ಎಚ್.ಎಸ್.ದಿನೇಶ್ ಕುಮಾರ್
ಮೈಸೂರಿನಲ್ಲಿ ಹೊಸ ತಂಡ ರಚಿಸಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್
ಮೈಸೂರು: ನಗರದಲ್ಲಿ ಹೆಚ್ಚುತ್ತಿರುವ ದುಷ್ಕರ್ಮಿಗಳ ಅಟ್ಟಹಾಸವನ್ನು ಮಟ್ಟ ಹಾಕಲೇಬೇಕು ಎಂಬ ನಿರ್ಧಾರಕ್ಕೆಬಂದಿರುವ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಇದೀಗ ರೌಡಿ ಪ್ರತಿಬಂಧಕ ದಳವನ್ನು ಹೊಸದಾಗಿ ರಚಿಸಿದ್ದಾರೆ.
ಕಾರ್ತಿಕ್ ಕೊಲೆ, ವೆಂಕಟೇಶ್ ಹತ್ಯೆ, ಬಾಲಕಿ ಅತ್ಯಾಚಾರ- ಹತ್ಯೆ ಪ್ರಕರಣಗಳು ಹಾಗೂ ನಗರದ ವಿವಿಧ ಬಡಾವಣೆಗಳಲ್ಲಿ ಹೆಚ್ಚುತ್ತಿರುವ ಪುಡಿ ರೌಡಿಗಳ ಕಾಟದಿಂದ ಸಾರ್ವಜನಿಕರನ್ನು ಮುಕ್ತರನ್ನಾಗಿಸುವ ಉದ್ದೇಶದಿಂದ ಆಯುಕ್ತರು ಈ ತೀರ್ಮಾನ ಕೈಗೊಂಡಿದ್ದಾರೆ.
ಪ್ರತಿದಿನ ಒಂದಲ್ಲಾ ಒಂದು ಬಡಾವಣೆಗಳಲ್ಲಿ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಲೇ ಇದ್ದು, ಪುಡಿ ರೌಡಿಗಳ ಕಾಟವೂ ಮಿತಿ ಮೀರುತ್ತಿದೆ. ಇದರಿಂದಾಗಿ ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಕಿರಿಕಿರಿ ಉಂಟಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸೀಮಾ ಲಾಟ್ಕರ್ ಅವರು ದಕ್ಷ ಅಧಿಕಾರಿಗಳು ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯನ್ನು ಒಳಗೊಂಡ ರೌಡಿ ಪ್ರತಿಬಂಧಕ ದಳವನ್ನು ರಚಿಸಿದ್ದಾರೆ.
ಕಸ್ತೂರಿ ರಂಗನ್ ಆರಂಭಿಸಿದ್ದರು: ಈ ಹಿಂದೆ ರೌಡಿಗಳ ಅಟ್ಟಹಾಸ ಮಿತಿಮೀರಿದ್ದ ವೇಳೆ ಅಂದು ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಸ್ತೂರಿ ರಂಗನ್ ಅವರು ಮೊದಲ ಬಾರಿಗೆ ರೌಡಿ ಪ್ರತಿಬಂಧಕ ದಳವನ್ನು ಆರಂಭಿಸಿದ್ದರು. ಕೆ.ಎಸ್.ತಮ್ಮಯ್ಯ, ಧರ್ಮೇಶ್, ಪುಟ್ಟಸ್ವಾಮಿಗೌಡ ಮುಂತಾದ ಖಡಕ್ ಅಧಿಕಾರಿಗಳು ದಳದಲ್ಲಿ ಇದ್ದರು.
ಅಂದು ಆಯುಕ್ತರ ಆದೇಶದ ಮೇರೆಗೆ ಕಾರ್ಯಾಚರಣೆ ಆರಂಭಿಸಿದ್ದ ಪೊಲೀಸರ ತಂಡ ರೌಡಿಗಳ ಹಾವಳಿಯನ್ನು ಮಟ್ಟ ಹಾಕಿತ್ತು. ಸಿಸಿಬಿ ವಿಭಾಗ ಆರಂಭವಾದ ನಂತರ ರೌಡಿ ಪ್ರತಿಬಂಧಕ ದಳ ನೇಪಥ್ಯಕ್ಕೆ ಸರಿದಿತ್ತು. ಇದೀಗ ಸೀಮಾ ಲಾಟ್ಕರ್ ಅವರ ಆಸಕ್ತಿಯಿಂದಾಗಿ ನಗರದಲ್ಲಿ ಮತ್ತೆ ರೌಡಿ ಪ್ರತಿಬಂಧಕ ದಳ ಕಾರ್ಯಾರಂಭಗೊಂಡಿದೆ. ಈ ದಳದ ಕಾರ್ಯಾಚರಣೆ ಯಾವುದೇ ಒಂದು ಪೊಲೀಸ್ ಠಾಣೆಗೆ ಸೀಮಿತವಾಗಿರುವುದಿಲ್ಲ. ನಗರದ ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಬರುವ ರೌಡಿಶೀಟರ್ ಗಳು, ಪುಡಿ ರೌಡಿಗಳು ಹಾಗೂ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವವರನ್ನು ಗುರುತಿಸಿ ಅಂತಹವರಿಗೆ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ‘ಪಾಠ’ ಕಲಿಸಲಿದ್ದಾರೆ.
ಪರಿಶೀಲನೆ ಆರಂಭ: ಇದೀಗ ಆಯಾ ವಿಭಾಗದ ಎಸಿಪಿ ನೇತೃತ್ವದಲ್ಲಿ ಕಳೆದ ಎರಡು ದಿನಗಳಿಂದ ಪ್ರತಿದಿನ ಸಂಜೆಯಿಂದ ತಡರಾತ್ರಿವರೆಗೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸುತ್ತಿದೆ. ತಮ್ಮ ವ್ಯಾಪ್ತಿಯಲ್ಲಿ ಇರುವ ಬಾರ್‌ಗಳು, ರೆಸ್ಟೋರೆಂಟ್‌ಗಳು, ರಾತ್ರಿ ಹೋಟೆಲ್‌ಗಳು, ಉದ್ಯಾನ, ಟೀ ಶಾಪ್ ಹಾಗೂ ಇನ್ನಿತರ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ತಂಡ ಪರಿಶೀಲನೆ ನಡೆಸುತ್ತಿದೆ. ಈ ಸಂಬಂಧ ಎರಡು ದಿನಗಳ ಅವಧಿಯಲ್ಲಿ ೨೦೪ ಕೋಟ್ಪಾ ಪ್ರಕರಣಗಳು, ೪೮೭ ಮಂದಿ ವಿರುದ್ಧ ಕೆಪಿ ಆಕ್ಟ್ ಹಾಗೂ ಪೆಟ್ಟಿ ಕೇಸ್ ದಾಖಲು ಮಾಡಲಾಗಿದೆ. ಸಾರ್ವಜನಿಕರಿಗೆ ತೊಂದರೆ ಕೊಡುವವರನ್ನು ಕಾನೂನು ರೀತಿಯಲ್ಲಿ ಮಟ್ಟಹಾಕುವ ಉದ್ದೇಶದಿಂದ ಮತ್ತೆ ರೌಡಿ ಪ್ರತಿಬಂಧಕ ದಳವನ್ನು ಆರಂಭಿಸಲಾಗುತ್ತಿದೆ.
ಇದರ ಜೊತೆಗೆ ಎಸಿಪಿ ನೇತೃತ್ವದಲ್ಲಿ ಪ್ರತಿದಿನ ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಸೀಮಾ ಲಾಟ್ಕರ್ ಹೇಳಿದ್ದಾರೆ.
” ಸಾರ್ವಜನಿಕರು ತಮ್ಮ ಸುತ್ತಮುತ್ತ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಅಥವಾ ಅನುಮಾನಾಸ್ಪದ ಬೆಳವಣಿಗೆಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿಡಲಾಗುವುದು. ಮೈಸೂರಿನಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಕೈ ಜೋಡಿಸಬೇಕು.”
-ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತರು





