Mysore
28
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಗುಂಡಿ ಬಿದ್ದಿರುವ ರಸ್ತೆಯಿಂದ ಗ್ರಾಮಸ್ಥರು ಹೈರಾಣು

ಕೃಷ್ಣ ಸಿದ್ದಾಪುರ

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ  ದುರಸ್ತಿಗೆ ಒತ್ತಾಯ

ಸಿದ್ದಾಪುರ: ಪೌರಾಣಿಕ ಹಿನ್ನೆಲೆಯುಳ್ಳ ಶ್ರೀ ಅಗಸ್ತ್ಯೇಶ್ವರ ದೇವಾಲಯಕ್ಕೆ ತೆರಳುವ ಮುಖ್ಯರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು ೨ನೇ ವಾರ್ಡ್‌ನ ಕೂಡುಗದ್ದೆ, ಗುಹ್ಯ ಕಕ್ಕಟುಕಾಡು ಗ್ರಾಮದ ಸಂಪರ್ಕ ರಸ್ತೆಗಳು ದುರಸ್ತಿ ಕಾಣದೆ ಗುಂಡಿಬಿದ್ದಿದ್ದು, ಇದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ.

ಕೊಡುಗದ್ದೆಯಿಂದ ನೆಲ್ಯಹುದಿಕೇರಿ-ಸಿದ್ದಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಅಭಿವೃದ್ಧಿ ಮರೀಚಿಕೆಯಾಗಿದೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚರಿಸಲು ಜನರು ಹರಸಾಹಸಪಡುವಂತಾಗಿದೆ.

೧೫ ವರ್ಷಗಳ ಹಿಂದೆ ಕಾವೇರಿ ನದಿಗೆ ನೂತನ ಸೇತುವೆ ನಿರ್ಮಾಣ ಕಾರ್ಯ ನಡೆದಿತ್ತು. ಆ ಸಂದರ್ಭದಲ್ಲಿ ಅಗಲೀಕರಣ ಕಂಡು ದುರಸ್ತಿಯಾದ ರಸ್ತೆ, ನಂತರದಲ್ಲಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ಪರಿಣಾಮ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸ್ಥಳೀಯರು ಸಮಸ್ಯೆ ಎದುರಿಸುತ್ತಿದ್ದಾರೆ.

ನಿತ್ಯ ನೂರಾರು ಕಾರ್ಮಿಕರು, ಶಾಲೆ ವಿದ್ಯಾರ್ಥಿಗಳು, ಸಾರ್ವಜನಿಕರು ಈ ರಸ್ತೆಯಲ್ಲೇ ಸಂಚರಿಸುತಿದ್ದು, ಖಾಸಗಿ ಅಥವಾ ಬಾಡಿಗೆ ವಾಹನಗಳನ್ನೇ ಅವಲಂಬಿಸಬೇಕಿದೆ. ಹದಗೆಟ್ಟ ರಸ್ತೆಯಿಂದಾಗಿ ತುರ್ತು ಸಂದರ್ಭಗಳಲ್ಲಿ ಬಾಡಿಗೆವಾಹನದವರು ಬಾರಲು ಹಿಂದೇಟು ಹಾಕುತ್ತಾರೆ. ಅಲ್ಲದೆ ದುಪ್ಪಟ್ಟು ಬಾಡಿಗೆ ಕೇಳುತ್ತಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ರಸ್ತೆಗೆ ಸಂಪರ್ಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ನೀರು ರಸ್ತೆ ಮೇಲೆಯೇ ಹರಿಯುವುದರಿಂದ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿ ಕೆರೆಯಂತಾಗಿದೆ. ರಸ್ತೆ ಬದಿಗಳಲ್ಲಿ ಗಿಡ-ಗಂಟಿಗಳು ಬೆಳೆದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಾಹನಗಳು ಎದುರಾದರೆ ಜಾಗ ಬಿಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಜನರು ಸಿದ್ದಾಪುರ, ನೆಲ್ಯಹುದಿಕೇರಿಯನ್ನು ಅವಲಂಬಿಸಿದ್ದಾರೆ. ಆದರೆ ಈ ರಸ್ತೆಯಲ್ಲಿ ವನ್ಯಜೀವಿಗಳ ಉಪಟಳವೂ ಇದ್ದು, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ರಾತ್ರಿಯ ಹೊತ್ತು ಭಯದಲ್ಲೇ ಸಂಚರಿಸಬೇಕಾಗಿದೆ. ಅನಾಹುತ ಸಂಭವಿಸುವ ಮುನ್ನ ಕೂಡಲೇ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

” ಗ್ರಾಮೀಣ ರಸ್ತೆ ಸಂಪೂರ್ಣವಾಗಿ ಹಳ್ಳಕೊಳ್ಳದಿಂದ ಕೂಡಿದ್ದು, ಈ ರಸ್ತೆಯಲ್ಲಿ ಬಸ್ ಸಂಚಾರ ಕೂಡ ಇಲ್ಲ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಬಾಡಿಗೆ ವಾಹನವನ್ನೇ ಅವಲಂಬಿಸಿದ್ದೇವೆ. ರಸ್ತೆ ಅವ್ಯವಸ್ಥೆಯಿಂದ ಬಾಡಿಗೆ ವಾಹನ ಚಾಲಕರು ಗ್ರಾಮದತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಗತ್ಯ ಸಂದರ್ಭದಲ್ಲಿ ದುಬಾರಿ ಬಾಡಿಗೆ ನೀಡಿ ತೆರಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.”

-ಅನೀಶ್, ಕೂಡುಗದ್ದೆ ನಿವಾಸಿ

” ಹಲವು ವರ್ಷಗಳಿಂದಲೂ ರಸ್ತೆ ಅಭಿವೃದ್ಧಿ ಕಾಣದೆ ಇರುವುದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಂತು ಕೆರೆಗಳಂತಾಗಿದೆ. ಇದರಿಂದ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಶೀಘ್ರವಾಗಿ ರಸ್ತೆ ದುರಸ್ತಿ ಕಾರ್ಯ ನಡೆಸಬೇಕು.”

-ಸಿ.ಯು.ಮುಸ್ತಫ, ಸ್ಥಳೀಯ ನಿವಾಸಿ

” ಪಂಚಾಯಿತಿ ಆಡಳಿತ ಮಂಡಳಿಗೆ ರಸ್ತೆ ಅಭಿವೃದ್ಧಿಪಡಿಸಲು ಮನವಿ ಮಾಡಿದರೆ ಮಳೆಗಾಲ ಕಾರಣ ನೀಡಿ ನಿರ್ಲಕ್ಷ  ವಹಿಸಲಾಗುತ್ತಿದೆ. ಹದಗೆಟ್ಟ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಆದ್ದರಿಂದ ರಸ್ತೆ ದುರಸ್ತಿಗೆ ಮುದಾಗಬೇಕು, ತಪ್ಪಿದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು.”

-ರೂಪೇಶ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ

” ರಸ್ತೆ ಹದಗೆಟ್ಟಿರುವ ವಿಚಾರ ಗಮನಕ್ಕೆ ಬಂದಿದೆ. ಸಾರ್ವಜನಿಕರಿಂದ ಕೂಡ ರಸ್ತೆ ಕಾಮಗಾರಿಗೆ ಮಾಡಿಸುವಂತೆ ಮನವಿ ಬಂದಿದೆ. ಈ ಬಗ್ಗೆ ಚರ್ಚಿಸಲಾಗಿದ್ದು, ಈಗಾಗಲೇ ಕ್ರಿಯಾಯೊಜನೆ ರೂಪಿಸಲಾಗಿದೆ. ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವುದು.”

-ಪ್ರೇಮಗೋಪಾಲ್, ಗ್ರಾ.ಪಂ. ಅಧ್ಯಕ್ಷರು, ಸಿದ್ದಾಪುರ 

Tags:
error: Content is protected !!