ಮಂಜು ಕೋಟೆ
ಭಾನುವಾರ ಮೈಸೂರಿನಲ್ಲಿ ನಡೆಯಲಿರುವ ಹುಟ್ಟುಹಬ್ಬ ಸಮಾರಂಭದಲ್ಲಿ ಕೋಟೆಯಿಂದ ಸಾವಿರಾರು ಜನರು ಭಾಗಿ
ಎಚ್.ಡಿ.ಕೋಟೆ: ಮೈಸೂರಿನಲ್ಲಿ ಆ.೩೧ರಂದು ನಡೆಯಲಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸಂದೇಶ್ ನಾಗರಾಜ್ ಅವರ ೮೦ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತಾಲ್ಲೂಕಿನಿಂದ ಸಾವಿರಾರು ಜನರು ಭಾಗವಹಿಸಲಿದ್ದಾರೆ.
ಸಂದೇಶ್ ನಾಗರಾಜು ಅವರು ಎಚ್.ಡಿ.ಕೋಟೆ ಕ್ಷೇತ್ರದ ಜತೆ ಉತ್ತಮ ಒಡನಾಟ ಹೊಂದಿರುವುದರಿಂದ ಮುಖಂಡರು ಮತ್ತು ಕಾರ್ಯಕರ್ತರು ಜನತೆಗೆ ಚಿರಪರಿಚಿತರಾಗಿದ್ದಾರೆ. ೧೨ ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಸಂದೇಶ್ ನಾಗರಾಜು ಅವರು ಅತಿ ಹೆಚ್ಚಿನ ಅನುದಾನ ತಂದಿದ್ದಲ್ಲದೆ, ಅಽವೇಶನದಲ್ಲಿ ಕ್ಷೇತ್ರದ ಬಗ್ಗೆ ಚರ್ಚಿಸಿ ತಾಲ್ಲೂಕಿನ ಅಭಿವೃದ್ಧಿಗೆ ಮತ್ತು ಹೊಸ ಯೋಜನೆಗಳನ್ನು ತರಲು ಶ್ರಮಿಸಿದ್ದರು. ಅಲ್ಲದೆ ನೋಡಲ್ ತಾಲ್ಲೂಕನ್ನಾಗಿ ಪಡೆದು ವಿಧಾನ ಪರಿಷತ್ ಸದಸ್ಯನಾಗಿ ತಾಲ್ಲೂಕು ಮತ್ತು ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಿದ್ದರು.
೧೫ ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಜಾ.ದಳ ಪಕ್ಷ ಸಂಘಟನೆಯಲ್ಲಿ ಸಂಪೂರ್ಣ ವಿಫಲವಾಗಿದ್ದ ಸಂದರ್ಭದಲ್ಲಿ ಪಕ್ಷದ ಕಚೇರಿ ಪ್ರಾರಂಭಕ್ಕೆ ಧನ ಸಹಾಯ ಮಾಡಿ, ಕಚೇರಿ ತೆರೆದು, ಕಾರ್ಯಕರ್ತರು ಮುಖಂಡರಲ್ಲಿ ಹುಮ್ಮಸ್ಸು ಮೂಡಿಸಿದ್ದರು. ನಂತರ ಜಾ.ದಳ ಇಲ್ಲಿ ಬಲಿಷ್ಠವಾಗಿ, ಎಲ್ಲರ ಪರಿಶ್ರಮದಿಂದ ಶಾಸಕರಾಗಿ ಚಿಕ್ಕಮಾದುರವರು ಆಯ್ಕೆಯಾಗಿ ಕ್ಷೇತ್ರವನ್ನು ಜಾ.ದಳದ ಭದ್ರಕೋಟೆಯನ್ನಾಗಿ ನಿರ್ಮಾಣ ಮಾಡಲು ಸಾಧ್ಯವಾಯಿತು. ಶಾಸಕರಾಗಿ ಚಿಕ್ಕಮಾದು, ವಿಧಾನಪರಿಷತ್ ಸದಸ್ಯರಾಗಿ ಸಂದೇಶ್ ನಾಗರಾಜು ಅವರು ತಾಲ್ಲೂಕಿನ ಅಭಿವೃದ್ಧಿ ಕೆಲಸಗಳಿಗೆ ಜೊತೆಗೂಡಿ ಕೆಲಸ ನಿರ್ವಹಿಸಿದರು.
ತದನಂತರ ನಡೆದ ರಾಜಕೀಯ ಬದಲಾವಣೆಯಲ್ಲಿ ಸಂದೇಶ್ ನಾಗರಾಜು ಅವರು ಜಾ.ದಳವನ್ನು ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವರಿಷ್ಠರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
೨ ವರ್ಷಗಳ ಹಿಂದೆ ನಡೆದ ಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಎರಡನೇ ಬಾರಿ ಭರ್ಜರಿ ಗೆಲುವು ಸಾಧಿಸುವಲ್ಲಿ ಸಂದೇಶ್ ನಾಗರಾಜು ಮತ್ತು ಅವರ ಪುತ್ರ ಉದ್ಯಮಿ ಸಂದೇಶ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ತಾಲ್ಲೂಕಿನಾದ್ಯಂತ ಪ್ರವಾಸ ಕೈಗೊಂಡು, ಹಿತೈಷಿಗಳು, ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದರು. ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಕಬಿನಿ ಎಡ್ಜ್ ಎಂಬ ರೆಸಾರ್ಟ್ ನಿರ್ಮಾಣ ಮಾಡಿ, ಅನೇಕ ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆ.೩೧ರಂದು ಭಾನುವಾರ ಮೈಸೂರಿನಲ್ಲಿ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ನಡೆಯಲಿರುವ ಅವರ ೮೦ನೇ ವರ್ಷದ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವ ಹಿಸಿ ಅವರಿಗೆ ಶುಭ ಹಾರೈಸಲು ಪಕ್ಷಾತೀತವಾಗಿ ಜಾತ್ಯತೀತವಾಗಿ ಜನಸಾಮಾನ್ಯರು ಮುಂದಾಗಿ ದ್ದಾರೆ.
೨೦ ವರ್ಷಗಳ ಒಡನಾಟ: ೨೦ ವರ್ಷಗಳಿಂದ ತಾಲ್ಲೂಕಿನ ಜತೆಗೆ ನಿಕಟವಾದ ಒಡನಾಟವನ್ನು ಇಟ್ಟುಕೊಂಡು ಅನೇಕರಿಗೆ ರಾಜಕೀಯ ಮಾರ್ಗದರ್ಶಕರಾಗಿ, ಹಿರಿಯ ರಾಜಕೀಯ ಮುಖಂಡರಾಗಿ,ಜನಪ್ರತಿನಿಧಿಯಾಗಿ, ಉದ್ಯಮಿಯಾಗಿ ಸಂದೇಶ್ ನಾಗರಾಜು ಅವರು ಗುರುತಿಸಿಕೊಂಡಿದ್ದಾರೆ.




