124-ಮೈಸೂರು ಜಿಲ್ಲೆಯಲ್ಲಿ ಟಿಕೆಟ್ ನೀಡದ ಅಥವಾ ಪಡೆಯದ ಕಾರಣಕ್ಕಾಗಿ ನಿರ್ವಾಹಕರಿಗೆ ದಂಡ ವಿಧಿಸಿದ ಪ್ರಕರಣ
50- ಮೈಸೂರು ಜಿಲ್ಲೆಯಲ್ಲಿ ಟಿಕೆಟ್ ಟಿಕೆಟ್ ಪಡೆಯದ ಅಥವಾ ನೀಡದ ಪ್ರಕರಣದಲ್ಲಿ ಅಮಾನತ್ತು ಗೊಂಡ ನಿರ್ವಾಹಕರ ಸಂಖ್ಯೆ
ಮೈಸೂರು: ರಾಜ್ಯ ಸರ್ಕಾರದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ನಾಲ್ಕೂ ನಿಗಮಗಳ ಆರ್ಥಿಕ ಸ್ಥಿತಿಯನ್ನು ಗಟ್ಟಿಗೊಳಿಸಿದೆ ಎನ್ನಲಾಗಿದೆ. ಇದೇ ವೇಳೆಯಲ್ಲಿ ಈ ಯೋಜನೆಯು ಬಸ್ ನಿರ್ವಾಹಕರಿಗೆ ಸಂಕಷ್ಟವನ್ನೂ ತಂದೊಡ್ಡುತ್ತಿದೆ.
ಸಾಮಾನ್ಯವಾಗಿ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣಿಕರು ಟಿಕೆಟ್ ಪಡೆಯದೆ ಪ್ರಯಾಣಿಸಿದರೆ, ತಪಾಸಣೆ ಮಾಡು ವಾಗ ನಿಗಮದ ಅಧಿಕಾರಿಗಳಿಗೆ ಸಿಕ್ಕಿಬಿದ್ದರೆ ನಿರ್ವಾಹ ಕರು ದಂಡ ಪಾವತಿಸಬೇಕು ಅಥವಾ ಆ ಪ್ರಯಾಣಿಕರಿಗೆ ಟಿಕೆಟ್ ನೀಡಲಿಲ್ಲ ಎಂಬ ಆರೋಪದಡಿ ಅಮಾನತ್ತು ಶಿಕ್ಷೆಗೂ ಗುರಿಯಾಗಬಹುದು. ಅದು ಆ ನಿರ್ವಾಹಕರ ವಿಶೇಷ ಸೇವಾ ದಾಖಲೆಯಲ್ಲಿ ಕಪ್ಪುಚುಕ್ಕೆ ಯಾಗಿ ಉಳಿದುಬಿಡುತ್ತದೆ.
ಶಕ್ತಿ ಯೋಜನೆಯಡಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸು ವಾಗ ಟಿಕೆಟ್ ವಿತರಣೆ ಮಾಡುವುದು ನಿರ್ವಾಹಕರ ಕರ್ತವ್ಯ. ಒಂದು ವೇಳೆ ನಿರ್ವಾಹಕರು ಮರತು ಟಿಕೆಟ್ ನೀಡದೆಯೋ, ಆ ಮಹಿಳಾ ಪ್ರಯಾಣಿ ಕರು ಟಿಕೆಟ್ ಕೇಳಿ ಪಡೆಯದೆಯೋ ಪ್ರಯಾಣಿಸುವಾಗ ತಪಾಸಣೆ ಅಧಿಕಾರಿಗಳ ತಂಡ ತಪಾಸಣೆ ನಡೆಸುವ ವೇಳೆ ಸಿಕ್ಕಿಬಿದ್ದರೆ, ನಿರ್ವಾಹಕರಿಗೆ ಹೆಚ್ಚು ಕಡಿಮೆ ಅಮಾನತ್ತು ಶಿಕ್ಷೆ ನಿಶ್ಚಿತ. ಆದರೆ, ಟಿಕೆಟ್ ಪಡೆಯದ ಮಹಿಳೆಗೆ ದಂಡ ಎಂಬುದೇನು ಇಲ್ಲ. ಇದು ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿಯಾದ ನಂತರ ಇಂತಹ ಪ್ರಕರಣಗಳಲ್ಲಿ ಈವರೆಗೆ 50 ನಿರ್ವಾಹಕರು ಅಮಾನತ್ತುಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿಗಮದ ಈ ನಿಯಮ ನಿರ್ವಾಹಕರಿಗೆ ‘ನುಂಗಲೂ ಆಗದ, ಉಗುಳಲೂ ಆಗದ ಬಿಸಿ ತುಪ್ಪ’ ದಂತೆ ಆಗಿದೆ.
ಆತಂಕದಿಂದ ಕೆಲಸ ನಿರ್ವಹಣೆ: ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿ ಸುವ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚಳ ವಾಗಿದೆ. ನೂಕು ನುಗ್ಗಲಿನ ನಡುವೆ ನಿರ್ವಾಹಕರು ಟಿಕೆಟ್ ವಿತರಿಸುವುದು ದುಸ್ತರವಾಗಿದೆ. ಇಂತಹದ್ದರಲ್ಲಿ ಕೆಲ ಮಹಿಳೆಯರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಾರೆ. ಇಂಥ ವೇಳೆ ತಪಾ ಸಣಾ ಅಧಿಕಾರಿಗಳು ಬಂದರೆ ಅದರ ಸಂಪೂರ್ಣ ಹೊಣೆಯನ್ನು ನಿರ್ವಾಹಕರು ಹೊರಬೇಕಾಗುತ್ತದೆ.
ಪ್ರಯಾಣ ದರ ಆಧರಿಸಿ ನಿರ್ವಾಹಕರಿಗೆ ಶಿಕ್ಷೆ: ಕೆಎಸ್ ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ 125 ರೂ.ಗೂ ಹೆಚ್ಚಿನ ಟಿಕೆಟ್ ಮೌಲ್ಯ ಹಾಗೂ ಸಾಮಾನ್ಯ ಬಸ್ ನಲ್ಲಿ 100ರಿಂದ 124 ರೂ. ಟಿಕೆಟ್ ಮೌಲ್ಯ ಇರುವ ಪ್ರಯಾಣ ದರದ ಟಿಕೆಟ್ ಪಡೆಯದ ಅಥವಾ ನೀಡದ ಪ್ರಕರಣವನ್ನು ‘ಅಸಾಧಾರಣ ಕೆಂಪು ಗುರುತಿನ ಪ್ರಕರಣ’ ಎಂದು ಪರಿಗಣಿಸಿ ನಿರ್ವಾಹಕರಿಗೆ ಅಮಾನತ್ತು ಶಿಕ್ಷೆ ನೀಡಲಾಗುತ್ತದೆ. ಕೆಲವು ಜಿಲ್ಲೆಗಳ ತಡೆರಹಿತ ಬಸ್‌ನಲ್ಲಿ 56ರಿಂದ 61 ರೂ. ಮೌಲ್ಯದ ಟಿಕೆಟ್ ಹಾಗೂ ಸಾಮಾನ್ಯ ಬಸ್‌ನಲ್ಲಿ 51ರಿಂದ 57 ರೂ. ಮೌಲ್ಯದ ಟಿಕೆಟ್ ನೀಡದ ಅಥವಾ ಪಡೆಯದ ಪ್ರಕರಣವನ್ನು ಕೆಂಪು ಗುರುತಿನ ಪ್ರಕರಣ’ ಎಂದು ಗುರುತಿಸಿ ಕಂಡಕ್ಟರ್ ಕರ್ತವ್ಯ ನಿರ್ವಹಿಸುವ ಮಾರ್ಗವನ್ನು ಬದಲಾವಣೆ ಮಾಡಲಾಗುತ್ತದೆ.
ಕೋಟ್ಸ್))
ಟಿಕೆಟ್ ನೀಡದ ಪ್ರಕರಣಗಳಲ್ಲಿ ಶಿಸ್ತುಕ್ರಮ: ಶಕ್ತಿ ಯೋಜನೆಯು ನಿಗಮಕ್ಕೆ ಲಾಭದಾಯಕವಾಗಿದೆ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಟಿಕೆಟ್ ಪಡೆಯದ ಸಂದರ್ಭದಲ್ಲಿ ಅಥವಾ ಯಾವುದೋ ಕಾರಣದಿಂದ ನಿರ್ವಾಹಕರು ಟಿಕೆಟ್ ನೀಡದೇ ಇದ್ದಾಗ ತಪಾಸಣೆ ವೇಳೆಯಲ್ಲಿ ಸಿಕ್ಕಿಬಿದ್ದರೆ ಅಂತಹ ನಿರ್ವಾಹಕರ ಮೇಲೆ ಶಿಸ್ತು ಕ್ರಮ ಕೂಡ ಕೈಗೊಂಡಿದ್ದೇವೆ. ಶಕ್ತಿ ಯೋಜನೆ ಪ್ರಯೋಜನ ಪಡೆಯುವ ಮಹಿಳೆಯರು ಟಿಕೆಟ್ ಕೇಳಿ ಪಡೆದರೆ ಯಾರಿಗೂ ಸಮಸ್ಯೆ ಆಗುವುದಿಲ್ಲ.
-ಬಿ.ಶ್ರೀನಿವಾಸ, ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್ ಆರ್‌ಟಿಸಿ.
ಮಹಿಳೆಯರಿಗೆ ಅನುಕೂಲ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ ಜಾರಿ ಗೊಳಿಸಿರುವುದರಿಂದ ತುಂಬಾ ಅನುಕೂಲವಾಗಿದೆ. ಬಸ್ ರಶ್ ಇದ್ದಾಗ ನಾವೇ ಟಿಕೆಟ್ ಕೇಳಿ ಪಡೆದರೆ ಕಂಡಕ್ಟರ್‌ಗಳಿಗೆ ಎದು ರಾಗುವ ಸಮಸ್ಯೆ ತಪ್ಪಿಸಬಹುದು. ಅಲ್ಲದೇ ಬಸ್ ಚಾಲಕರೂ ಮಾನವೀಯತೆಯಿಂದ ವರ್ತಿಸಬೇಕು. ಏಕೆದರೆ ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಶಿವಪುರ ಬಸ್ ನಿಲ್ದಾಣದಲ್ಲಿ ಮಹಿಳೆಯರು ಬಸ್‌ಗೆ ಕಾಯುತ್ತಿದ್ದಾಗ ಕೆಲವು ಚಾಲಕರುಗಳು ಬಸ್ ನಿಲ್ಲಿಸದೇ ಹೋಗುತ್ತಾರೆ. ಇದರಿಂದ ಕಚೇರಿಗಳಿಗೆ ಹೋಗುವ ಮಹಿಳೆಯರು ಹಾಗೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗದೆ ತೊಂದರೆ ಆಗುತ್ತಿದೆ.
-ಚೆಲುವಾಂಬಿಕೆ, ಶಕ್ತಿ ಯೋಜನೆ ಫಲಾನುಭವಿ.
ಟಿಕೆಟ್ ಕೇಳಿ ಪಡೆದರೆ ನಮಗೂ ಅನುಕೂಲ: ಮಹಿಳೆಯರು ಟಿಕೆಟ್ ಕೇಳಿ ಪಡೆದರೆ ಸಮಸ್ಯೆ ಆಗದು.ಮಹಿಳೆಯರ ಬಗ್ಗೆ ನಮಗೂ ಗೌರವ ಇದೆ. ಬಸ್ ನಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದಾಗ ಟಿಕೆಟ್ ನೀಡುವಾಗ ಕೆಲವು ಪ್ರಯಾಣಿಕರಿಗೆ ಟಿಕೆಟ್ ನೀಡಿದ್ದೇವೆ ಎಂದು ಭಾವಿಸಿ ಅಥವಾ ಕಣ್ಣಪ್ಪಿನಿಂದ ಮರೆಯುವ ಸಾಧ್ಯತೆ ಇದೆ. ಅಲ್ಲದೇ ಬಸ್‌ಗಳಲ್ಲಿ ಟಿಕೆಟ್ ಕೇಳಿ ಪಡೆಯಿರಿ ಎಂಬ ಸೂಚನಾಫಲಕ ಕೂಡ ಇದೆ. ಹಾಗಾಗಿ ಆಧಾರ್ ಕಾರ್ಡ್ ತೋರಿಸಿ ಟಿಕೆಟ್ ಕೇಳಿ ಪಡೆದರೆ ನಮಗೆ ಯಾವ ಸಮಸ್ಯೆಯೂ ಆಗುವುದಿಲ್ಲ.
-ಈರಣ್ಣ ಭದ್ರಗುಂಡ, ಚಾಲಕ ಹಾಗೂ ನಿರ್ವಾಹಕ.