ಕೆ.ಬಿ.ರಮೇಶನಾಯಕ
ಆರಂಭದಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಗಣತಿದಾರರಿಗೂ ಸುಸ್ತು
ಸರ್ವರ್ ಡೌನ್ ಸಮಸ್ಯೆಯಿಂದ ಆರಂಭದ ಮೂರ‍್ನಾಲ್ಕು ದಿನಗಳು ವಿಳಂಬ
ಮೈಸೂರು: ಸರ್ವರ್ ಡೌನ್,ನಿಖರ ಮಾಹಿತಿ ಸಂಗ್ರಹದ ವ್ಯತ್ಯಾಸ ಮೊದಲಾದ ಕಾರಣಗಳಿಂದ ಪ್ರಾರಂಭದ ಮೂರ‍್ನಾಲ್ಕು ದಿನಗಳು ನಿಧಾನ ಗತಿಯಲ್ಲಿ ಸಾಗಿದ್ದ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ಕಾರ್ಯ ಜಿಲ್ಲೆಯಲ್ಲಿ ತುಸು ವೇಗ ಪಡೆದು ಕೊಂಡಿದೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿಗೆ ಸಂಬಂಽಸಿದ ಸಮೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲು ತೀರ್ಮಾನಿಸಿದ್ದು, ಈಗಾಗಲೇ ಮೇ ೫ರಿಂದ ಮನೆ ಮನೆ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ.
ಗಣತಿದಾರರು ಮತದಾರರ ಪಟ್ಟಿಯ ಅನ್ವಯ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದು, ಪರಿಶಿಷ್ಟ ಜಾತಿ ಎಂದು ತಿಳಿದರೆ ಪ್ರಮಾಣ ಪತ್ರ ಪರಿಶೀಲಿಸಿ ಸ್ವಯಂ ದೃಢೀಕರಣ ಪತ್ರದಲ್ಲಿ ಸಹಿ ಮಾಡಿಸಿಕೊಳ್ಳು ತ್ತಿದ್ದಾರೆ. ಆದರೆ, ಪ್ರಾರಂಭದ ಮೂರು ದಿನಗಳು ಮೊಬೈಲ್ ಆಪ್ ಸರಿಯಾಗಿ ಬಳಕೆ ಮಾಡದಿರುವುದು ಹಾಗೂ ಸರ್ವರ್ ಡೌನ್ ಸಮಸ್ಯೆಯಿಂದಾಗಿ ವಿಳಂಬವಾಗಿತ್ತು.
ಈ ಸಮಸ್ಯೆ ನಿವಾರಣೆಯಾದ ನಂತರ ಸಮೀಕ್ಷೆ ಕಾರ್ಯ ತುಸು ವೇಗ ಪಡೆದುಕೊಂಡಿದೆ.
ಆಧಾರ್ ಕಾರ್ಡ್, ಪಡಿತರ ಕಾರ್ಡ್ ಗೊಂದಲ: ಸರ್ಕಾರಿ ನೌಕರರು, ಖಾಸಗಿ ಕಂಪೆನಿಗಳು, ಕಾರ್ಖಾನೆ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿಲ್ಲ. ಹೀಗಾಗಿ, ಆಧಾರ್ ಕಾರ್ಡ್ ಕೊಟ್ಟು ದತ್ತಾಂಶ ಸಂಗ್ರಹಣೆಗೆ ಮುಂದಾದರೂ ಕುಟುಂಬದ ಪುರುಷ, ಮಹಿಳೆ ಮತ್ತು ಇಬ್ಬರು ಮಕ್ಕಳು ಸೇರಿದಂತೆ ನಾಲ್ವರ ಹೆಸರುಗಳನ್ನು ಮಾತ್ರ ಪರಿಗಣಿಸಲಾ ಗುತ್ತಿದೆ.
ಐದನೇ ಹೆಸರನ್ನು ಸೇರಿಸಬೇಕಾದರೆ ಲಾಗ್ ಔಟ್ ಮಾಡಿ, ಮತ್ತೆ ಲಾಗಿನ್ ಮಾಡಬೇಕಿದೆ. ಈ ವೇಳೆ ಸರ್ವರ್ ಡೌನ್ ಆದಲ್ಲಿ ವಿಳಂ ಬವಾಗುತ್ತದೆ. ಇದರಿಂದಾಗಿ ಗಣತಿದಾರರು ನಾಲ್ಕು ಜನ ರನ್ನಷ್ಟೇ ನೋಂದಣಿ ಮಾಡಿ ಮುಂದಿನ ಮನೆಗೆ ತೆರಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಾಂತ್ರಿಕ ಸಮಸ್ಯೆ: ೪ಜಿ, ೫ಜಿ ಸಾಮರ್ಥ್ಯದ ಮೊಬೈಲ್ ಫೋನ್ ಹೊಂದಿರುವ ಗಣತಿದಾರರು ಸರಾಗವಾಗಿ ದತ್ತಾಂಶ ಸಂಗ್ರಹಿಸಿದರೆ, ೩ಜಿ ಫೋನ್ ಹೊಂದಿರುವವರು ಪರದಾಡುವಂತಾಗಿದೆ. ಗಣತಿದಾರರು ಸಮೀಕ್ಷೆಗಾಗಿ ಗ್ರಾಮಾಂತರ ಪ್ರದೇಶಕ್ಕೆ ಹೋದಾಗ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಮಸ್ಯೆ ಎದುರಾಗಿ ಮಾಹಿತಿ ಸಂಗ್ರಹದಲ್ಲಿ ವಿಳಂಬವಾಗುತ್ತಿದೆ.
ಸಾಮಾನ್ಯವಾಗಿ ಒಂದು ಕುಟುಂಬದ ಸಮೀಕ್ಷೆಗೆ ೧೦ ನಿಮಿಷ ಸಾಕು. ಒಂದು ವೇಳೆ ಸರ್ವರ್ ಡೌನ್ ಉಂಟಾದರೆ ಅದಕ್ಕೆ ೨೦ ನಿಮಿಷ ಅಥವಾ ಅದಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಹೀಗಾಗಿ,ಉಳಿದ ದಿನಗಳಲ್ಲಿ ೫ಜಿ ಸಾಮರ್ಥ್ಯದ ಫೋನ್ ವ್ಯವಸ್ಥೆ ಮಾಡಿಸಿಕೊಡುವಂತೆ ಪ್ರಸ್ತಾಪ ಮಾಡಲಾಗಿದೆ. ಸಮೀಕ್ಷೆ ವೇಳೆ ೪೫ ಪ್ರಶ್ನೆಗಳನ್ನು ಕೇಳಲಿದ್ದು, ಪರಿಶಿಷ್ಟ ಜಾತಿಯೇತರ ಕುಟುಂಬಗಳಲ್ಲಿ ನಿಮ್ಮ ಮನೆಯಲ್ಲಿ ಎಷ್ಟು ಜನರು ಇದ್ದಾರೆ ಎನ್ನುವು ದನ್ನು ಬಿಟ್ಟರೆ ಬೇರೆ ಮಾಹಿತಿ ಕೇಳುವುದಿಲ್ಲ. ಆದರೆ, ಪರಿಶಿಷ್ಟ ಜಾತಿ ಕುಟುಂಬಗಳಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ಭರ್ತಿ ಮಾಡಬೇಕಿದೆ. ಇದು ಕೂಡ ಸಮೀಕ್ಷೆ ವಿಳಂಬಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ.
೬೫ ಸಾವಿರ ಕುಟುಂಬಗಳ ಸಮೀಕ್ಷೆ: ಜಿಲ್ಲೆಯಲ್ಲಿ ಗಣತಿದಾರರು ಈತನಕ ೬೫ ಸಾವಿರ ಕುಟುಂಬಗಳ ಸಮೀಕ್ಷೆ ಕಾರ್ಯ ಮುಗಿಸಿದ್ದು, ಇನ್ನೂ ೪೫ಸಾವಿರ ಕುಟುಂಬಗಳ ಸಮೀಕ್ಷೆ ಕಾರ್ಯ ಬಾಕಿ ಇದೆ. ದಲಿತರು ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ಗಣತಿ ಕಾರ್ಯ ಜೋರಾಗಿ ನಡೆದರೆ, ಇತರ ಬಡಾವಣೆಗಳಲ್ಲಿ ಒಂದೊಂದು ಮನೆಯ ಗೇಟು ತೆಗೆದು ಕಾಲಿಂಗ್ ಬೆಲ್ ಮಾಡಿ ಮನೆಯಿಂದ ಹೊರಬರುವ ಹೊತ್ತಿಗೆ ಕನಿಷ್ಠ ಎರಡು ನಿಮಿಷ ಸಮಯ ಬೇಕಾಗುತ್ತದೆ. ಇದರಿಂದಾಗಿ ಸಮೀಕ್ಷೆ ಸ್ವಲ್ಪ ನಿಧಾನವಾಗುತ್ತಿದೆ ಎನ್ನುತ್ತಾರೆ ಗಣತಿದಾರರೊಬ್ಬರು.
ಅವಧಿ ವಿಸ್ತರಣೆಗೆ ಒತ್ತಾಯ: ಸಮೀಕ್ಷೆ ಕಾರ್ಯದ ಅವಧಿಯನ್ನು ವಿಸ್ತರಿಸುವಂತೆ ದಲಿತ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ. ಈಗಾಗಲೇ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ಪರಿಶೀಲಿಸುವ ಭರವಸೆ ನೀಡಿದ್ದಾರೆ. ಮೂರು ಹಂತಗಳ ಸಮೀಕ್ಷೆಯು ಮೇ ೨೩ಕ್ಕೆ ಮುಗಿಯಲಿದ್ದು, ಮತ್ತೆ ೧೫ ದಿನಗಳ ಕಾಲ ವಿಸ್ತರಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಸುವಾಗ ೪೫ ದಿನಗಳ ಕಾಲಾವಕಾಶ ನೀಡಿದ್ದಂತೆ, ಎಸ್‌ಸಿ ಸಮೀಕ್ಷೆಗೂ ನೀಡಲಿ ಎಂಬುದಾಗಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಅಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅವರ ತಂಡ ಒತ್ತಾಯಿಸಿದೆ.
ಏನೇನು ದೋಷ,ತಾಂತ್ರಿಕ ಸಮಸ್ಯೆಗಳು? ಒಂದು ಕುಟುಂಬದ ಮಾಹಿತಿಯನ್ನು ಸಂಗ್ರಹಿಸಲು ಒಂದು ಗಂಟೆಗೂ ಹೆಚ್ಚು ಸಮಯವನ್ನು ಅಪ್ಲಿಕೇಶನ್ ತೆಗೆದು ಕೊಳ್ಳುತ್ತಿದ್ದು, ಒಂದು ದಿನಕ್ಕೆ ೭ರಿಂದ ೮ ಕುಟುಂಬಗಳ ಸಮೀಕ್ಷೆ ಮಾಡಲು ಮಾತ್ರ ಸಾಧ್ಯವಾಗುತ್ತಿದೆ. ಸಮೀಕ್ಷೆಯ ಮಾಹಿತಿಯನ್ನು ಗಣತಿದಾರರು ತಮ್ಮ ಮೊಬೈಲ್ ಆಪ್‌ನಲ್ಲಿ ದಾಖಲಿಸಿ ಸಬ್‌ಮಿಟ್ ಮಾಡಿದಾಗ ಸರ್ವರ್ ವೈಫಲ್ಯವಾದಲ್ಲಿ ಮತ್ತೊಮ್ಮೆ ಮೊದಲಿನಿಂದ ಮಾಹಿತಿ ದಾಖಲಿಸಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳು ಎದುರಾಗುತ್ತಿವೆ.
” ಸರ್ಕಾರದ ಮಾರ್ಗಸೂಚಿ ಪ್ರಕಾರ ಸಮೀಕ್ಷೆ ಮಾಡುತ್ತಿದ್ದೇವೆ. ಕೆಲವೊಮ್ಮೆ ನೆಟ್‌ವರ್ಕ್ ಸಮಸ್ಯೆ, ಸರ್ವರ್ ಡೌನ್ ಸಮಸ್ಯೆಯಿಂದ ವಿಳಂಬವಾಗಿತ್ತಾದರೂ ಈಗ ಚುರುಕಾಗಿ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ ಸಮುದಾಯದವರು ಸಹಕಾರ ನೀಡಿ ಮಾಹಿತಿ ಒದಗಿಸುತ್ತಿದ್ದಾರೆ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್‌ಗಳನ್ನು ಪಡೆದು ಒಂದು ಕುಟುಂಬದ ಎಲ್ಲರನ್ನೂ ಸೇರಿಸುವ ಬಗ್ಗೆ ಆಪ್‌ನಲ್ಲಿ ಬದಲಿಸಬೇಕಿದೆ.”
ಚಂದ್ರಕಲಾ, ಗಣತಿದಾರರು, ಮೈಸೂರು
” ಸಮೀಕ್ಷೆಯ ವೇಳೆ ಹಲವಾರು ಸಮಸ್ಯೆಗಳು, ಗೊಂದಲಗಳು, ತಾಂತ್ರಿಕ ದೋಷಗಳು ಕಂಡು ಬಂದಿರುವುದರಿಂದ ಸರಿಪಡಿಸಬೇಕೆಂದು ಆಯೋಗದ ಗಮನಕ್ಕೆ ತಂದಿದ್ದೇವೆ. ಸಮೀಕ್ಷೆ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಿದ್ದೇವೆ. ಶೇ.೧೦೦ರಷ್ಟು ಕುಟುಂಬಗಳ ಸಮೀಕ್ಷೆ ಆಗಬೇಕಿರುವುದರಿಂದ ಅವಧಿಯನ್ನು ೪೫ ದಿನಗಳ ಕಾಲ ವಿಸ್ತರಿಸಬೇಕು.”
ಡಿ.ಚಂದ್ರಶೇಖರಯ್ಯ,ಅಧ್ಯಕ್ಷರು, ಕರ್ನಾಟಕ ರಾಜ್ಯ ಎಸ್‌ಸಿ-ಎಸ್‌ಟಿ ಸರ್ಕಾರಿ ಅಧಿಕಾರಿಗಳು, ನೌಕರರ ಸಂಘ
” ಜಿಲ್ಲೆಯಲ್ಲಿ ಆರಂಭದಲ್ಲಿ ಇದ್ದ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇಲ್ಲಿಯವರೆಗೆ ಸುಮಾರು ೬೫ ಸಾವಿರ ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ. ಮನೆ ಮನೆ ಸಮೀಕ್ಷೆ ವೇಳೆ ದತ್ತಾಂಶ ಕೊಡಲು ಸಾಧ್ಯ ಆಗದಿದ್ದರೆ ಬೂತ್ ಮಟ್ಟದಲ್ಲಿ ನಡೆಯುವಾಗ ನೋಂದಣಿ, ಅನ್‌ಲೈನ್‌ನಲ್ಲಿ ನೋಂದಣಿಗೆ ಅವಕಾಶ ಇರುವುದನ್ನು ಬಳಸಿಕೊಳ್ಳಬಹುದು. ಬಿಪಿಎಲ್ ಕಾರ್ಡ್ ಇಲ್ಲದವರು, ಆಧಾರ್ ಕಾರ್ಡ್ ಮೂಲಕ ಮಾಹಿತಿ ಕೊಡಬಹುದು.”
ಬಿ.ರಂಗೇಗೌಡ, ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.
” ನಮ್ಮ ಬಳಿ ಬಿಪಿಎಲ್ ಕಾರ್ಡ್ ಇಲ್ಲ, ಆಧಾರ್ ಕಾರ್ಡ್‌ನಲ್ಲಿ ನಾಲ್ಕು ಜನರದ್ದು ನೋಂದಣಿಯಾಗುತ್ತದೆ. ಮತ್ತೆ ಲಾಗಿನ್ ಮಾಡುವುದಕ್ಕೆ ಹೋದರೆ ಸಮಯ ಇಲ್ಲ ಎನ್ನುತ್ತಾರೆ. ಆಧಾರ್ ಕಾರ್ಡ್ ಬಳಸಿಕೊಂಡೇ ಕುಟುಂಬದ ಎಲ್ಲರನ್ನೂ ಸೇರಿಸಲು ವ್ಯವಸ್ಥೆ ಮಾಡಬೇಕು. ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಗೊಂದಲ ಇಲ್ಲದಂತೆ ಮಾಡಬೇಕು.”
ಮಹದೇವಸ್ವಾಮಿ, ಗಿರಿದರ್ಶಿನಿ ಬಡಾವಣೆ.
” ಕೆಲವು ಕುಟುಂಬಗಳು ಜಾತಿಯನ್ನು ಬಹಿರಂಗಪಡಿಸಿಕೊಳ್ಳಲು ಹಿಂಜರಿಯುತ್ತಿವೆ ಎನ್ನಲಾಗಿದೆ. ಗಣತಿದಾರರಿಗೆ ಗುರುತಿನ ಚೀಟಿ ನೀಡದೇ ಇರುವುದು, ಕೆಲವು ಗಣತಿದಾರರು ರಸ್ತೆಯಲ್ಲಿ ನಿಂತೇ ಜಾತಿಯನ್ನು ಕೇಳುವುದು… ಇತ್ಯಾದಿ ಸಮಸ್ಯೆಗಳು ಸಮೀಕ್ಷೆಗೆ ಅಡ್ಡಿಯಾಗುತ್ತಿವೆ ಎನ್ನಲಾಗಿದೆ.”





