ಮಂಜು ಕೋಟೆ
ಕೋಟೆ ಪಟ್ಟಣ ವ್ಯಾಪ್ತಿಯ ಅನೇಕ ಬಡಾವಣೆಗಳ ನಿವಾಸಿಗಳಿಗೆ ನಿತ್ಯ ನರಕಯಾತನೆ
ಎಚ್.ಡಿ.ಕೋಟೆ: ಕೆಲವು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಪಟ್ಟಣ ವ್ಯಾಪ್ತಿಯ ಹದಗೆಟ್ಟ ರಸ್ತೆಗಳಲ್ಲಿ ನೀರು ನಿಂತು ಕೆಸರುಮಯವಾಗಿ ನಿವಾಸಿಗಳು ಓಡಾಡಲು ಸಾಧ್ಯವಾಗದೆ ಅಽಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳಿಲ್ಲ ಎಂಬುದಕ್ಕೆ ವಾರ್ಡ್ ಗಳಲ್ಲಿರುವ ರಸ್ತೆ ಮತ್ತು ಚರಂಡಿಗಳೇ ಸಾಕ್ಷಿಯಾಗಿವೆ. ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳ ಅವ್ಯವಸ್ಥೆ ಗೋಚರವಾಗುತ್ತಿದೆ. ಅದರಲ್ಲೂ ಪಟ್ಟಣದ ಸ್ಟೇಡಿಯಂ ಬಡಾವಣೆ, ಜೋಣಿಗೇರಿ ಬೀದಿ ರಸ್ತೆ, ಬೆಳಗನಹಳ್ಳಿ ರಸ್ತೆ ಬಡಾವಣೆ, ಮುಸ್ಲಿಂ ಬ್ಲಾಕ್, ಹನುಮಂತನಗರ, ವಿಶ್ವನಾಥ ಕಾಲೋನಿ, ರಂಗ ಅಯ್ಯಂಗಾರ್ ಬಡಾವಣೆಯಲ್ಲಿನ ಹದಗೆಟ್ಟ ರಸ್ತೆಗಳಲ್ಲಿ ನೀರು ನಿಂತು ಕೆಸರಿನಿಂದ ಕೂಡಿ ಸಾರ್ವಜನಿಕರು ಸಂಚಾರದ ವೇಳೆ ನರಕಯಾತನೆ ಅನುಭವಿಸುವಂತಾಗಿದೆ. ಮಕ್ಕಳು, ವೃದ್ಧರು, ದ್ವಿಚಕ್ರ ವಾಹನ ಸವಾರರು ಸಂಚರಿಸಲು ಸಾಧ್ಯವಾಗದಂತಾಗಿದೆ.
ಧೈರ್ಯ ಮಾಡಿ ಓಡಾಡಲು ಹೋದರೆ ಕಾಲು ಜಾರಿ ಬಿದ್ದು ಕೈ ಕಾಲು ಮುರಿದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಆದರೆ, ಈ ಕುರಿತು ಮುಂಜಾಗ್ರತೆಯಾಗಿ ಕ್ರಮ ಕೈಗೊಳ್ಳಬೇಕಾಗಿದ್ದ ಪುರಸಭೆಯ ಕೆಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಜನಸಾಮಾನ್ಯರ ಗೋಳನ್ನು ಕೇಳುವವರು ಇಲ್ಲದಂತಾಗಿದೆ.
ಕೆಲ ಜನಪ್ರತಿನಿಧಿಗಳು ಅನೇಕ ವರ್ಷಗಳಿಂದ ತಮ್ಮ ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಲೇ ಇಲ್ಲ ಎಂಬ ಆರೋಪವೂ ಇದೆ. ಪಟ್ಟಣದ ನಿವಾಸಿಗಳು ನೆಮ್ಮದಿಯಿಂದ ಜೀವನ ನಡೆಸಲು ಈಗಲಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
” ಈ ಬಾರಿ ಹೆಚ್ಚು ಮಳೆ ಆಗಿರುವುದರಿಂದ ಅನೇಕ ರಸ್ತೆಗಳು ಹದಗೆಟ್ಟು ಸಮಸ್ಯೆ ಎದುರಾಗಿದೆ. ಕೆಲವೊಂದು ರಸ್ತೆಗಳನ್ನು ಅಭಿವೃದ್ಧಿಪಡಿಸಲು ೧ ಕೋಟಿ ರೂ. ಟೆಂಡರ್ ಕರೆಯಲಾಗಿದ್ದು ಉಳಿಕೆ ರಸ್ತೆಗಳನ್ನು ಗ್ರಾವಲ್ ಹಾಗೂ ಜಲ್ಲಿಗಳ ಮೂಲಕ ಮುಚ್ಚುವ ಕೆಲಸ ಮಾಡಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹೋಗುವಂತೆ ಕ್ರಮ ಕೈಗೊಳ್ಳಲಾಗುವುದು”
-ಸುರೇಶ್, ಮುಖ್ಯಾಧಿಕಾರಿ, ಪುರಸಭೆ
” ನಮ್ಮ ವಾರ್ಡಿನಲ್ಲಿ ರಸ್ತೆ, ಚರಂಡಿಗಳು ಇಲ್ಲದೆ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತು, ರಸ್ತೆಗಳಲ್ಲಿ ಕೆಸರು ತುಂಬಿಕೊಂಡು ಓಡಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮನ್ನು ಮನುಷ್ಯರು ಎಂದುಕೊಂಡಿಲ್ಲ. ಈಗಲಾದರೂ ಅಗತ್ಯ ಸೌಕರ್ಯ ಕಲ್ಪಿಸಬೇಕು.”
-ಸುಕುಮಾರ, ಸ್ಟೇಡಿಯಂ ಬಡಾವಣೆ ನಿವಾಸಿ





