ಕೆ.ಟಿ.ಮೋಹನ್ ಕುಮಾರ್
ಗ್ರಾಮದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ, ಬಸ್ ಸೌಕರ್ಯವಿಲ್ಲದೆ ನಿತ್ಯ ಗ್ರಾಮಸ್ಥರ ಪರದಾಟ
ಸಾಲಿಗ್ರಾಮ: ಶುದ್ಧ ಕುಡಿಯುವ ನೀರಿಲ್ಲ, ಗ್ರಾಮದೊಳಗೆ ಚರಂಡಿಗಳಿಲ್ಲ, ಸಾರಿಗೆ ಸಂಪರ್ಕ ಇಲ್ಲವೇ ಇಲ್ಲ, ರಸ್ತೆ ಇದ್ದರೂ ಇಲ್ಲದಂತಾಗಿದೆ. ಹೌದು, ಇಂತಹ ಸಮಸ್ಯೆಗಳಿರುವುದುತಾಲ್ಲೂಕಿನ ಸೆಣಬಿನಕುಪ್ಪೆ ಗ್ರಾಮದಲ್ಲಿ. ತಾಲ್ಲೂಕಿನ ಕರ್ಪೂರವಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ೨೫ಕ್ಕೂ ಹೆಚ್ಚಿನ ಮನೆಗಳಿವೆ.
ಗ್ರಾಮದಲ್ಲಿನ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸುವ ಹಿತದೃಷ್ಟಿಯಿಂದ ಈ ಹಿಂದೆ ಗ್ರಾಮದ ಕೆರೆಯ ಹತ್ತಿರ ಒಂದು ಕೊಳವೆ ಬಾವಿಯನ್ನು ತೆಗೆದು ಅದರ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಆದರೆ ಆ ಕೊಳವೆ ಬಾವಿಯ ಮೋಟಾರ್ ೪ ವರ್ಷಗಳ ಹಿಂದೆ ಕೆಟ್ಟು ಹೋಗಿದ್ದು, ಅದನ್ನು ರಿಪೇರಿ ಮಾಡಿಸಿ ತಂದು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಹೇಳಿ ಗ್ರಾಮ ಪಂಚಾಯಿತಿಯವರು ಮೋಟಾರ್ ಮತ್ತು ಪೈಪ್‌ಗಳನ್ನು ತೆಗೆದುಕೊಂಡು ಹೋದವರು ಇದುವರೆಗೂ ಅದನ್ನು ರಿಪೇರಿ ಮಾಡಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಗ್ರಾಮದ ಜನರಿಗೆ ಕುಡಿಯುವ ನೀರನ್ನು ಕಾವೇರಿ ನದಿಯಿಂದ ಪೂರೈಸಲಾಗುತ್ತಿದೆ. ಆದರೆ ಈ ನೀರು ಸರಬರಾಜು ಆಗುವ ಮಿನಿ ವಾಟರ್ ಟ್ಯಾಂಕ್‌ಗಳು ಅಶುಚಿತ್ವದಿಂದ ಕೂಡಿದ್ದು, ಪಾಚಿ ಬೆಳೆದು ಗಬ್ಬು ನಾರುತ್ತಿವೆ. ಆ ನೀರಿನ ಘಟಕಗಳ ಸುತ್ತಲೂ ಗಿಡಗಂಟಿಗಳು ಬೆಳೆದು ಕೊಳಚೆ ನೀರು ತುಂಬಿ ಅನೈರ್ಮಲ್ಯ ಉಂಟಾಗಿದೆ. ಗ್ರಾಮದಲ್ಲಿ ಒಂದು ಕೈಪಂಪನ್ನು ತೆಗೆಯಲಾಗಿದೆ.
ಆದರೆ ಅದರಲ್ಲಿ ಬರುವ ನೀರು ಮಣ್ಣು ಮಿಶ್ರಿತಗೊಂಡು ಕಲುಷಿತವಾಗಿ ಬರುತ್ತಿದೆ. ಈನೀರನ್ನು ಸೇವಿಸುವುದರಿಂದ ಗ್ರಾಮದಲ್ಲಿ ಬಹಳಷ್ಟು ಬಾರಿ ಮಕ್ಕಳು ಹಾಗೂ ಸಾರ್ವಜನಿಕರು ಅನಾ ರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ಆಗಾಗ್ಗೆ ಹೋಗುತ್ತಿದ್ದೇವೆ ಎಂದು ಮಹಿಳೆಯರು ಅಳಲನ್ನು ತೋಡಿಕೊಂಡಿದ್ದಾರೆ.
ಕೆರೆಯ ಭಾಗದಲ್ಲಿ ಕೊಳವೆ ಬಾವಿಯನ್ನು ತೆಗೆದಿದ್ದು ಅದು ಈಗಲೂ ಕೂಡ ತೆರೆದಿದ್ದು, ಏನಾದರೂ ಅವಘಡಗಳು ನಡೆದರೆ ಅದಕ್ಕೆ ಯಾರು ಜವಾಬ್ದಾರಿ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಚರಂಡಿ ವ್ಯವಸ್ಥೆಯನ್ನು ಮಾಡದಿರುವುದರಿಂದ ನೀರು ರಸ್ತೆಯಲ್ಲೆಲ್ಲಾ ಹರಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಜೊತೆಗೆ ಮಳೆಗಾಲದಲ್ಲಂತೂ ಜಮೀನಿನ ನೀರು ಊರಿನ ಮುಖ್ಯ ರಸ್ತೆಯಲ್ಲಿ ಹರಿಯುವ ಮೂಲಕ ಮನೆಗಳಿಗೂ ನುಗ್ಗುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಗ್ರಾಮದಲ್ಲಿ ಒಂದರಿಂದ ಐದನೇ ತರಗತಿಯವರೆಗಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಇದೆ. ಇಲ್ಲಿ ೧೫ ಮಕ್ಕಳು ಕಲಿಯುತ್ತಿದ್ದಾರೆ. ಒಬ್ಬರು ಮಾತ್ರ ಶಿಕ್ಷಕರಿದ್ದಾರೆ. ಆದರೆ ಅಂಗನವಾಡಿ ಕೇಂದ್ರವಾಗಲಿ ಅಥವಾ ಮಿನಿ ಅಂಗನವಾಡಿ ಕೇಂದ್ರವಾಗಲಿ ಇಲ್ಲ. ಜೊತೆಗೆ ನ್ಯಾಯಬೆಲೆ ಅಂಗಡಿಯಾಗಲಿ ಅಥವಾ ಅದರ ಉಪ ಕೇಂದ್ರವಾಗಲಿ ಇಲ್ಲ ಹಾಗೂ ಗ್ರಾಮದಲ್ಲಿ ಒಬ್ಬ ಆಶಾ ಕಾರ್ಯಕರ್ತೆಯೂ ಇಲ್ಲ.
ಪ್ರತಿನಿತ್ಯ ಈ ಗ್ರಾಮದಿಂದ ವಿದ್ಯಾಭ್ಯಾಸಕ್ಕಾಗಿ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾಲ್ಲೂಕು ಕೇಂದ್ರ ವಾದ ಸಾಲಿಗ್ರಾಮಕ್ಕೆ ಹೋಗುತ್ತಾರೆ. ಆದರೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಾರಿಗೆ ವ್ಯವಸ್ಥೆ ಇಲ್ಲ. ಇವರುಗಳೆಲ್ಲ ಗ್ರಾಮದಿಂದ ೩ ಕಿ.ಮೀ. ದೂರದಲ್ಲಿರುವ ಹೊಳೆನರಸೀಪುರ – ಸಾಲಿಗ್ರಾಮ ಮುಖ್ಯ ರಸ್ತೆಯಲ್ಲಿನ ತಂದ್ರೆಕೊಪ್ಪಲು ಗೇಟ್‌ವರೆಗೆ ನಡೆದುಕೊಂಡು ಹೋಗಬೇಕಾಗಿದೆ. ಇಷ್ಟೆಲ್ಲಾ ಸಮಸ್ಯೆಗಳ ಜತೆಗೆ ರಸ್ತೆಗಳೂ ತೀರಾ ಹದಗೆಟ್ಟಿವೆ. ಊರಿನಿಂದ ಜಮೀನುಗಳಿಗೆ ಹೋಗುವ ರಸ್ತೆಗಳು ಹದಗೆಟ್ಟಿದ್ದು ತೊಂದರೆ ಎದುರಿಸುವಂತಾಗಿದೆ.
ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನಹರಿ ಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಕೂಡ ಒಂದು ಗ್ರಾಮಕ್ಕೆ ಅಗತ್ಯವಾಗಿ ಬೇಕಾಗಿರುವ ಮೂಲಸೌಲಭ್ಯಗಳು ಇದುವರೆಗೂ ದೊರಕಿಲ್ಲ. ಈ ಗ್ರಾಮಕ್ಕೆ ಅಗತ್ಯ ಮೂಲಸೌಕರ್ಯಗಳು ಯಾವಾಗ ದೊರಕುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.
” ನಮ್ಮ ಗ್ರಾಮಕ್ಕೆ ಶುದ್ಧಕುಡಿಯುವ ನೀರಿನ ಸರಬರಾಜು ಕಾರ್ಯಕ್ಕೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡುವ ಮೂಲಕ ನೈರ್ಮಲ್ಯತೆಯನ್ನು ಕಾಪಾಡಬೇಕು.”
– ರವಿ, ಗ್ರಾಮದ ಯುವಕ
” ನಮ್ಮೂರಿನ ಮಕ್ಕಳು ದೂರದೂರಿಗೆ ಓದಲು ಹೋಗುತ್ತಿದ್ದು ಗ್ರಾಮಕ್ಕೆ ಸಾರಿಗೆ ವ್ಯವಸ್ಥೆಯನ್ನು ಮಾಡಿಕೊಡಬೇಕು ಹಾಗೂ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು.”
-ರಾಮೇಗೌಡ, ಗ್ರಾಮಸ್ಥ
” ಗ್ರಾಮದಲ್ಲಿನ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದ ನಂತರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಾರ್ವಜನಿಕರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮವಹಿಸಲಾಗುವುದು.”
-ಭಾಸ್ಕರ, ಪಿಡಿಒ, ಕರ್ಪೂರವಳ್ಳಿ ಗ್ರಾಮ ಪಂಚಾಯಿತಿ





