ದೊಡ್ಡ ಕವಲಂದೆ ನಾಡಕಚೇರಿಯಲ್ಲಿ ಸಾರ್ವಜನಿಕರಿಗೆ ಕಿರಿಕಿರಿ; ಸಮಸ್ಯೆ ಬಗೆಹರಿಸಲು ಆಗ್ರಹ
ಪಿ.ಶಿವಕುಮಾರ್
ದೊಡ್ಡ ಕವಲಂದೆ: ನಂಜನಗೂಡು ವಿಧಾನಸಭಾ ಕ್ಷೇತ್ರದ ದೊಡ್ಡ ಕವಲಂದೆ ಗ್ರಾಮದಲ್ಲಿರುವ ನಾಡಕಚೇರಿ ಅವ್ಯವಸ್ಥೆಯಿಂದ ಕೂಡಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬಂದಿದೆ.
ಮುಖ್ಯವಾಗಿ ನಾಡಕಚೇರಿಗೆ ಸ್ವಂತ ಕಟ್ಟಡ ಇಲ್ಲ. ೧೫ ವರ್ಷಗಳಿಂದಲೂ ಆಸ್ಪತ್ರೆಗೆ ಸೇರಿದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಕಟ್ಟಡವನ್ನು ನಾಡಕಚೇರಿಗೆ ಹಸ್ತಾಂತರಿಸಿಲ್ಲ. ಈಗಲೂ ಆಸ್ಪತ್ರೆ ಹೆಸರಿನಲ್ಲಿ ನಮೂದಾಗಿದೆ.
ಕಟ್ಟಡ ನಿರ್ಮಿಸಿ ಹಲವಾರು ವರ್ಷಗಳು ಕಳೆದಿರುವ ಕಾರಣ ಕಟ್ಟಡ ದುಸ್ಥಿತಿಗೆ ತಲುಪಿದೆ. ಕಟ್ಟಡದ ಗೋಡೆಗಳು ಮತ್ತು ಚಾವಣಿ ಶಿಥಿಲಾವಸ್ಥೆಗೆ ತಲುಪಿದೆ. ಚಾವಣಿಯ ಹೆಂಚುಗಳು ಕಳಚಿ ಬೀಳುತ್ತಿದ್ದು, ಮಳೆಗಾಲದಲ್ಲಿ ಕಟ್ಟಡ ಸೋರುತ್ತಿದೆ.
ಹೋಬಳಿ ವ್ಯಾಪ್ತಿಯ ರೈತರಿಗೆ ಸಂಬಂಧಪಟ್ಟ ಸಾಕಷ್ಟು ದಾಖಲೆಗಳು ಲಭ್ಯವಿದ್ದು, ಅಭದ್ರತೆ ಕಾಡುತ್ತಿದೆ. ಒಂದು ವೇಳೆ ದಾಖಲಾತಿ ಹಾಳಾದರೆ ಯಾರು ಹೊಣೆ ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಗಬ್ಬು ನಾರುತ್ತಿರುವ ಆವರಣ: ನಾಡಕಚೇರಿ ಆವರಣ ಗಬ್ಬುನಾರುತ್ತಿದೆ. ಮಳೆಗಾಲದಲ್ಲಿ ಕೆಸರುಗದ್ದೆ ಆಗುವ ಜೊತೆಗೆ ಕಸ-ಕಡ್ಡಿಗಳ ರಾಶಿ ಎಲ್ಲೆಡೆ ಕಂಡು ಬರುತ್ತದೆ. ಕಚೇರಿಗೆ ಬರುವ ರೈತರು ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಗೃಹ, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲವಾಗಿದೆ. ದೊಡ್ಡ ಕವಲಂದೆ ಗ್ರಾಮ ಹೋಬಳಿ ಕೇಂದ್ರವಾಗಿದ್ದು, ಅಭಿವೃದ್ಧಿ ಮಾತ್ರ ಮರೀಚಿಕೆ ಯಾಗಿದೆ.
ಕವಲಂದೆ ಸಮೀಪದ ಹೊಸೂರು ಗ್ರಾಮದ ಗೇಟ್ ಬಳಿ ವಿದ್ಯಾರ್ಥಿ ನಿಲಯಕ್ಕೆ ಸೇರಿದ ಸುಸಜ್ಜಿತವಾದ ಕಟ್ಟಡ ಖಾಲಿ ಇದೆ. ಈ ವಿದ್ಯಾರ್ಥಿನಿಲಯವು ಸ್ಥಗಿತಗೊಂಡು ಹಲವಾರು ವರ್ಷಗಳು ಕಳೆದಿದ್ದು, ಪಾಳು ಬಿದ್ದಿದೆ. ಈ ಖಾಲಿ ಕಟ್ಟಡವನ್ನಾದರೂ ನಾಡ ಕಚೇರಿಗೆ ಅಥವಾ ಬೇರೆ ಯಾವುದಾದರೂ ಸರ್ಕಾರಿ ಕಚೇರಿಗೆ ಬಳಸಿಕೊಳ್ಳಬಹುದು ಎಂಬುದು ಸ್ಥಳೀಯರ ಸಲಹೆಯಾಗಿದೆ. ಸ್ಥಳೀಯ ಶಾಸಕರು, ಸಂಸದರು ಇತ್ತ ಗಮನ ಹರಿಸಿ ದೊಡ್ಡ ಕವಲಂದೆ ನಾಡಕಚೇರಿಗೆ ನೂತನ ಕಟ್ಟಡ ಒದಗಿಸುವ ಜೊತೆಗೆ ಅವ್ಯವಸ್ಥೆಯನ್ನು ಸರಿಪಡಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
” ದೊಡ್ಡ ಕವಲಂದೆ ನಾಡಕಚೇರಿಗೆ ಸ್ವಂತ ಕಟ್ಟಡ ಇಲ್ಲದಿರುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಶೀಘ್ರದಲ್ಲಿ ಕ್ರಮ ಕೈಗೊಳ್ಳುತ್ತೇನೆ.”
-ಶಿವಕುಮಾರ್ ಕಾಸನೂರು, ತಹಸಿಲ್ದಾರ್
” ದೊಡ್ಡ ಕವಲಂದೆ ನಾಡಕಚೇರಿಗೆ ಬರುವ ರೈತರು ಮತ್ತು ಸಾರ್ವಜನಿಕರಿಗೆ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕೂರಲು ಆಸನಗಳ ವ್ಯವಸ್ಥೆ ಇಲ್ಲ. ಶೌಚಗೃಹ ಇಲ್ಲ. ಕುಡಿಯಲು ನೀರು ಇಲ್ಲ. ಮೇಲಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೌಲಭ್ಯ ಒದಗಿಸಬೇಕು.”
-ಸಿದ್ದಲಿಂಗಪ್ಪ, ಕವಲಂದೆ ಗ್ರಾಪಂ ಸದಸ್ಯರು, ಹರಗನಪುರ





