ಎಚ್.ಎಸ್.ದಿನೇಶ್ ಕುಮಾರ್
ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನತೆ; ಸ್ವಲ್ಪ ದುಬಾರಿಯಾದ ಅವರೆಕಾಯಿ, ೫೦ ರೂ.ಮುಟ್ಟಿದ ಸೇವಂತಿಗೆ
ಮೈಸೂರು: ನಗರದೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಡಗರ-ಸಂಭ್ರಮ ಜೋರಾಗಿದೆ. ಹಬ್ಬಕ್ಕೆ ಎರಡು ದಿನಗಳು ಉಳಿದಿರುವಂತೆಯೇ ಮಂಗಳವಾರ ದೇವರಾಜ ಮಾರುಕಟ್ಟೆ, ಅಗ್ರಹಾರ, ಚಿಕ್ಕ ಮಾರುಕಟ್ಟೆ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಜನ ಜಾತ್ರೆಯೇ ನೆರೆದಿತ್ತು. ಹೂವು, ಹಣ್ಣು, ಎಳ್ಳು, ಬೆಲ್ಲ, ಕಬ್ಬು ಖರೀದಿಗಾಗಿ ಜನರು ಮುಗಿಬಿದ್ದಿದ್ದರು.
ಸಂಕ್ರಾಂತಿ ಸಮೃದ್ಧಿಯ ಸಂಕೇತ. ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬುದು ಹಿರಿಯರ ಪ್ರೀತಿಯ ಸಲಹೆ. ಹೀಗಾಗಿ ಹಬ್ಬದ ಅಂಗವಾಗಿ ಬಂಧುಗಳು, ಸ್ನೇಹಿತರು ಹಾಗೂ ಹಿತೈಷಿಗಳ ಮನೆಗಳಿಗೆ ತೆರಳಿ ಎಳ್ಳು-ಬೆಲ್ಲ, ಕಬ್ಬು ವಿನಿಮಯ ಮಾಡಿಕೊಳ್ಳುವ ಮೂಲಕ ಆತ್ಮೀಯ ಸಂಬಂಧಗಳಿಗೆ ಒತ್ತು ನೀಡುವ ಹಬ್ಬವಿದು. ಹೀಗಾಗಿ ಹಬ್ಬದ ಆಚರಣೆ ಸಂಬಂಧ ನಗರದ ಮಾರುಕಟ್ಟೆ ಸೇರಿದಂತೆ ಎಲ್ಲ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿರುವುದು ಕಂಡು ಬಂದಿತ್ತು.
ಈ ಬಾರಿ ಬೆಲೆಗಳು ತುಸು ಹೆಚ್ಚಾದರೂ ಕೂಡ ಜನರ ಮೊಗದಲ್ಲಿ ಹಬ್ಬದ ಉತ್ಸಾಹ ಮಾತ್ರ ಕುಗ್ಗಿಲ್ಲ. ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾರುಕಟ್ಟೆಗೆ ತೆರಳಿ ಚೌಕಾಸಿ ಮಾಡುವ ಮೂಲಕ ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಸಂತಸದಿಂದಲೇ ಖರೀದಿಸುತ್ತಿದ್ದುದು ಕಂಡುಬಂದಿತು.
ಹುರಿದ ಕಡಲೇಬೀಜ ಕೆ.ಜಿ.ಗೆ೧೬೦ ರೂ.: ಹಬ್ಬದ ಅಂಗವಾಗಿ ಹುರಿದ ಕಡಲೆ ಬೀಜ ಕೆಜಿಗೆ ೧೬೦ ರೂ.ನಿಂದ ೧೮೦ ರೂ.ಗಳವರೆಗೆ ಮಾರಾಟವಾಯಿತು. ಜೊತೆಗೆ ಕತ್ತರಿಸಿದ ಬೆಲ್ಲ ಕೆಜಿಗೆ ೧೦೦ ರೂ.ರಿಂದ ೧೪೦ ರೂ., ಕತ್ತರಿಸಿದ ಕೊಬ್ಬರಿ ಕೆಜಿಗೆ ೫೫೦ ರೂ.ನಿಂದ ೬೦೦ ರೂ., ಹುರಿಗಡಲೆ ಕೆಜಿಗೆ ೧೩೫ ರೂ., ಸಕ್ಕರೆ ಅಚ್ಚು ಕೆಜಿಗೆ ೧೦೦ ರೂ.ಗಳಿಂದ ೧೫೦ ರೂ. ಗಳವರೆಗೂ ಮಾರಾಟವಾದವು. ರಾಶಿ, ರಾಶಿ ಕಬ್ಬು: ಸಂಕ್ರಾಂತಿ ಹಬ್ಬದ ಅಂಗವಾಗಿ ದೇವರಾಜ ಮಾರುಕಟ್ಟೆ, ಅಗ್ರಹಾರ, ಅಶೋಕ ವೃತ್ತ, ಕುವೆಂಪುನಗರ, ವಿವೇಕಾನಂದನಗರ, ಒಂಟಿಕೊಪ್ಪಲು ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ರೈತರು ಕಬ್ಬನ್ನು ಮಾರಾಟ ಮಾಡುತ್ತಿದ್ದುದು ಕಂಡುಬಂದಿತು. ಒಂದು ಜಲ್ಲೆ ಕಬ್ಬು ೩೦ ರೂ. ಗಳಿಂದ ೩೫ ರೂ.ವರೆಗೂ ಮಾರಾಟವಾಗುತ್ತಿದ್ದುದು ವಿಶೇಷ.
೫೦ ರೂ. ಮುಟ್ಟಿದ ಸೇವಂತಿಗೆ: ಹಬ್ಬವೆಂದರೆ ಅಲ್ಲಿ ಹೂವು ಇರಲೇಬೇಕು. ಹೀಗಾಗಿ ಈ ಬಾರಿ ಸೇವಂತಿಗೆ ಹೂವು ತನ್ನ ಬೆಲೆಯನ್ನು ಹೆಚ್ಚಿಸಿಕೊಂಡಿದೆ. ಕಳೆದ ಮೂರು ದಿನಗಳ ಹಿಂದೆ ಮಾರೊಂದಕ್ಕೆ ೨೦ರಿಂದ ೩೦ ರೂ.ಗೆ ದೊರಕುತ್ತಿದ್ದ ಸೇವಂತಿಗೆ ಮಂಗಳವಾರ ೫೦ ರಿಂದ ೬೦ ರೂ.ಗೆ ಮಾರಾಟವಾಯಿತು. ಉಳಿದಂತೆ ಮಾರುಕಟ್ಟೆಯಲ್ಲಿ ಮಲ್ಲಿಗೆ, ಕಾಕಡ, ಕನಕಾಂಬರ, ಸುಗಂಧರಾಜ, ಗುಲಾಬಿ ಹೂಗಳನ್ನು ಕೂಡ ಸಾರ್ವಜನಿಕರು ಖರೀದಿಸಿದರು.
ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆ ಪೊಂಗಲ್, ಹೀಗಾಗಿ ಹಬ್ಬದ ಪ್ರಯುಕ್ತರ ಬಹುತೇಕ ಎಲ್ಲರೂ ಕೂಡ ಅವರೇ ಕಾಯಿಯನು ಖರೀದಿ ಸುತ್ತಾರೆ. ಕಳೆದ ವರ್ಷ ಕೆಜಿಗೆ ೨೫ರಿಂದ ೩೦ ರೂ.ಗೆ ದೊರಕುತ್ತಿದ್ದ ಅವರೇಕಾಯಿ ಈ ಬಾರಿ ೬೦ ರೂ. ಮುಟ್ಟಿದೆ.
ಕೈಸುಡದ ತರಕಾರಿ: ಹಬ್ಬದ ಪ್ರಯುಕ್ತ ನುಗ್ಗೆ ಹಾಗೂ ಅವರೆಕಾಯಿ ೪೦ರಿಂದ ೬೦ ರೂ. ವರೆಗೆ ಏರಿಕೆಯಾಗಿದೆ ಎಂಬುದನ್ನು ಬಿಟ್ಟರೆ ಇನ್ನಿತರ ತರಕಾರಿಗಳ ಬೆಲೆ ಹೆಚ್ಚಳವಾಗಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಮಾರುಕಟ್ಟೆಯಲ್ಲಿ ಶುಕ್ರವಾರ ಕೆಜಿ ಕ್ಯಾರೆಟ್‌ಗೆ ೪೦ ರೂ. ಬೀಟ್ ರೂಟ್, ಎಲೆ ಕೋಸು ೩೦ ರೂ., ಹಸಿ ಬಟಾಣಿ, ಬದನೆ, ಹೂ ಕೋಸು ೪೦ರಿಂದ ೫೦ ರೂ., ಬೆಂಡೆಕಾಯಿ ೪೦ ರೂ., ಪಡುವಲಕಾಯಿ, ಸೋರೆಕಾಯಿ, ಹೀರೇಕಾಯಿ ೨೦ರಿಂದ ೨೫ ರೂ., ಉಳಿದಂತೆ ಸೌತೇಕಾಯಿ, ಹಸಿ ಮೆಣಸಿನಕಾಯಿ, ನಿಂಬೆ ಹಣ್ಣು, ಇನ್ನಿತರ ತರಕಾರಿಗಳು ಅಗ್ಗದ ಬೆಲೆಯಲ್ಲಿ ಮಾರಾಟವಾದವು.
ಪ್ಲಾಸ್ಟಿಕ್ ಡಬ್ಬಗಳಿಗೆ ಬೇಡಿಕೆ…: ಈ ಹಿಂದೆ ಕಾಗದದ ಕವರ್ ಅಥವಾ ಪ್ಲಾಸ್ಟಿಕ್ ಕವರ್‌ಗಳಲ್ಲಿ ಎಳ್ಳು -ಬೆಲ್ಲವನ್ನು ಹಂಚಲಾಗುತ್ತಿತ್ತು. ಆದರೀಗ ಅವುಗಳ ಜಾಗವನ್ನು ಪ್ಲಾಸ್ಟಿಕ್ ಡಬ್ಬಿಗಳು ಆವರಿಸಿಕೊಂಡಿವೆ. ಹೀಗಾಗಿ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ಅಗ್ರಹಾರ, ವಿದ್ಯಾರಣ್ಯಪುರಂ ಇನ್ನಿತರ ಕಡೆಗಳಲ್ಲಿನ ಪ್ಲಾಸಿಕ್ ಮಾರಾಟ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಡಬ್ಬಿಗಳು ಸಾಕಷ್ಟು ಬಿಕರಿಯಾದವು.




