Mysore
19
overcast clouds
Light
Dark

ವಯನಾಡು ನೋಡಿ ಹರಿಯುತ್ತಿದೆ ದುಃಖದ ಕೋಡಿ….

  • ಸಾಕ್ಷತ್‌ ವರದಿ: ರಶ್ಮಿ ಕೋಟಿ, ಆಂದೋಲನ

ಅಲ್ಲಿ ಜನರಿಗೆ ಉಸಿರು ನೀಡುವ ಹಸಿರು ತುಂಬಿತ್ತೆ. . ? ಎಂಬ ಪ್ರಶ್ನೆ ಕಾಡುತ್ತದೆ. ಆ ಜಾಗದಲ್ಲಿ ನಾಲ್ಕು ಊರುಗಳಿದ್ದವು. . . ಸಾವಿರಾರು ಕುಟುಂಬಗಳು ವಾಸವಿದ್ದವು ಎಂದರೆ ನಂಬಲಾಗದು. . . ಏಕೆಂದರೆ ಎಲ್ಲವೂ ನೆಲಸಮವಾಗಿದ್ದವು. ಯಾವುದೋ ಕಾಲದ ಪಳೆಯುಳಿಕೆಗಳಂತೆ ಅಲ್ಲೊಂದು, ಇಲ್ಲೊಂದು ಮನೆ ಅನಾಥಪ್ರಜ್ಞೆಯನ್ನು ಅನುಭವಿಸು ವಿಸುತ್ತಾ ನಿಂತಿರುವಂತೆ ಭಾಸವಾಗುತ್ತಿತ್ತು. ಇದು ಭೂ ಕುಸಿತದಿಂದ ಇನ್ನೂರಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿ ರುವ, ಸಾವಿರಾರು ಜನರು ನೋವಿಗೆ ತುತ್ತಾಗಿ ರುವ ವಯನಾಡು ಜಿಲ್ಲೆಯ ಕರುಳನಿರಿಯುವ ಚಿತ್ರಣ.

ಪ್ರಕೃತಿಯ ವಿಕೋಪದಿಂದ ಹೆತ್ತವರು, ಮಕ್ಕಳು, ಮನೆ ಕಳೆದುಕೊಂಡಿರುವ ಸಂತ್ರಸ್ತರ ನೆರವಿಗೆ ಧಾವಿಸಿರುವ ಎನ್‌ಡಿಆರ್ ಎಫ್, ಭಾರತೀಯ ಸೇನೆ, ಕೇರಳ ರಾಜ್ಯದ ಪೊಲೀಸರು, ಅರಣ್ಯ ಅಽಕಾರಿಗಳು ಮತ್ತು ೫೦೦- ೬೦೦ ಸ್ವಯಂ ಸೇವಕರು ಸೇರಿ ಸಾಕಷ್ಟು ಮಾನವೀಯ ಮನಸ್ಸುಳ್ಳ ಜನರು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ವಾಸ್ತವವಾಗಿ, ಇನ್ನೂ ದಟ್ಟವಾದ ಮೋಡಗಳು ಆವರಿಸಿದ್ದರೂ ಅದರ ಅಂಚಿನಲ್ಲಿ ಬೆಳ್ಳಿಯ ಹೊದಿಕೆಯಂತೆ ಮಾನವೀಯ ಮನಸ್ಸುಗಳು ಸೇರಿ ಪ್ರತಿಕೂಲವಾದ ಪರಿಸ್ಥಿತಿಯನ್ನು ಭರವಸೆಯೊಂದಿಗೆ ಎದುರಿಸುತ್ತಿರುವ ದೃಶ್ಯ ಮಾನವ ಪ್ರೀತಿ, ಕರುಣೆ, ಮಮತೆ ಗುಣಗಳ ಜೀವಂತಿಕೆಗೆ ಸಾಕ್ಷಿಯಾಗಿದೆ. ರಕ್ಷಣಾ ಕಾರ್ಯ ಇನ್ನೂ ಮುಂದುವರೆದಿದೆ.

ಜುಲೈ ೩೦ ರಂದು ವಯನಾಡು ಜಿಲ್ಲೆಯಲ್ಲಿ ಎರಡು ಬಾರಿ ಭೂ ಕುಸಿತ ಸಂಭವಿಸಿದ್ದು, ಮುಂಜಾನೆ ೨ ಗಂಟೆಗೆ ಮೊದಲನೇ ಸಲ, ನಂತರ ೪. ೧೦ಕ್ಕೆ ಎರಡನೇ ಸಲ. ಮೊದಲನೆಯ ಭೂ ಕುಸಿತ ಮುಂಡಕ್ಕೈ ಪಟ್ಟಣದಲ್ಲಿ ಮತ್ತು ಎರಡನೆಯದು ಚೂರಲ್ ಮಲೈನಲ್ಲಿ ಘಟಿಸಿದೆ. ಮುಂಡಕ್ಕೈ, ಚೂರಲ್ ಮಲೈ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂ ಕುಸಿತದಿಂದ ಹಾನಿಗೊಳಗಾಗಿದ್ದರೆ, ಮುಂಡಕ್ಕೈ ಮತ್ತು ಚೂರಲ್ ಮಲೈ ಅತಿ ಹೆಚ್ಚಿನ ದುಷ್ಟರಿಣಾಮಗಳನ್ನು ಎದುರಿಸಿದೆ. ಈ ಪ್ರದೇಶದ ಚೆಲಿಯಾರ್ ನದಿಯು ಈಗ ಅದರ ಮೂಲ ಮಾರ್ಗದಿಂದ ಇಬ್ಭಾಗವಾಗಿ ಹರಿಯಲಾರಂಭಿಸಿದ್ದು, ಇದರಿಂದಾಗಿ ಅಪಾರ ಜೀವ ಹಾನಿಯಾಗಿದ್ದು, ವ್ಯಾಪಕ ವಿನಾಶಕ್ಕೆ ಕಾರಣವಾಗಿದೆ.

ಈ ಭಾರೀ ಭೂ ಕುಸಿತದಲ್ಲಿ ಮನೆಗಳೇ ಕೊಚ್ಚಿ ಹೋದವು, ರಸ್ತೆಗಳು ಹಾನಿಗೊಳಗಾದವು, ಮರಗಳು ಬುಡ ಸಮೇತ ಕಿತ್ತುಬಂದವು, ವೆಲ್ಲರ್ ಮಲಾ ಜಿವಿಎಚ್ ಶಾಲೆ ಸಂಪೂರ್ಣ ಸಮಾಽಯಾಯಿತು. ಮುಂಡಕ್ಕೈ ಹಾಗೂ ಚೂರಲ್ ಮಲಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಕೊಚ್ಚಿಹೋಗಿ ಮೇಪ್ಪಾಡಿ, ಮುಂಡಕ್ಕೈ, ಚೂರಲ್ ಮಲೈ ಸೇರಿದಂತೆ ಹಲವು ಪ್ರದೇಶಗಳು ಪ್ರತ್ಯೇಕಗೊಂಡಿವೆ.

ಬುಧವಾರದಂದು ಎನ್‌ಡಿಆರ್‌ಎಫ್, ಅರಣ್ಯ ಅಧಿಕಾರಿಗಳು ಮತ್ತು ಸ್ವಯಂಸೇವಕರು ಸೇರಿ ಐರವಾಹಿಂಜಿ ನದಿಗೆ ಹಗ್ಗದ ಸೇತುವೆಯೊಂದನ್ನು ನಿರ್ಮಿಸಿ ಮುಂಡಕ್ಕೈನಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ಸೇತುವೆಯು ಮುರಿದುಬಿದ್ದಿದರಿಂದ ರಕ್ಷಣಾ ಕಾರ್ಯ ಸ್ಥಗಿತಗೊಂಡಿತ್ತು. ನಂತರ ಸ್ಥಳಕ್ಕಾಗಮಿಸಿದ ಭಾರತೀಯ ಸೇನೆಯು ತನ್ನ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಿತು. ಈಗ ವಯನಾಡಿನ ಗುಡ್ಡಗಾಡು ಗ್ರಾಮವಾದ ಮುಂಡಕ್ಕೈನಲ್ಲಿ ಸಿಕ್ಕಿಹಾಕಿಕೊಂಡಿರುವ ನೂರಾರು ಜನರು ಚೂರಲ್ ಮಲೈ ಗ್ರಾಮ ಮತ್ತು ಮುಂಡಕ್ಕೈ ಗ್ರಾಮವನ್ನು ಸಂಪರ್ಕಿಸಲು ಭಾರತೀಯ ಸೇನೆಯು ಬೈಲಿ ಸೇತುವೆಯನ್ನು ನಿರ್ಮಿಸಿ ೧೦೦ಕ್ಕೂ ಹೆಚ್ಚು ಜನರನ್ನು ಈಗಾಗಲೇ ರಕ್ಷಿಸಿದೆ. ಮಾನವ ನಿರ್ಮಿತ ಸೇತುವೆಗಳು ಮತ್ತು ಮಾನವ ಪ್ರಯತ್ನವನ್ನು ಬಳಸಿಕೊಂಡು ಇದುವರೆಗೆ ೧,೦೦೦ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಸೇನೆಯ ದಕ್ಷಿಣ ಕಮಾಂಡರ್ ತಿಳಿಸಿದರು. ಉಕ್ಕಿ ಹರಿಯುತ್ತಿದ್ದ ನದಿಯ ಪ್ರವಾಹ, ಭೂ ಕುಸಿತದ ವೇಳೆ ಬಂದು ಅಪ್ಪಳಿಸಿದ್ದ ದೈತ್ಯಾಕಾರದ ಬಂಡೆಗಳು, ಎಡೆಬಿಡದೆ ಸುರಿಯುತ್ತಿದ್ದ ಮಳೆಗೆ ಎದೆಯೊಡ್ಡಿದ ರಕ್ಷಣಾ ತಂಡ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.