Mysore
18
scattered clouds

Social Media

ಸೋಮವಾರ, 12 ಜನವರಿ 2026
Light
Dark

ಗಂಡಾಂತರ ತಂದೊಡ್ಡಿವೆ ಗುಂಡಿ ಬಿದ್ದ ರಸ್ತೆಗಳು

ಕೆ.ಪಿ.ಮದನ್

ಮೈಸೂರು: ಎಲ್ಲೆಂದರಲ್ಲಿ ತುಂಬಿದ ಕೆಸರು, ಸಂಪೂರ್ಣ ಹಾಳಾದ ರಸ್ತೆ, ತಗ್ಗಿನಲ್ಲಿ ಮಳೆನೀರು ನಿಂತು ನಿರ್ಮಾಣಗೊಂಡ ಬೃಹತ್ ಹೊಂಡಗಳು. ರಸ್ತೆ ತುಂಬೆಲ್ಲಾ ಕಲ್ಲು, ಮಳೆ ಬಂದಾಗ ಇಲ್ಲಿ ಸಂಚರಿಸಿದರೆ  ಮೈಗೆ ಕೆಸರಿನ ಅಭಿಷೇಕ, ಬಿಸಿಲು ಇದ್ದಾಗ ಸಂಚರಿಸಿದರೆ ದೂಳಿನ ಅಭಿಷೇಕ..!

ಇದು ವರ್ಷಗಟ್ಟಲೆ ಅಭಿವೃದ್ಧಿ ಕಾಣದ ಗ್ರಾಮೀಣ ಪ್ರದೇಶದ ರಸ್ತೆಯ ಚಿತ್ರಣವಲ್ಲ, ನಗರದ ಹೆಬ್ಬಾಳು ಕೈಗಾ ರಿಕಾ ಪ್ರದೇಶದ ರಾಣೆ ಮದ್ರಾಸ್ ರಸ್ತೆಯ ದುಸ್ಥಿತಿ. ಹಲವು ವರ್ಷಗಳಿಂದ ಈ ರಸ್ತೆ ಡಾಂಬರೀಕರಣವನ್ನೇ ಕಾಣದೆ ರಸ್ತೆ ಪೂರ್ತಿ ಗುಂಡಿಮಯವಾಗಿದೆ. ಇದೀಗ ನಿತ್ಯ ಮಳೆ ಸುರಿಯುತ್ತಿರುವುದರಿಂದ ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ಕೆರೆಯೋ ಪಾದಿಯಲ್ಲಿ ನಿಂತಿದೆ. ಪಾದಚಾರಿ ಗಳು, ವಾಹನ ಸವಾರರು ಇಲ್ಲಿ ಸಂಚರಿಸಲು ದೊಡ್ಡ ಸಾಹಸವನ್ನೇ ಮಾಡಬೇಕಿದೆ.

ಕಳೆದ ಮೂರ‍್ನಾಲ್ಕು ದಿನಗಳಿಂದ ಮೈಸೂರು ನಗರಾದ್ಯಂತ ಜಿಟಿಜಿಟಿ ಮಳೆ ಸುರಿಯುತ್ತಿದೆ. ಹೀಗಾಗಿ ಸಾರ್ವಜನಿಕರು, ವಾಹನ ಸವಾರರು ಕೆಸರು ತುಂಬಿದ ರಾಡಿ ರಸ್ತೆಯಲ್ಲಿ ಸಂಚರಿಸುತ್ತಾಹೂಟಗಳ್ಳಿ ನಗರಸಭೆ ಆಡಳಿತ, ಜನಪ್ರತಿನಿಧಿಗಳು ಮತ್ತು ಅಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.ಹೆಬ್ಬಾಳು ಕೈಗಾರಿಕಾ ಪ್ರದೇಶವಾಗಿರುವುದ ರಿಂದ ಆಟೋಗಳು, ದ್ವಿಚಕ್ರ ವಾಹನಗಳು, ಕಾರುಗಳು, ಮಿನಿ ಗೂಡ್ಸ್ ವಾಹನಗಳು, ಭಾರೀ ವಾಹನಗಳು ಇಲ್ಲಿ ಸಂಚರಿಸುತ್ತವೆ.

ಅಲ್ಲದೆ ಶಾಲಾ-ಕಾಲೇಜು ವಾಹನಗಳೂ ಈ ರಸ್ತೆಯಲ್ಲಿ ದಿನ ನಿತ್ಯ ಸಂಚರಿಸುತ್ತವೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಹಲವು ಬಾರಿ ನಡು ರಸ್ತೆಯಲ್ಲಿ ಕೆಟ್ಟು ನಿಂತ ನಿದರ್ಶನಗಳೂ ಸಾಕಷ್ಟಿವೆ. ಮೈಸೂರಿನ ಬಹುತೇಕ ರಸ್ತೆಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಯಾವುದೇ ವಾಹನಗಳ ಮಾಲೀಕರಿಗೆ ರಸ್ತೆ ತೆರಿಗೆಯನ್ನು ಮುಂಗಡವಾಗಿ ಕಟ್ಟಿಸಿಕೊಳ್ಳುವ ವ್ಯವಸ್ಥೆ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸುರಕ್ಷಿತ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳನ್ನು ರೂಪಿಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲ ವಾಗಿದೆ. ರಸ್ತೆಗಳ ದುರಸ್ತಿ ಪಡಿಸಲು ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹೆಬ್ಬಾಳ ಕೈಗಾರಿಕಾ ಪ್ರದೇಶದ ಹೆಚ್ಚಿನ ರಸ್ತೆಗಳು ಹಲವು ವರ್ಷಗಳಿಂದ ಡಾಂಬರೀಕರಣವನ್ನೇ ಕಂಡಿಲ್ಲ, ಇದರ ಪರಿಣಾಮವಾಗಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಇಲ್ಲಿ ಸಂಚರಿಸುವವರಿಗೆ ಆತಂಕ ಸೃಷಿಸಿವೆ.

ಮಳೆಗಾಲದಲ್ಲಿ ಮತ್ತಷ್ಟು ಅಧ್ವಾನ: ಮಳೆಗಾಲದಲ್ಲಿ ಗುಂಡಿಗಳು ಮಳೆ ನೀರಿನಿಂದ ತುಂಬಿ ಮತ್ತಷ್ಟು ಅಧ್ವಾನಕ್ಕೆ ಕಾರಣವಾಗುತ್ತವೆ. ಈ ಗುಂಡಿಗಳ ನಡುವೆಯೇ ವಾಹನಗಳನ್ನು ಚಲಾಯಿಸುವ ಅನಿವಾರ್ಯತೆ ಚಾಲಕರದ್ದಾಗಿದೆ. ರಸ್ತೆಯ ಬದಿಯಲ್ಲಿ ನಡೆದು ಹೋಗುವವರಿಗೂ ಕೆಸರು ಮೈಮೇಲೆ ರಾಚುತ್ತಿದೆ. ಗುಂಡಿಗಳಲ್ಲಿ ನೀರು ನಿಲ್ಲುವ ಕಾರಣ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ತೆರಳುತ್ತಿದ್ದಾರೆ.

” ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಂದ ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಳ್ಳವುದರಿಂದ ಹೆಚ್ಚಿನ ಸಮಸ್ಯೆಯಾಗುತ್ತಿದೆ. ವಾಹನ ಸವಾರರು ನಿತ್ಯ ಈ ರಸ್ತೆಯಲ್ಲಿ ಸರ್ಕಸ್ ಮಾಡಬೇಕಿದೆ. ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.”

 -ಪ್ರದೀಪ್, ಸ್ಥಳೀಯರು

” ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಣೆ ಮದ್ರಾಸ್ ರಸ್ತೆಯು ಸಂಪೂರ್ಣ ಹಾಳಾಗಿರುವುದರಿಂದ ಡಾಂಬರೀಕರಣ ಮಾಡಲು ಟೆಂಡರ್ ಕರೆಯಲಾಗಿದೆ. ಅತಿ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ವಾಗಲಿದೆ.”

ಚಂದ್ರಶೇಖರ್, ನಗರಸಭೆ ಆಯುಕ್ತ, ಹೂಟಗಳ್ಳಿ

” ಹಲವು ವರ್ಷಗಳಿಂದ ರಸ್ತೆಯನ್ನು ಡಾಂಬರೀಕರಣ ಮಾಡಿಲ್ಲ, ಇದರಿಂದ ಸ್ಥಳೀಯರೇ ಗುಂಡಿಗೆ ಮಣ್ಣನ್ನು ತಂದು ಹಾಕುತ್ತಿದ್ದಾರೆ. ಪ್ರತಿ ನಿತ್ಯ ಶಾಲಾಬಸ್ಗಳು ಹಾಗೂ ಕೈಗಾರಿಕಾ ಪ್ರದೇಶದ ವಾಹನಗಳು ಈ ರಸ್ತೆಯಲ್ಲಿ ಹೆಚ್ಚು ಸಂಚರಿಸುತ್ತವೆ.ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ರಸ್ತೆಯು ಶೋಚನೀಯ ಸ್ಥಿತಿಯಲ್ಲಿದೆ.”

– ಲಕ್ಷ್ಮಿ, ಸ್ಥಳೀಯರು

Tags:
error: Content is protected !!