ಮಂಜು ಕೋಟೆ
ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಅಲೆದಾಡುತ್ತಿರುವ ಸಾರ್ವಜನಿಕರು, ರೈತರು
ಎಚ್.ಡಿ.ಕೋಟೆ: ಕ್ಷೇತ್ರದ ಸರಗೂರು ತಾಲ್ಲೂಕು ಕಚೇರಿಯಲ್ಲಿ ಸಮರ್ಪಕವಾಗಿ ಅಧಿಕಾರಿಗಳು ಮತ್ತು ನೌಕರರು ಇಲ್ಲದಿರುವುದರಿಂದ ಸಾರ್ವಜನಿಕ ಕೆಲಸ ಕಾರ್ಯಗಳು ನಡೆಯದೆ ರೈತರು ಮತ್ತು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರಗೂರು ತಾಲ್ಲೂಕು ಕೇಂದ್ರವಾಗಿ ಏಳೆಂಟು ವರ್ಷಗಳು ಕಳೆದರೂ ತಾಲ್ಲೂಕು ಕೇಂದ್ರದ ಪ್ರಮುಖ ಕಚೇರಿಯಾಗಿರುವ ಆಡಳಿತ ಸೌಧ ಮತ್ತು ತಾಲ್ಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿ ಪ್ರತಿನಿತ್ಯ ನೂರಾರು ರೈತರು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಅಲೆದಾಡುತ್ತಿದ್ದಾರೆ.
ತಹಸಿಲ್ದಾರ್ ಮೋಹನಕುಮಾರಿಯವರು ಸಕ್ರಿಯವಾಗಿದ್ದರೂ ಕಚೇರಿಯಲ್ಲಿ ಕೇಸ್ ವರ್ಕರ್, ಪ್ರಥಮ ದರ್ಜೆ, ದ್ವಿತೀಯ ದರ್ಜೆಯ ನೌಕರರು ಹತ್ತು ಜನಕ್ಕೂ ಕಡಿಮೆಯಿರುವುದು ಅನೇಕ ಕೆಲಸ ಕಾರ್ಯಗಳಿಗೆ ಅಡಚಣೆಯಾಗಿದೆ.
ತಾಲ್ಲೂಕಿನಲ್ಲಿ ಹಿಂದುಳಿದ ವರ್ಗಗಳ ರೈತರು, ಕೂಲಿಕಾರ್ಮಿಕರು, ಗಿರಿಜನರೇ ಹೆಚ್ಚಾಗಿ ವಾಸಿಸುತ್ತಿದ್ದು, ಪ್ರತಿಯೊಂದು ಕುಟುಂಬದಲ್ಲೂ ಜಮೀನಿನ ಸಾಗುವಳಿ ಪತ್ರ ಸೇರಿದಂತೆ ವಿವಿಧ ದಾಖಲಾತಿಗಳ ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸಿಕೊಳ್ಳಲು ಈ ಭಾಗದ ಜನ ಹಲವಾರುವರ್ಷಗಳಿಂದ ಪ್ರತಿನಿತ್ಯವೂ ತಾಲ್ಲೂಕು ಕಚೇರಿಗೆ ಆಗಮಿಸಿ ಮನವಿ ಸಲ್ಲಿಸುತ್ತಿದ್ದಾರೆ.
ಆದರೆ, ಈ ಕಚೇರಿಯಲ್ಲಿ ೧೫ ಜನರು ಕೆಲಸ ನಿರ್ವಹಿಸಬೇಕಾಗಿದ್ದ ಜಾಗದಲ್ಲಿ ಕೇವಲ ೫ ಮಂದಿ ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಇಬ್ಬರು ಏನೂ ಕೆಲಸ ನಿರ್ವಹಿಸದೆ ಕಚೇರಿಯಲ್ಲಿ ಕುಳಿತು ಮನೆಗೆ ವಾಪಸ್ ಹೋಗುತ್ತಾರೆ. ಉಳಿದ ಮೂವರೂ ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗದೆ ತಮ್ಮ ಕೆಲಸ ಕಾರ್ಯಗಳು ಆಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಹೀಗಾಗಿ ದಿನದಿಂದ ದಿನಕ್ಕೆ ರೈತರ ಸಮಸ್ಯೆಗಳು ಹೆಚ್ಚಾಗುತ್ತಿರುವುದು ತಹಸಿಲ್ದಾರ್ ಮೋಹನ ಕುಮಾರಿ, ಮತ್ತಿತರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಅನಿಲ್ ಚಿಕ್ಕಮಾದು, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ, ಸಂಸದ ಸುನಿಲ್ ಬೋಸ್, ಮತ್ತಿತರರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಅಲವತ್ತುಕೊಂಡಿದ್ದಾರೆ.
ಶಾಸಕ ಅನಿಲ್ ಚಿಕ್ಕಮಾದು ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
” ನೌಕರರು ಮತ್ತು ಅಧಿಕಾರಿಗಳ ಕೊರತೆಯಿಂದಾಗಿ ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿ ಸಿಬ್ಬಂದಿ ನೇಮಕ ಮಾಡುವಂತೆ ಅಳಲು ತೋಡಿಕೊಂಡಿದ್ದೇನೆ. ಸಮಸ್ಯೆ ಬಗೆಹರಿಯದೆ ಇದ್ದರೆ ಯಾರೂ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ.”
-ಮೋಹನ ಕುಮಾರಿ, ತಹಸಿಲ್ದಾರ್
” ಸರಗೂರು ತಾಲ್ಲೂಕು ಕಚೇರಿಯಲ್ಲಿ ನೌಕರರು ಮತ್ತು ಅಧೀಕಾರಿಗಳ ಬಹಳಷ್ಟು ಕೊರತೆ ಇರುವುದು ಗೊತ್ತಾಗಿದೆ. ತಾತ್ಕಾಲಿಕವಾಗಿ ಅಥವಾ ಖಾಯಂ ಆಗಿ ಕೆಲಸ ಮಾಡಲು ಕೆಲವರನ್ನು ನೇಮಕ ಮಾಡಲು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ. ಕಚೇರಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡದೆ ಇರುವವರನ್ನು ವರ್ಗಾವಣೆ ಮಾಡಲಾಗುವುದು”
-ಅನಿಲ್ ಚಿಕ್ಕಮಾದು, ಶಾಸಕರು





