ಪ್ರಶಾಂತ್ ಎಸ್.
ಮೈಸೂರು: ನಗರ ಹೊರವಲಯದ ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ರಸ್ತೆಗಳ ದುಸ್ಥಿತಿಯಿಂದಾಗಿ ವಾಹನಗಳ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ವಾಹನ ಚಲಾಯಿಸುತ್ತಿದ್ದರೆ, ಮತ್ತೊಂದೆಡೆ ರಸ್ತೆಗಳನ್ನು ಅಗೆಯುತ್ತಿರುವುದರಿಂದ ನಿವಾಸಿಗಳ ಬದುಕು ದುಸ್ತರವಾಗಿದೆ. ಪೈಪ್ಲೈನ್ ಅಳವಡಿಕೆಗಾಗಿ ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ.
ಎಲ್ಲೆಂದರಲ್ಲಿ ಬೃಹತ್ ಗುಂಡಿಗಳು ನಿರ್ಮಾಣ ವಾಗಿದ್ದು, ಯಾವುದೇ ಸುರಕ್ಷತಾ ಕ್ರಮದ ಫಲಕವೂ ಇಲ್ಲ. ಕಾಮಗಾರಿಯ ಬಗ್ಗೆ ಮಾಹಿತಿ ನೀಡುವ ಒಂದೇ ಒಂದೂ ಸೂಚನಾ ಫಲಕವನ್ನೂ ಇಲ್ಲಿ ಅಳವಡಿಸಿಲ್ಲ. ಇದು ಸಾರ್ವಜನಿಕರ ಆಕ್ರೋ ಶಕ್ಕೆ ಕಾರಣವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಣ್ಣು ಹಾಕಿ ಅವಾಂತರ : ರಸ್ತೆ ಗುಂಡಿಗಳನ್ನು ಮಣ್ಣಿನಿಂದ ಮುಚ್ಚುವ ಪಂಚಾಯಿತಿ ಕಾರ್ಯ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ವಾರಕ್ಕೊಮ್ಮೆ ಗುಂಡಿಯನ್ನು ಮಣ್ಣಿನಿಂದ ಮುಚ್ಚಲು ಭಾರೀ ಹಣ ವ್ಯಯಿಸಲಾಗುತ್ತಿದೆ.
ಟ್ರಾಕ್ಟರ್, ಜೆಸಿಬಿಗಳ ಮೂಲಕ ರಾಶಿ ರಾಶಿ ಮಣ್ಣನ್ನು ತಂದು ರಸ್ತೆಗೆ ಸುರಿಯಲಾಗುತ್ತಿದೆ. ಇದರಿಂದ ಕೇವಲ ಮಣ್ಣು ಮಾತ್ರವಲ್ಲದೆ ಅದರೊಂದಿಗೆ ಕಲ್ಲುಗಳೂ ಸೇರಿ ದ್ವಿಚಕ್ರ ವಾಹನ ಸವಾರರು ಬೀಳುವ ಅಪಾಯವನ್ನು ತಂದೊಡ್ಡಿದೆ. ಈ ಮಧ್ಯೆ ಕೆಲವು ಕಾಮಗಾರಿಗೆ ತೋಡಿದ್ದ ಗುಂಡಿಗಳನ್ನು ಸರಿಯಾಗಿ ಮುಚ್ಚದಿರುವುದರಿಂದ ಅಲ್ಲಲ್ಲಿ ಸಂಚಾರಕ್ಕೆ ಅಡ್ಡಿಯಾಗಿದೆ. ವಾತಾವರಣದ ವೈಪರೀತ್ಯದಿಂದ ಮಳೆಯೇ ನಾದರೂ ಬಂದರೆ ಈ ರಸ್ತೆಯಲ್ಲಿನ ಭಾರಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳುವುದರಿಂದ ವಾಹನ ಸವಾರರು, ಸಾರ್ವಜನಿಕರು, ಅದರಲ್ಲೂ ಹಿರಿಯ ನಾಗರಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದೆ.
” ಶಿವಪುರ, ಚಾಮುಂಡೇಶ್ವರಿ ಬಡಾವಣೆ ರಸ್ತೆಗಳಲ್ಲಿ ಓಡಾಡುವುದೇ ಕಷ್ಟವಾಗಿದೆ. ಕೇಬಲ್, ವಿದ್ಯುತ್ ತಂತಿ, ಯುಜಿಡಿ, ನೀರಿನ ಸಂಪರ್ಕ ಸರಿಪಡಿಸಲು ರಸ್ತೆಯನ್ನು ಕಿತ್ತು ಹಾಕಲಾಗಿದೆ. ಈಗ ರಸ್ತೆಯನ್ನು ಅಭಿವೃದ್ಧಿಪಡಿಸದೇ ಹಾಗೆಯೇ ಬಿಡಲಾಗಿದ್ದು, ವಾಹನ ಸವಾರರಿಗೆ ನಿತ್ಯ ತೊಂದರೆಯಾಗಿದೆ.”
ಶಿವರಾಜು, ಚಾಮುಂಡೇಶ್ವರಿ ಬಡಾವಣೆ
” ಗುಂಡಿ ಮುಚ್ಚದಿರುವ ಬಗ್ಗೆ ಈಗಷ್ಟೇ ತಿಳಿದಿದೆ. ತಕ್ಷಣ ಪಂಚಾಯಿತಿ ಸಿಬ್ಬಂದಿಗಳಿಗೆ ಮಾಹಿತಿ ನೀಡಿ ಗುಂಡಿ ಮುಚ್ಚುವಂತೆ ಸೂಚನೆ ನೀಡಲಾಗುವುದು. ಜೊತೆಗೆ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.”
ಸುರೇಶ್, ಮುಖ್ಯಾಧಿಕಾರಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ




