- 2021ರಲ್ಲಿ ಸುರಿದ ಮಳೆಗೆ ಕುಸಿದಿದ್ದ ರಸ್ತೆ; ಈ ದಸರಾ ವೇಳೆಗೆ ಕಾಮಗಾರಿ ಮುಗಿಯುವುದೂ ಅನುಮಾನ
- 3 ವರ್ಷಗಳಿಂದ ಕುಂಟುತ್ತಿರುವ ಕಾಮಗಾರಿ
- ಶೇ.60 ರಷ್ಟು ಕಾಮಗಾರಿ ಮಾತ್ರ ಪೂರ್ಣ
- 9.75 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು
ಮೈಸೂರು: ಚಾಮುಂಡಿಬೆಟ್ಟದ ನಂದಿ ಮಾರ್ಗದ ರಸ್ತೆಯ ದುರಸ್ತಿ ಕಾಮಗಾರಿ ತೆವಳುತ್ತಾ ಸಾಗಿದ್ದು, ಬಹುಶಃ ಈ ಬಾರಿಯ ದಸರಾ ಹಬ್ಬದ ವೇಳೆಗೂ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇಲ್ಲ.
ಮೂರು ವರ್ಷಗಳ ಹಿಂದೆ ಚಾಮುಂಡಿಬೆಟ್ಟದ ನಂದಿ ಮಾರ್ಗದ ರಸ್ತೆ ಕುಸಿದಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಾಮಗಾರಿ ಮಾತ್ರ ಇಂದಿಗೂ ಕುಂಟುತ್ತಾ ಸಾಗಿದೆ. ಸಮಸ್ಯೆಯನ್ನು ವಿಶೇಷ ಸರಿಪಡಿಸಬೇಕಾದ ಜನಪ್ರತಿನಿಧಿ ಗಳು ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿ ಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಗರದ ಪ್ರಮುಖ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಚಾಮುಂಡಿಬೆಟ್ಟ ಕೂಡ ಒಂದಾಗಿದೆ. ಪ್ರಮುಖ ಧಾರ್ಮಿಕ ಕೇಂದ್ರವಾದ ಚಾಮುಂಡಿಬೆಟ್ಟಕ್ಕೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅವರು ದೇವಾಲಯದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯು ತ್ತಾರೆ. ನಂತರ ಸಾಮಾನ್ಯವಾಗಿ ಪ್ರವಾಸಿಗರು ತೆರಳುವುದು ನಂದಿ ವಿಗ್ರಹದ ಕಡೆಗೆ, ಏಕಶಿಲಾ ನಂದಿ ಮೂರ್ತಿಯನು ಕಣ್ಣುಂಬಿಕೊಳ್ಳದಿದ್ದಲ್ಲಿ ಪ್ರವಾಸ ಅಪೂರ್ಣ ಎಂದೇ ಅವರ ಭಾವನೆ. ಆದರೆ, ನಂದಿ ಮಾರ್ಗದ ರಸ್ತೆ ಕುಸಿದು ಮೂರು ವರ್ಷಗಳಾದರೂ ಕಾಮಗಾರಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ.
2021ರ ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಗೆ ನಂದಿ ಮಾರ್ಗದ ರಸ್ತೆಯಲ್ಲಿ ಭೂ ಕುಸಿತವಾಗಿತ್ತು. 2022ರ ಡಿಸೆಂಬರ್ ತಿಂಗಳಿನಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ದುರಸ್ತಿ ಕಾರ್ಯ ಆರಂಭವಾಗಿತ್ತು. ಆದರೆ, ಕಾಮಗಾರಿ ಇನ್ನೂ ಮುಗಿಯದ ಕಾರಣ ಸಂಚಾರ ಮಾರ್ಗ ಬಂದ್ ಆಗಿದೆ.
ರಾಜ್ಯ ಸರ್ಕಾರ ಕಾಲಕಾಲಕ್ಕೆ ಅನುದಾನ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈ ಕಾರಣದಿಂದ ಕಾಮಗಾರಿ ನಿಧಾನ ಗತಿಯಲ್ಲಿದೆ. ಇದೀಗ ಶೇ.60ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಕುಸಿತವಾಗಿದ್ದ ಜಾಗದಲ್ಲಿ 20 ಅಡಿ ಆಳದಿಂದ ಮಣ್ಣನ್ನು ಹೊರಗೆ ಹಾಕಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ.
ಚಾಮುಂಡಿಬೆಟ್ಟ ಸೂಕ್ಷ್ಮ ಪ್ರದೇಶವಾಗಿದ್ದು, ಬೆಟ್ಟದ ಮೇಲೆ ಭೂಮಿಯನ್ನು ಅಗೆಯುವುದು, ಬಂಡೆ ಸಿಡಿಸು ವುದು ಇನ್ನಿತರ ಯಾವುದೇ ಚಟುವಟಿಕೆ ಅಪಾಯಕ್ಕೆ ಆಹ್ವಾನ ನೀಡಿದಂತೆ. ಆದರೆ, ಬೆಟ್ಟದ ಮೇಲೆ ನಿರಂತರ ಕಾಮಗಾರಿಗಳು, ಕಟ್ಟಡ ನಿರ್ಮಾಣ ಈ ಕಾರಣಗಳಿಂದ ಚಾಮುಂಡಿಬೆಟ್ಟ ಮೊದಲಿನಂತೆ ಉಳಿದಿಲ್ಲ. ಕಳೆದ ಐದು ವರ್ಷಗಳಲ್ಲಿ ಭಾರಿ ಮಳೆಗೆ ಬೆಟ್ಟದ ಹಲವೆಡೆ ಮಣ್ಣು ಕುಸಿದಿರುವ ಉದಾಹರಣೆಗಳು ಇವೆ. ಬೆಟ್ಟದ ನಂದಿ ಮಾರ್ಗದಲ್ಲೇ ಮೂರು ಕಡೆ ಭೂ ಕುಸಿತ ಉಂಟಾಗಿತ್ತು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಭೂ ತಾಂತ್ರಿಕ ಇಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಕಲ್ಲುಗಳನ್ನು ಜೋಡಿಸಿ ಕಬ್ಬಿಣದ ಜಾಲರಿ ಅಳವಡಿಸಿ ಕಾಂಕ್ರೀಟ್ ತಡೆಗೋಡೆ ಹಾಕಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡಿತ್ತು.
ರಸ್ತೆ ದುರಸ್ತಿ ಕಾಮಗಾರಿಗೆ 9.75 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತು. ಆದರೀಗ ಹೆಚ್ಚಿನ ಅನು ದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಹಣ ಬಿಡು ಗಡೆಯಾಗಿದ್ದು, ದಸರಾ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರೇ ಹೇಳಿದ್ದರೂ, ಸ್ಥಳಕ್ಕೆ ತೆರಳಿ ಕಾಮಗಾರಿ ವೇಗ ಗಮನಿಸಿದಲ್ಲಿ ದಸರಾವೇಳೆಗೆ ಕಾಮಗಾರಿಪೂರ್ಣಗೊಳ್ಳು ವುದು ಕಷ್ಟಸಾಧ್ಯ ಎಂಬುದು ಮನದಟ್ಟಾಗುತ್ತದೆ.
ರಸ್ತೆ ದುರಸ್ತಿ ಕಾಮಗಾರಿಗೆ 5 ಕೋಟಿ ರೂ. ಟೆಂಡರ್ ಆಹ್ವಾನ
ನಂದಿ ಮಾರ್ಗದಲ್ಲಿ ಎರಡು ಕಡೆ ರಸ್ತೆ ಕುಸಿತ ಉಂಟಾಗಿದೆ. ಇದೀಗ ಒಂದು ರಸ್ತೆಯ ದುರಸ್ತಿ ಕಾರ್ಯ ಮಾತ್ರ ನಡೆಯುತ್ತಿದೆ. ಅದರ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಆದರೆ, ಮತ್ತೊಂದು ಕಡೆ ಉಂಟಾಗಿರುವ ಕುಸಿತದ ರಸ್ತೆಯನ್ನು ದುರಸ್ತಿಗೊಳಿಸಲು ಅಂದಾಜು 5 ಕೋಟಿ ರೂ. ವೆಚ್ಚದ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ. ಈ ಸಂಬಂಧ ಸರ್ಕಾರದಿಂದ ಅನುದಾನ ಬಿಡುಗಡೆಯಾದಲ್ಲಿ ಕಾಮಗಾರಿಯನ್ನು ಆರಂಭಿಸಬಹದು. ಒಂದು ಭಾಗದ ರಸ್ತೆ ದುರಸ್ತಿಯಾದರೂ, ಉಳಿದ ಕಾಮಗಾರಿ ಪೂರ್ಣಗೊಳ್ಳುವವರೆಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲು ಆಗುವುದಿಲ್ಲ. – ಎಚ್.ವಸಂತ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಲೋಕೋಪಯೋಗಿ ಇಲಾಖೆ.