮಾನ ಗೋಪುರ ಹಾಗೂ ರಾಜಗೋಪುರವನ್ನು ಆಕರ್ಷಕವಾಗಿ ನಿರ್ಮಿಸಲಾಗಿದೆ.

೨ ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಭಾಗ ಗಳಿಂದ ಆಗಮಿಸುವ ಭಕ್ತಾದಿಗಳಿಗೆ ಶ್ರೀ ಚೌಡೇಶ್ವರಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಎಲ್ಲಾ ರೀತಿಯ ಅನು ಕೂಲ ಕಲ್ಪಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಎಚ್. ಎಸ್. ಜಯಶಂಕರ್, ಕಾರ್ಯದರ್ಶಿ, ಶ್ರೀಚೌಡೇಶ್ವರಿ ದೇವಸ್ಥಾನ ಟ್ರಸ್ಟ್,

ಹೆಮ್ಮನಹಳ್ಳಿಯ ಚೌಡೇಶ್ವರಿ ದೇವಿ ನಂಬಿದವರನ್ನು ಕೈ ಬಿಡುವುದಿಲ್ಲ. ಆದ್ದರಿಂದ ಈ ದೇವರಿಗೆ ರಾಜ್ಯ ಸೇರಿದಂತೆ ವಿವಿಧೆಡೆಗಳಲ್ಲಿ ಅಪಾರವಾದ ಭಕ್ತ ವೃಂದವಿದೆ. ಎಚ್. ಕೆ. ರಾಜಕುಮಾರ್, ಖಜಾಂಚಿ ಶ್ರೀಚೌಡೇಶ್ವರಿ ದೇವಸ್ಥಾನ ಟ್ರಸ್ಟ್,

ವರ್ಷದಲ್ಲಿ ಕೇವಲ ೩೬ ಗಂಟೆಗಳ ಕಾಲ ದರ್ಶನ ನೀಡುವ ಮದ್ದೂರು ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಚೌಡೇಶ್ವರಿ ಅಮ್ಮನ ದೇವಸ್ಥಾನ ಹಲವಾರು ವೈಶಿಷ್ಟ್ಯಗಳನ್ನು ಹೊಂದುವ ಮೂಲಕ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ. -ಕೃಷ್ಣಪ್ಪ, ಅಧ್ಯಕ್ಷರು, ದೇವಸ್ಥಾನ ಟ್ರಸ್ಟ್.

 

Tags:
error: Content is protected !!