ಚಿರಂಜೀವಿ ಸಿ.ಹುಲ್ಲಹಳ್ಳಿ
ಹೃದ್ರೋಗಿಗಳ ಪರದಾಟ; ದಿನಗಟ್ಟಲೆ ಕಾದರೂ ತಪಾಸಣೆ ಕಷ್ಟ
ಮೈಸೂರು: ಹೃದಯ ಸಂಬಂಧಿತ ಸಮಸ್ಯೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಜನಪ್ರಿಯವಾಗಿರುವ ನಗರದ ಜಯದೇವ ಹೃದ್ರೋಗಗಳ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸರ್ವರ್ ಡೌನ್ ಸಮಸ್ಯೆಯಿಂದ ರೋಗಿ ಮತ್ತು ಸಂಬಂಧಿಕರು ಪರದಾಡುವಂತಾಗಿದೆ.
ಜಯದೇವ ಆಸ್ಪತ್ರೆಗೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಹೃದಯ ಸಂಬಂಧಿತ ರೋಗಿಗಳು ಬರುತ್ತಿದ್ದಾರೆ. ಆದರೆ, ಹೊರ ರೋಗಿಗಳ ವಿಭಾಗ, ತುರ್ತು ಚಿಕಿತ್ಸಾ ವಿಭಾಗದಲ್ಲಿ ಸರ್ವರ್ ಡೌನ್ಸಮಸ್ಯೆಯಿಂದ ನಿತ್ಯವೂ ರೋಗಿಗಳ ಸಂಬಂಧಿಕರು ಪರದಾಡುವಂತಾಗಿದೆ.
ಹೃದ್ರೋಗಗಳಿಗೆ ಪ್ರಾಥಮಿಕ ಚಿಕಿತ್ಸೆಗಳಾದ ಇಸಿಜಿ, ಎಕೋ, ಟಿಎಂಟಿ ಪರೀಕ್ಷೆಗಾಗಿ ಜನರು ತುಂಬಿ ತುಳುಕುತ್ತಾರೆ. ಮುಂಜಾನೆ ಏಳು ಗಂಟೆ ವೇಳೆಗೆ ಜನರು ಆಸ್ಪತ್ರೆಗೆ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಕೆಲವರು ಮೊದಲು ಬಂದು ತಮ್ಮ ವಸ್ತುಗಳನ್ನು ಇಟ್ಟು ಜಾಗವನ್ನು ಖಾತರಿ ಮಾಡಿಕೊಂಡಿರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ಸರ್ವರ್ ಡೌನ್ ಸಮಸ್ಯೆಯಿಂದ ಹೆಸರು ನೋಂದಾಯಿಸುವಿಕೆ ಹಾಗೂ ಇತರೆ ತಪಾಸಣೆಗಳಿಗೆ ಒಳಗಾಗಲು ಗಂಟಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.
ಸರ್ಕಾರಿ ಆಸ್ಪತ್ರೆಯಾಗಿರುವ ಕಾರಣ ಯಶಸ್ವಿನಿ, ಬಿಪಿಎಲ್ ಕಾರ್ಡ್ ಸೇರಿದಂತೆ ವಿವಿಧ ಆರೋಗ್ಯ ವಿಮೆ ಕಾರ್ಡ್‌ಗಳಿಗೆ ಎಲ್ಲ ರಿಯಾಯಿತಿ ದರದ ಚಿಕಿತ್ಸೆಯ ಸೌಲಭ್ಯಗಳೂ ದೊರೆಯುತ್ತದೆ. ಎಸ್‌ಸಿ, ಎಸ್‌ಟಿಸಮುದಾಯದವರಿಗೆ ವಿಶೇಷ ರಿಯಾಯಿತಿ ಇದೆ. ಅಲ್ಲದೆ, ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಮಸ್ಯೆ ಇಲ್ಲದಿದ್ದರೂ, ಸಾರ್ವಜನಿಕರು ಹೃದಯ ತಪಾಸಣೆ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದಾರೆ.
ಸರ್ವರ್ ಡೌನ್ ಸಮಸ್ಯೆಯಿಂದ ರೋಗಿಗಳ ತಪಾಸಣೆ ತಡವಾಗುತ್ತಿದೆ. ದಾಖಲೆಗಳನ್ನು ವೆಬ್‌ಸೈಟ್ನಲ್ಲಿ ಸಂಗ್ರಹಿಸುವ ಕೆಲಸವಾಗದೆ, ಹಲವರು ಚಿಕಿತ್ಸೆಯ ಜೊತೆಗೆ ಸೌಲಭ್ಯಗಳಿಂದಲೂ ವಂಚಿತರಾಗುವ ಸಂದರ್ಭಗಳು ಎದುರಾಗಿವೆ.
ಡಿಸ್‌ಚಾರ್ಜ್‌ಗೆ ವಿಳಂಬ: ಸರ್ಕಾರಿ ಸೌಲಭ್ಯದ ದಾಖಲಾತಿಗಳು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಆಗದೆಆಸ್ಪತ್ರೆಯಿಂದ ರೋಗಿಗಳನ್ನು ಡಿಸ್‌ಚಾರ್ಜ್ ಮಾಡುವುದಿಲ್ಲ. ಶಸ ಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿ ಮನೆಗೆ ಮರಳಬೇಕಾದ ರೋಗಿಗಳು, ಈ ಸರ್ವರ್ ಡೌನ್ ಸಮಸ್ಯೆಯಿಂದ ಇನ್ನೂ ಒಂದೆರಡು ದಿನಗಳು ಆಸ್ಪತ್ರೆಯ ವಾಸ ಮುಂದುವರಿಸುವುದು ಅನಿವಾರ್ಯವಾಗಿದೆ.
ಸಿಬ್ಬಂದಿ ದುರ್ವರ್ತನೆ: ಹೃದ್ರೋಗದ ಚಿಕಿತ್ಸೆ ಸಂಬಂಧ ಜನರ ವಿಶ್ವಾಸಾರ್ಹತೆಗೆ ಪಾತ್ರವಾಗಿರುವ ಆಸ್ಪತ್ರೆಯು, ಕೇವಲ ಇಂಟರ್‌ನೆಟ್ ಒದಗಿಸಲಾಗದೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.
‘ನಾವು ಮಾಡೋತನಕ ಸುಮ್ನೆ ನಿಂತ್ಕೊ ಬೇಕು. ಇಲ್ಲ ಹೋಗ್ತಾ ಇರಿ ಎಂಬ ದರ್ಪದ ಮಾತುಗಳನ್ನಾಡುತ್ತಾರೆ.ಉದಾಸೀನದಿಂದ ಕೆಲಸ ಮಾಡುತ್ತಾರೆ. ಮೊಬೈಲ್ ಹಾಟ್‌ಸ್ಪಾಟ್ ಕನೆಕ್ಟ್ ಮಾಡಿಕೊಂಡು ಮಾನವೀಯತೆಯ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಚಿಕಿತ್ಸೆಗೆ ಬೇಕಾದರೆ ಇರಿ. ಇಲ್ಲವಾದರೆ ಆಸ್ಪತ್ರೆಯ ಮುಖ್ಯ ಅಽಕ್ಷಕರಿಗೆ ದೂರು ಕೊಡಿ ಹೋಗಿ ಎನ್ನುತ್ತಾರೆ ಎಂದು ರೋಗಿಯ ಸಂಬಂಧಿ ಚಂದ್ರು ತಿಳಿಸಿದರು.
ಮೊಬೈಲ್ ಹಾಟ್‌ಸ್ಪಾಟ್ ಮೂಲಕ ಕೆಲಸ: ಆಸ್ಪತ್ರೆಯಲ್ಲಿ ಇಂಟರ್ ನೆಟ್ ಸೇವೆಯಲ್ಲಿ ದೋಷ ಉಂಟಾಗಿರುವುದರಿಂದ ಸಿಬ್ಬಂದಿ ತಮ್ಮ ಮೊಬೈಲ್ ಹಾಟ್‌ಸ್ಪಾಟ್ ಕನೆಕ್ಟ್ ಮಾಡಿಕೊಂಡು ದಾಖಲೆಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುತ್ತಿದ್ದಾರೆ. ಆದರೆ, ಇದು ಕೂಡ ತುಂಬ ನಿಧಾನವಾಗಿ ನಡೆಯುತ್ತಿದೆ ಎಂಬುದಾಗಿ ದೂರುಗಳು ಕೇಳಿಬಂದಿವೆ.
” ಎರಡು ತಿಂಗಳುಗಳ ಹಿಂದೆ ನಮ್ಮ ತಾತನನ್ನು ಹೃದ್ರೋಗ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದೆ. ಆಗಲೂ ಆಸ್ಪತ್ರೆಯಲ್ಲಿ ಸರ್ವರ್ ಡೌನ್ ಆಗಿತ್ತು. ಆದರೆ, ಇಂದು ನಮ್ಮ ಪರಿಚಯಸ್ಥರ ತಂದೆಯ ಚಿಕಿತ್ಸೆಗೆಂದು ಬಂದಾಗಲೂ ಅಂತಹದ್ದೇ ಸಮಸ್ಯೆ ಇದೆ. ಜೊತೆಗೆ ಸಿಬ್ಬಂದಿ ದುರ್ವರ್ತನೆ ತೋರಿಸುತ್ತಾರೆ. ಸಂಬಂಽಸಿದವರು ಆಸ್ಪತ್ರೆಯ ವಿಶ್ವಾಸರ್ಹತೆ ಕಾಪಾಡುವ ದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಬೇಕು.”
ಚಂದ್ರು, ಮೈಸೂರು
” ಸರ್ವರ್ ಡೌನ್ ಸಮಸ್ಯೆಯನ್ನು ಬಗೆಹರಿಸುವಂತೆ ಬಿಎಸ್ಎನ್‌ಎಲ್ ಸಂಸ್ಥೆಗೆ ನಿತ್ಯ ಸೂಚನೆ ನೀಡುವ ಕೆಲಸವಾಗುತ್ತಿದೆ. ಆದರೆ, ಸಮಸ್ಯೆ ಬಗೆಹರಿಯದೆ ಇಂಟರ್‌ನೆಟ್ ಸಮಸ್ಯೆ ಉದ್ಭವವಾಗಿದೆ. ಸಿಬ್ಬಂದಿಗಳ ದುವರ್ತನೆಯ ಕುರಿತು ನನಗೆ ತಿಳಿದುಬಂದಿಲ್ಲ. ಅಂತಹ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.”
ಡಾ.ಕೆ.ಎಸ್.ಸದಾನಂದ, ಅಧೀಕ್ಷಕರು, ಜಯದೇವ ಹೃದ್ರೋಗ ಆಸ್ಪತ್ರೆ, ಮೈಸೂರು





