ಪ್ರಶಾಂತ್ ಎಸ್.
ಮೈಸೂರು: ನಗರದ ಸುಗಮ ಸಂಚಾರಕ್ಕಾಗಿ ನಿರ್ಮಿಸಿದ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚಾರಕ್ಕೆ ತುಂಬಾ ತೊಡಕಾಗಿದೆ.
ಗಂಗೋತ್ರಿ ಹುಡ್ಕೋ ಬಡಾವಣೆ, ತೊಣಚಿಕೊಪ್ಪಲು ಸೇರಿದಂತೆ ಪ್ರಮುಖ ರಸ್ತೆಗಳು ಹಾಗೂ ಅಡ್ಡ ರಸ್ತೆಗಳು ಗುಂಡಿಮಯವಾಗಿವೆ. ರಸ್ತೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.
ಬೈಕ್ ಸವಾರರಿಗೆ ಸಂಕಷ್ಟ: ರಸ್ತೆಯಲ್ಲಿರುವ ಗುಂಡಿಗಳು ಬೈಕ್, ಕಾರು ಹಾಗೂ ಪಾದಚಾರಿಗಳಿಗೂ ಮೃತ್ಯು ಕೂಪಗಳಾಗಿವೆ. ಗುಂಡಿಗಳಲ್ಲಿ ಬಿದ್ದ ಕೆಲ ಬೈಕ್ ಸವಾರರು ಕೈ ಕಾಲು ಮುರಿದುಕೊಂಡಿದ್ದರೆ, ಇನ್ನೂ ಕೆಲವರು ಗಂಭೀರ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ. ಇನ್ನು ನುರಿತ ಸವಾರರು ಎಂದುಕೊಂಡಿರುವ ಕೆಲವರಂತೂ ಒಮ್ಮೊಮ್ಮೆ ಅನಿರೀಕ್ಷಿತವಾಗಿ ಎದುರಾಗುವ ಗುಂಡಿ ತಪ್ಪಿಸಲು ಹೋಗಿ ಬಿದ್ದಿದ್ದಾರೆ. ಇನ್ನೂ ಕೆಲವೆಡೆ ಹಿಂಬದಿಯಿಂದ ಬರುವ ವಾಹನ ಗಳು ಡಿಕ್ಕಿಯಾಗಿ ಆಗಾಗ್ಗೆ ಅಪಘಾತಗಳಾಗುವುದು ಇಲ್ಲಿ ಸಾಮಾನ್ಯವಾಗಿದೆ.
ಮಣ್ಣು ಹಾಕಿ ಅವಾಂತರ: ಗುಂಡಿ ಬಿದ್ದ ರಸ್ತೆಗಳಿಗೆ ಟ್ರಾಕ್ಟರ್, ಜೆಸಿಬಿಗಳ ಮೂಲಕ ಮಣ್ಣು ಮುಚ್ಚಿ ಕೈತೊಳೆದುಕೊಳ್ಳಲಾಗುತ್ತಿದೆ. ಇದರಿಂದಾಗಿ ಮಳೆಗಾಲ ದಲ್ಲಿ ಕೆಸರುಮಯವಾದರೆ, ಬೇಸಿಗೆ ಕಾಲದಲ್ಲಿ ರಸ್ತೆಗಳು ದೂಳು ಮಯವಾಗಿರುತ್ತವೆ. ಈ ರಸ್ತೆಗಳಲ್ಲಿ ಬೈಕ್, ಕಾರು, ಲಾರಿಗಳು ಸಂಚರಿಸಿದರಂತೂ ಸಾರ್ವಜನಿಕರಿಗೆ ದೂಳಿನ ಸ್ನಾನವೇ ಗತಿಯಾಗುತ್ತಿದೆ.
ಸಮಸ್ಯೆಗೆ ಮುಕ್ತಿ ಯಾವಾಗ?: ನಗರದ ಮುಖ್ಯರಸ್ತೆಯಲ್ಲಿ ಹಲವು ಕಾರಣಗಳಿಂದ ತೋಡಿರುವ ಹಾಗೂ ಕಳಪೆ ಕಾಮಗಾರಿಗಳಿಂದಾಗಿ ಬಿದ್ದ ಗುಂಡಿಗಳು ಸವಾರರಿಗೆ ತಲೆನೋವು ತರಿಸಿವೆ. ಗುಂಡಿಮಯ ರಸ್ತೆಗಳು ಟ್ರಾಫಿಕ್ ಜಾಮ್‌ಗೂ ಕಾರಣವಾಗಿವೆ. ಹೀಗಾಗಿ ಈ ರಸ್ತೆಗಳನ್ನು ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
” ಪ್ರತಿದಿನ ಓಡಾಡುವ ರಸ್ತೆಯನ್ನು ಸರಿಪಡಿಸಿ ಎಂದರೆ ಮಣ್ಣು ಹಾಕಿದ್ದಾರೆ. ಇದರಿಂದ ಬೈಕ್ ಸವಾರರು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ರಾತ್ರಿ ವೇಳೆಯಂತೂ ಕೆಲಸ ಮುಗಿಸಿಕೊಂಡು ಬರುವಾಗ ಜೀವ ಕೈಯಲ್ಲಿ ಹಿಡಿದು ಕೊಂಡು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಈ ಸಮಸ್ಯೆಯನ್ನು ಪಾಲಿಕೆ ಬಗೆಹರಿಸಿಕೊಡಬೇಕು.”
-ಪ್ರವೀಣ್, ಸ್ಥಳೀಯರು
” ಮೈಸೂರಿನ ಬಹುತೇಕ ರಸ್ತೆಗಳು ಗುಂಡಿಬಿದ್ದು ಹಾಳಾಗಿವೆ. ನಗರಪಾಲಿಕೆ ಯಾವುದೇ ದುರಸ್ತಿ ಕಾಮಗಾರಿ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ. ಇದು ಸರಿಯಾದ ಕ್ರಮವಲ್ಲ, ಅಽಕಾರಿಗಳು ಕೇವಲ ನಿಯಮ, ಸಬೂಬು ಹೇಳುತ್ತಿದ್ದಾರೆ. ಶಾಸಕರು ಚುನಾವಣೆಯಲ್ಲಿ ಗೆದ್ದ ನಂತರ ಜನಸಂಪರ್ಕ ಕಳೆದುಕೊಂಡು ಅಭಿವೃದ್ಧಿ ಮರೆತಿದ್ದಾರೆ.”
-ಶ್ರೀಧರ್ ನಾಯಕ್, ಸ್ಥಳೀಯರು





