Mysore
22
broken clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಕುಟುಂಬಕ್ಕೊಬ್ಬನಾದರೂ ಕೃಷಿಕನಿರಬೇಡವೇ..?

ಎನ್.ಕೇಶವಮೂರ್ತಿ
ಕುಟುಂಬಕ್ಕೊಬ್ಬ ಕೃಷಿಕನಿರಬೇಕು. ಇದು ನಾನು ಹಳ್ಳಿಯಲ್ಲಿರುವ ರೈತಾಪಿ ಕುಟುಂಬಗಳ ಕುರಿತು ಹೇಳುತ್ತಿಲ್ಲ. ಬದಲಿಗೆ ನಗರ, ಪೇಟೆ, ಪಟ್ಟಣಗಳ ಗ್ರಾಹಕ ಕುಟುಂಬಗಳನ್ನು ಉದ್ದೇಶಿಸಿ ಹೇಳುತ್ತಿದ್ದೇನೆ.

ಹಿಂದೆ ಎಲ್ಲ ಕುಟುಂಬಗಳಿಗೂ ಒಬ್ಬ ವೈದ್ಯನಿರುತ್ತಿದ್ದರು. ಇಡೀ ಕುಟುಂಬದವರ ಆರೋಗ್ಯದ ಸಂಪೂರ್ಣ ಮಾಹಿತಿ ಅವರ ಬಳಿ ಇರುತ್ತಿತ್ತು. ಆ ಮನೆಯ ಹಿರಿಯರಿಂದ ಹಿಡಿದು ಕಿರಿಯರವರಗೂ ಯಾರಿಗೆ ಏನೇ ಆರೋಗ್ಯ ಸಮಸ್ಯೆಗಳಾದರೂ ಅವರಿಗೆ ಅದರ ಬಗ್ಗೆ ಅರಿವಿರುತ್ತಿತ್ತು. ಆ ಕುಟುಂಬದ ಹಿಂದಿನ ತಲೆಮಾರಿನ ಅನುವಂಶಿಕ ಕಾಯಿಲೆಗಳ ಬಗ್ಗೆಯೂ ಮಾಹಿತಿ ಇರುತ್ತಿತ್ತು. ಆದರೆ ಈಗ ಸ್ವಲ್ಪ ಮೈ ಬಿಸಿಯಾದರೆ ಸಾಕು ವಿಶೇಷ ತಜ್ಞರ ಬಳಿ ಓಡುವ ಜನರಿಗೆ ಕುಟುಂಬ ವೈದ್ಯರ ಪ್ರಾಮುಖ್ಯತೆಯ ಅರಿವಾಗುವುದಾದರೂ ಹೇಗೆ? ಇರಲಿ ಬಿಡಿ. ಹಿಂದೆ ಕುಟುಂಬಕ್ಕೊಬ್ಬ ವೈದ್ಯ ಇದ್ದಂತೆ, ಈಗ ಕುಟುಂಬಕ್ಕೊಬ್ಬ ಕೃಷಿಕನೂ ಇರಬೇಕು ಅನ್ನುವುದು ನನ್ನ ಅಭಿಪ್ರಾಯ.

ನಗರಗಳಲ್ಲಿ ವಾಸವಾಗಿರುವ ಪ್ರತಿ ಕುಟುಂಬದವರೂ ಒಂದಲ್ಲ ಒಂದು ರೀತಿಯಲ್ಲಿ ಅವರ ಹಿಂದಿನ ತಲೆಮಾರಿನವರಾದರೂ ಹಳ್ಳಿಗಳಲ್ಲಿ ಹುಟ್ಟಿ ಬೆಳೆದಿರುವವರೇ ಆಗಿದ್ದಾರೆ.

ಅವರ ಹಿಂದಿನ ತಲೆಮಾರಿನವರು ಹಳ್ಳಿ ತೊರೆದು ಪೇಟೆ, ಪಟ್ಟಣ ಸೇರಿದ ಪರಿಣಾಮ ಹೊಸ ಪೀಳಿಗೆ ಪಟ್ಟಣಕ್ಕೆ ಹೊಂದಿಕೊಂಡಿದ್ದಾರೆ. ಇನ್ನು ಕೆಲವರು ಜಮೀನಲ್ಲಿ ಕೃಷಿ ಮಾಡಲಾಗದೆ, ಕೃಷಿಯಲ್ಲಿ ಲಾಭವಿಲ್ಲ ಎಂದು ಭಾವಿಸಿ ಇತ್ತೀಚೆಗೆ ನಗರಗಳನ್ನು ಸೇರಿಕೊಂಡಿದ್ದಾರೆ. ಇವರು ಹಳ್ಳಿಗರೊಂದಿಗೆ ಮಾತನಾಡುವಾಗ ನಾವೂ ಹಳ್ಳಿಯವರೇ ಹೇಳಿ ಎಂದು ಹೇಳುವುದನ್ನು ಬಿಟ್ಟರೆ ಹಳ್ಳಿಗೂ, ಹಳ್ಳಿ ಬದುಕಿಗೂ ಇವರಿಗೂ ಸಂಬಂಧವೇ ಇರುವುದಿಲ್ಲ. ಹೀಗಾದರೆ ಹಿರಿಯರಿಗೇ ಇಲ್ಲದ ಮಣ್ಣಿನ ವ್ಯಾಮೋಹ ಮುಂದಿನ ಪೀಳಿಗೆಯ ಮಕ್ಕಳಿಗೆ ಬರುವುದಾದರೂ ಹೇಗೆ? ಹೀಗಾಗಿ ಇಂದಿನ ಮಕ್ಕಳಿಗೆ ಹಾಲಿನ ಮೂಲ ಯಾವುದು ಎಂದರೆ ಹಸುವಿಗಿಂತ ಮೊದಲು ನಂದಿನಿ ಹಾಲಿನ ಕೇಂದ್ರಗಳು ನೆನಪಾಗುತ್ತವೆ.

ಇಂತಹ ಗ್ರಾಹಕ ಕುಟುಂಬಗಳಿಗೆ ಒಂದು ರೈತ ಕುಟುಂಬ ಜತೆಯಾದರೆ ಏನೆಲ್ಲ ಬದಲಾವಣೆಗಳಾಗಬಹುದು? ನಮಗೆಲ್ಲ ತಿಳಿದಿರುವ ವಿಚಾರವೆಂದರೆ ನಾವು ತಿನ್ನುವ ಆಹಾರದಲ್ಲಿ ಏನೇನೂ ಗುಣಮಟ್ಟವಿಲ್ಲ ಎಂಬುದು. ಆದರೂ ನಾವು ಅದೇ ಆಹಾರವನ್ನು ಸೇವಿಸುತ್ತಿದ್ದೇವೆ. ಆದರೆ ಅದನ್ನು ಸರಿಪಡಿಸಲು ನಾವೇನು ಕ್ರಮ ತೆಗೆದುಕೊಂಡಿದ್ದೇವೆ? ಏನೂ ಇಲ್ಲ. ಸಿಕ್ಕ ಆಹಾರವನ್ನೇ ಸೇವಿಸಿ ಜೀವಿಸುತ್ತಿದ್ದೇವೆ.

ಇಂತಹ ಕುಟುಂಬಗಳಿಗೆ ತಮಗೆ ಅಗತ್ಯವಿರುವ ಪೌಷ್ಟಿಕ ಆಹಾರಗಳನ್ನು ಒಂದು ರೈತ ಕುಟುಂಬ ಬೆಳೆದುಕೊಟ್ಟರೇ? ಈ ಕಲ್ಪನೆಯೇ ಎಷ್ಟು ಸೊಗಸು ಅಲ್ಲವೇ? ಇದು ನಿಜಕ್ಕೂ ಸಾಧ್ಯವೆ? ಇಂತಹದೊಂದು ಪ್ರಶ್ನೆ ಮೂಡುವುದು ಸಹಜ. ಒಂದು ಗ್ರಾಹಕ ಕುಟುಂಬಕ್ಕೆ ಬೇಕಾದ ಎಲ್ಲವನ್ನೂ ಒಂದು ರೈತ ಕುಟುಂಬ ಬೆಳೆಯಲು ಸಾಧ್ಯವೇ? ರೈತ ಬೆಳೆದಿದ್ದನ್ನೆಲ್ಲಾ ಒಂದು ಕುಟುಂಬ ಖರೀದಿಸಲು ಸಾಧ್ಯವೇ? ಇದು ಸಾಧ್ಯವಿಲ್ಲದ ಮಾತು ಬಿಡಿ ಎನ್ನಬಹುದು. ಆದರೆ ಒಂದು ಕುಟುಂಬಕ್ಕೆ ಆಗಲಿಲ್ಲ ಎಂದರೆ ಒಂದು ರೈತ ಕುಟುಂಬದ ಬೆಳೆಯನ್ನು ಐದು ಹತ್ತು
ಕುಟುಂಬಗಳು ಜತೆಯಾಗಿ ಖರೀದಿಸಬಹುದಲ್ಲವೇ? ಹೇಗೆ ಹಸು ಸಾಕಿರುವವರ ಬಳಿ ನೇರವಾಗಿ ಹಾಲು ಖರೀದಿಸುತ್ತೇವೆಯೋ ಹಾಗೆಯೇ ಇದು. ಇದರಿಂದ ಹಳ್ಳಿಗಳಿಂದ ನೇರವಾಗಿ ಗುಣಮಟ್ಟದ ಪೌಷ್ಟಿಕ ಆಹಾರ ಪದಾರ್ಥಗಳನ್ನು ಕೊಳ್ಳುವ ಜತೆಗೆ ನಿಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಜತೆಗೆ ಹಳ್ಳಿಯ ಜೀವನ ನಗರದ ಜನರಿಗೆ, ನಗರದ ಜನರಿಗೆ ಹಳ್ಳಿಯ ಜನರ ಪರಿಚಯವಾಗಲಿದೆ. keshavamurthy.n@gmail.com (ಲೇಖಕರು ಮೈಸೂರಿನ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ).

 

Tags:
error: Content is protected !!