ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿವಿ
ಅಶೋಕಪುರಂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ
೨,೦೦೦ ಇದ್ದ ವಿದ್ಯಾರ್ಥಿಗಳ ಸಂಖ್ಯೆ ೫೦ಕ್ಕೆ ಕುಸಿತ
ವಿ.ಶ್ರೀನಿವಾಸ ಪ್ರಸಾದ್ ದತ್ತು ಪಡೆದಿದ್ದಾಗ ಸಾಕಷ್ಟು ಅಭಿವೃದ್ಧಿ
ಈಗ ದಾನಿಗಳ ನಿರೀಕ್ಷೆಯಲ್ಲಿ ಇರುವ ಶಾಲೆ
ಮೈಸೂರು: ಶತೋತ್ತರ ರಜತ ಮಹೋತ್ಸವದತ್ತ ಹೆಜ್ಜೆ ಇಡುತ್ತಿರುವ ಶಾಲೆ… ಕಾಲಕ್ಕೆ ತಕ್ಕಂತೆ ಸವಲತ್ತುಗಳು, ಸೌಕರ್ಯಗಳನ್ನು ಒಡಲಿಗೆ ಸೇರಿಸಿಕೊಳ್ಳುತ್ತಿತ್ತು. ಇದೇ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಈ ಶಾಲೆಯನ್ನು ದತ್ತು ಪಡೆದಿದ್ದರು. ಅವರ ನಿಧನರಾದ ನಂತರ ಶಾಲೆಯ ಅಭಿವೃದ್ಧಿಗೆ ಅಡ್ಡಿ ಉಂಟಾಗಿದೆ.
ಇದು ನಗರದ ಅಶೋಕಪುರಂನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆ- ವ್ಯಥೆ. ಹಿರಿಯ ಮುತ್ಸದ್ದಿ ವಿ.ಶ್ರೀನಿವಾಸ ಪ್ರಸಾದ್ ಅವರು ಈ ಶಾಲೆಯನ್ನು ದತ್ತು ಪಡೆದಿದ್ದರು. ಅವರು ೨೦೨೦೪ರ ಏಪ್ರಿಲ್ ೨೯ರಲ್ಲಿ ನಿಧನರಾದರು. ನಂತರ ದಾನಿಗಳಿಲ್ಲದೆ ಶಾಲೆಯ ಪ್ರಗತಿ ಕಾರ್ಯಗಳು ಕುಂಟುತ್ತಾ ಸಾಗಿವೆ. ೧೯೦೨ರಲ್ಲಿ ಸ್ಥಾಪನೆಯಾದ ಈ ಶಾಲೆಯು ಶತೋತ್ತರ ಬೆಳ್ಳಿ ಹಬ್ಬದತ್ತ ಹೆಜ್ಜೆ ಹಾಕಿದೆ. ಇಲ್ಲಿ ಶತಮಾನೋತ್ಸವ ಭವನವನ್ನು ಕಟ್ಟಲಾಗಿದೆ.
ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಪ್ರಸ್ತುತ ೧ ರಿಂದ ೭ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ೫೦ ಮಕ್ಕಳಿದ್ದಾರೆ. ಈ ಶಾಲೆಯನ್ನು ವಿ. ಶ್ರೀನಿವಾಸ ಪ್ರಸಾದ್ ಅವರು ೧೯೯೮-೯೯ನೇ ಸಾಲಿನಲ್ಲಿ ದತ್ತು ಪಡೆದಿದ್ದರು. ಅವರು ನಿಧನರಾದ ನಂತರ ಈ ಶಾಲೆಯನ್ನು ದತ್ತು ಪಡೆಯಲು ಯಾರೂ ಮುಂದೆ ಬಂದಿಲ್ಲ. ಇದರಿಂದ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ‘ಶ್ರೀನಿವಾಸ ಪ್ರಸಾದ್ ಅವರು ದತ್ತು ತೆಗೆದುಕೊಂಡು ಈ ಶಾಲೆಯನ್ನು ಮುನ್ನಡೆಸುತ್ತಿದ್ದರು. ಹಲವು ಅಭಿವೃದ್ಧಿ ಕೆಲಸಗಳನ್ನೂ ಮಾಡಿಕೊಟ್ಟಿದ್ದರು. ಎಲ್ಲರ ಸಹಕಾರದಿಂದ ಶಾಲೆ ಇನ್ನೂ ಗಟ್ಟಿಯಾಗಿಯೇ ಉಳಿದಿದೆ ಎಂಬುದು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಕೆ.ಎಸ್. ಮಹೇಶ್ವರಿ ಅವರ ಭಾವುಕ ಮಾತು.
೨,೦೦೦ ಮಕ್ಕಳು ಕಲಿಯುತ್ತಿದ್ದಂತಹ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಈಗ ೫೦ಕ್ಕೆ ಕುಸಿದಿದೆ. ದಲಿತ ಮಕ್ಕಳ ಶಾಲೆ ಎಂದೇ ಗುರುತಿಸಿಕೊಂಡಿದ್ದ ಈ ಶಾಲೆಯು ಕೆಲ ವರ್ಷಗಳಿಂದ ಪೋಷಕರ ಇಂಗ್ಲಿಷ್ ವ್ಯಾಮೋಹಕ್ಕೆ ತತ್ತರಿಸಿ ಹೋಗಿದೆ ಎಂದು ಹೇಳಿದರೂ ತಪ್ಪಾಗಲಾರದು. ಸಮೀಪದಲ್ಲಿರುವ ಶಾರದಾ ವಿಲಾಸ ಕಾಲೇಜು, ಸಿಕೆಸಿ ಶಾಲೆ ಸೇರಿದಂತೆ ಅನೇಕ ಖಾಸಗಿ ಶಾಲೆಗಳ ಹೊಡೆತ, ಈ ಶಾಲೆಗೆ ಮಕ್ಕಳ ದಾಖಲಾತಿ ಪ್ರಮಾಣವನ್ನು ಕುಗ್ಗಿಸಿದೆ. ಇದರ ಜೊತೆಗೆ ಆರ್‌ಟಿಇ ಅನುಕೂಲತೆಯೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವಂತೆ ಪೋಷಕರನ್ನು ಪ್ರೇರೇಪಿಸುತ್ತಿದೆ.
ಇತರ ಸರ್ಕಾರಿ ಶಾಲೆಗಳಂತೆ ಮಕ್ಕಳಿಗೆ ಬೇಕಾದ ಎಲ್ಲಾ ತರಹದ ಉಚಿತ ಸೌಲಭ್ಯಗಳಿವೆ. ೨೦೨೨-೨೩ನೇ ಸಾಲಿನಲ್ಲಿ ೧ರಿಂದ ೪ನೇ ತರಗತಿಯವರೆಗೆ ದ್ವಿ-ಭಾಷಾ ಮಾಧ್ಯಮವನ್ನೂ ಅನುಷ್ಠಾನಗೊಳಿಸಲಾಗಿದೆ. ಆದರೂ ಖಾಸಗಿ ಶಾಲೆಗಳ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತಿಲ್ಲ.
ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಕೆ.ಎಸ್. ಮಹೇಶ್ವರಿ ಅವರು, ನಾಲ್ಕು ವರ್ಷಗಳ ಹಿಂದೆ ೩೬ ಮಕ್ಕಳಿದ್ದವು. ಈ ಸಾಲಿನಲ್ಲಿ ೫೦ ಮಕ್ಕಳಿಗೆ ಏರಿಕೆಯಾಗಿದೆ. ಜೊತೆಗೆ ೨೦೦೫ ಮತ್ತು ೨೦೦೭ರಲ್ಲಿ ಕ್ರಮವಾಗಿ ಅಶೋಕ ಪುರಂ ೬ನೇ ಕ್ರಾಸ್ ಮತ್ತು ೧೩ನೇ ಕ್ರಾಸ್‌ನಲ್ಲಿದ್ದ ಪ್ರಾಥಮಿಕ ಶಾಲೆಗಳನ್ನು ನಮ್ಮ ಶಾಲೆಗೆ ವಿಲೀನ ಮಾಡಲಾಯಿತು ಎಂದು ಮಾಹಿತಿ ಹಂಚಿಕೊಂಡರು.
ಶಾಲೆಯಲ್ಲಿ ಇರುವ ೫೦ ಮಕ್ಕಳಲ್ಲಿ ೪೬ ಮಂದಿ ಪರಿಶಿಷ್ಟ ಜಾತಿಗೆ ಸೇರಿದ್ದು, ಒಬ್ಬ ವಿದ್ಯಾರ್ಥಿ ಪರಿಶಿಷ್ಟ ಪಂಗಡಕ್ಕೆಸೇರಿದ್ದಾರೆ, ಉಳಿದ ೩ ಮಂದಿ ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಬಡತನ ಕಿತ್ತು ತಿನ್ನುತ್ತಿರುವ ಮನೆಗಳ ಮಕ್ಕಳೇ ಆಗಿದ್ದಾರೆ. ಈ ಶಾಲೆಯಲ್ಲಿ ಮಹೇಶ್ವರಿ ಅವರು ಸೇರಿದಂತೆ ಸಹ ಶಿಕ್ಷಕರಾದ ಎನ್.ಅನಿತಾ, ಮಹೇಶ್ ಕುಮಾರ್, ಶ್ರೀನಿವಾಸ್ ಇದ್ದಾರೆ. ಎಲ್ಲ ತರಗತಿಗಳ ಪಠ್ಯಗಳನ್ನೂ ಈ ನಾಲ್ಕೂ ಮಂದಿ ಶಿಕ್ಷಕರೇ ಸಮಾನವಾಗಿ ಹಂಚಿಕೊಂಡು ಬೋಽಸುತ್ತಿದ್ದಾರೆ. ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘವಿದ್ದು, ಸಂಘದಲ್ಲಿ ೨೦ ಮಂದಿ ಸದಸ್ಯರಿದ್ದಾರೆ. ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಈ ಶಾಲೆಯಲ್ಲಿ ಓದಿದ್ದಾರೆ ಎಂಬುದು ಶಾಲಾ ಪುಟಗಳಲ್ಲಿ ದಾಖಲಾಗಿದೆ.
” ಇತ್ತೀಚೆಗೆ ನಡೆದ ಎಸ್‌ಡಿಎಂಸಿ ಸಭೆಯಲ್ಲಿ ನಾನೂ ಭಾಗವಹಿಸಿದ್ದೆ. ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಲು ಕಾರ್ಯಯೋಜನೆ ರೂಪಿಸುವ ಈ ಶಾಲೆಯನ್ನು ಮುಂದಿನ ದಿನಗಳಲ್ಲಿ ‘ಕರ್ನಾಟಕ ಪಬ್ಲಿಕ್ ಶಾಲೆ’ ಯಾಗಿ ಮಾರ್ಪಡಿಸುವ ಬಗ್ಗೆಯೂ ಚರ್ಚಿಸಲಾಯಿತು.”
-ಪುರುಷೋತ್ತಮ್, ಮಾಜಿ ಮಹಾಪೌರ, ಅಶೋಕಪುರಂ
” ನನ್ನ ಮಗನನ್ನು ಖಾಸಗಿ ಶಾಲೆಯೊಂದಕ್ಕೆ ಸೇರಿಸಿದ್ದೆ. ೫ ಸಾವಿರ ರೂ. ಪ್ರವೇಶ ಶುಲ್ಕವನ್ನು ಕಟ್ಟಲಾಗದೆ ಮತ್ತೆ ಈ ಶಾಲೆಗೆ ಸೇರಿಸಿದ್ದೇನೆ. ನನ್ನ ಮಗ ಇಲ್ಲಿ ಚೆನ್ನಾಗಿಯೇ ಓದುತ್ತಿದ್ದಾನೆ. ಇಂಗ್ಲಿಷ್ ಅನ್ನೂ ಕಲಿಯುತ್ತಿದ್ದಾನೆ.”
-ಮೋಹನೇಶ್ವರಿ, ೩ನೇ ಕ್ರಾಸ್, ಅಶೋಕಪುರಂ, ಮೈಸೂರು
” ಸರ್ಕಾರಿ ನೌಕರರು, ರಾಜಕಾರಣಿಗಳು, ಮುಖ್ಯವಾಗಿ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಓದಿಸುವಂತೆ ಆಗಬೇಕು. ಇದು ಕಾನೂನು ಆಗಿಯೇ ಜಾರಿಯಾಗಬೇಕು.”
-ಪುನೀತ್, ಅಶೋಕಪುರಂ, ಮೈಸೂರು
” ಕನ್ನಡ ಪಠ್ಯ ವಿಷಯಕ್ಕೂ, ವಿಜ್ಞಾನ ಪಠ್ಯ ವಿಷಯಕ್ಕೂ ಶಿಕ್ಷಕರು ಬೇಕಾಗಿದ್ದಾರೆ. ಜೊತೆಗೆ ಶಾಲೆಗೆ ಕಂಪ್ಯೂಟರ್‌ಗಳ ಅವಶ್ಯಕತೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಗುಣಮಟ್ಟದ ಕಂಪ್ಯೂಟರ್‌ಗಳನ್ನು ಸರ್ಕಾರ ಒದಗಿಸಿಕೊಟ್ಟರೆ ಸ್ಮಾರ್ಟ್ ಕ್ಲಾಸ್ ನಡೆಸಲೂ ಅನುಕೂಲವಾಗಲಿದೆ.”
-ಕೆ.ಎಸ್.ಮಹೇಶ್ವರಿ, ಪ್ರಭಾರ ಮುಖ್ಯೋಪಾಧ್ಯಾಯರು
” ಕೆಲ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದು, ಆದರೆ ಪ್ರವೇಶ ಶುಲ್ಕವನ್ನು ಪಾವತಿಸಲು ಕಷ್ಟವಾಗಿ, ಮತ್ತೆ ನಮ್ಮ ಶಾಲೆಗೇ ಕರೆತಂದಿರುವುದೂ ಉಂಟು. ಅಲ್ಲದೆ, ನಮ್ಮ ಸರ್ಕಾರಿ ಶಾಲೆಯು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ.”
– ಎನ್.ಅನಿತಾ, ಸಹ ಶಿಕ್ಷಕರು
” ದಾಖಲಾತಿ ಹೆಚ್ಚಳಕ್ಕೆ ಎಲ್ಲಾ ಥರದ ಕಾರ್ಯ ಯೋಜನೆಗಳನ್ನೂ ಸರ್ಕಾರ ರೂಪಿಸುತ್ತಿದೆ. ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದಾನಿಗಳು ಸರ್ಕಾರದ ಜೊತೆ ಕೈಜೋಡಿಸಬೇಕು. ಇದು ಆಂದೋಲನ ರೂಪದಲ್ಲಿ ನಡೆಯಬೇಕು. ಹಾಗಾದಾಗ ಮಾತ್ರ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತದೆ.”
-ಕೃಷ್ಣ, ಬಿಇಒ, ದಕ್ಷಿಣ ವಲಯ, ಮೈಸೂರು
” ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳ ಕಟ್ಟಡಗಳನ್ನೂ ಹೊಸ ರೂಪದಲ್ಲಿ ನವೀಕರಿಸಿ, ಶಾಲೆಗಳ ಮಹತ್ವವನ್ನು ಮನೆಮನೆಗೆ ಹೇಳಿ, ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಆಗಬೇಕಿದೆ. ಜಿ.ಲಿಂಗಯ್ಯ ಎಂಬವರು ಕೊಟ್ಟ ದಾನದ ಜಾಗದಲ್ಲಿ ಈ ಶಾಲೆಯನ್ನು ಕಟ್ಟಿರುವುದು. ಜಿ.ಲಿಂಗಯ್ಯ ಅವರಿಗಿದ್ದ ಬಹುದೊಡ್ಡ ಕಾಳಜಿಯನ್ನು ಸರ್ಕಾರ ಹಾಗೂ ಜನರು ಅರ್ಥಮಾಡಿಕೊಳ್ಳಬೇಕು.”
-ಆರ್.ಸಿ.ಮಹೇಶ್, ಅಧ್ಯಕ್ಷರು, ದೊಡ್ಡಗರಡಿ, ಅಶೋಕಪುರಂ





