ಮಂಜು ಕೋಟೆ
ದಿನನಿತ್ಯ ನರಕಯಾತನೆಪಡುತ್ತಿರುವ ವಿದ್ಯಾರ್ಥಿಗಳು, ಸಾರ್ವಜನಿಕರು; ರಸ್ತೆ ದುರಸ್ತಿಗೆ ಆಗ್ರಹ
ಎಚ್.ಡಿ.ಕೋಟೆ: ತೀವ್ರ ಹದಗೆಟ್ಟು ಕೆಸರು ಗದ್ದೆಯಂತಾಗಿರುವ ಕಬಿನಿ ರಸ್ತೆಯಲ್ಲಿ ರೈತರು, ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಓಡಾಡಲು ಹರಸಾಹಸಪಡುವಂತಾಗಿದೆ.
ತಾಲ್ಲೂಕಿನ ಕಬಿನಿ ಜಲಾಶಯದ ಸಮೀಪದ ಬೀಚನಹಳ್ಳಿ ಸರ್ಕಾರಿ ಜೂನಿಯರ್ ಕಾಲೇಜಿನ ನೇರಳೆಹುಂಡಿ ಮುಖ್ಯರಸ್ತೆಯ ಸ್ಥಿತಿ ಇದಾಗಿದೆ. ಕಬಿನಿ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಈ ಮುಖ್ಯ ರಸ್ತೆಯಲ್ಲಿ ಸರ್ಕಾರಿ ಜೂನಿಯರ್ ಕಾಲೇಜು ಇದ್ದು, ವಿದ್ಯಾಭ್ಯಾಸ ಮಾಡಲು ಪ್ರತಿನಿತ್ಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ಕಾಲೇಜಿಗೆ ತೆರಳಬೇಕಿದೆ.
ಕೆಸರುಮಯವಾಗಿರುವ ರಸ್ತೆಯಲ್ಲೇ ಅನಿವಾರ್ಯವಾಗಿ ಓಡಾಡಬೇಕಾದ ಸ್ಥಿತಿ ಎದುರಾಗಿದೆ. ನೇರಳೆಹುಂಡಿ ಗ್ರಾಮಸ್ಥರು, ರೈತರು ಈ ರಸ್ತೆಯ ಮಾರ್ಗವಾಗಿಯೇ ತಮ್ಮ ಜಮೀನಿನ ಕೆಲಸ ಕಾರ್ಯಗಳಿಗೆ ತೆರಳಬೇಕಿದೆ. ಆದ್ದರಿಂದ ಈ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ರಸ್ತೆ ಅಧ್ವಾನಗೊಂಡಿರುವ ಬಗ್ಗೆ ಕಬಿನಿ ನೀರಾವರಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ತಿಳಿದಿದ್ದರೂ ಸಂಬಂಽಸಿದವರು ಕಂಡೂ ಕಾಣದಂತೆ ಇದ್ದಾರೆ. ವಿದ್ಯಾರ್ಥಿಗಳು, ರೈತರು, ವಾಹನ ಸವಾರರು ರಸ್ತೆಯಲ್ಲಿ ಓಡಾಡಲು ನರಕಯಾತನೆ ಪಡುತ್ತಿರುವ ಬಗ್ಗೆ ಗಮನಹರಿಸದೆ ಇರುವುದು ಅಧಿಕಾರಿ ವರ್ಗದ ಬೇಜವಾಬ್ಧಾರಿಯನ್ನು ತೋರಿಸುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
” ಮಳೆಗಾಲ ಪ್ರಾರಂಭವಾದರೆ ಈ ರಸ್ತೆಯಲ್ಲಿ ಓಡಾಡಲೂ ಸಾಧ್ಯವಾಗುತ್ತಿಲ್ಲ. ಕಾಲೇಜಿಗೆ ಹೋಗಬೇಕಾದರೆ ವಿದ್ಯಾರ್ಥಿಗಳು ಪಡುತ್ತಿರುವ ನರಕಯಾತನೆ ನಮಗಷ್ಟೇ ಗೊತ್ತು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.”
-ಸುಮತಿ, ಕಾಲೇಜು ವಿದ್ಯಾರ್ಥಿನಿ
” ಕಳೆದ ಬಾರಿ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಶಾಸಕರು, ಕಾಲೇಜು ಅಭಿವೃದ್ಧಿ ಸಮಿತಿಯವರು, ವಿದ್ಯಾರ್ಥಿಗಳು ರಸ್ತೆ ದುರಸ್ತಿಗೆ ಮನವಿ ಮಾಡಿದ್ದೆವು. ಈ ಬಗ್ಗೆ ಕ್ರಮ ಕೈಗೊಂಡಿದ್ದು, ಸಿಎಂ ಮತ್ತು ಶಾಸಕರು ಅನುದಾನ ಬಿಡುಗಡೆ ಮಾಡಿ ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.”
-ಭಾಸ್ಕರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು
” ನೇರಳೆಹುಂಡಿಯಲ್ಲಿರುವ ಕಾಲೇಜು ಎದುರಿನ ರಸ್ತೆ ಮತ್ತು ಪ್ರೌಢಶಾಲೆ ಎದುರಿನ ರಸ್ತೆಯನ್ನು ಅಭಿವೃದ್ಧಿಪಡಿಸಲು ಶಾಸಕರು ಮತ್ತು ಮುಖ್ಯಮಂತ್ರಿಗಳು ಎರಡು ಕೋಟಿ ರೂ.ಗಳ ಅನುದಾನವನ್ನು ನೀಡಿದ್ದು, ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ. ಶೀಘ್ರದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುವುದು. ಶಾಲಾ-ಕಾಲೇಜುವರೆಗೆ ಸಿಮೆಂಟ್ ರಸ್ತೆ, ಮುಂದುವರಿದು ಡಾಂಬರೀಕರಣ ನಡೆಯಲಿದೆ.”
-ಗಣೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಕಬಿನಿ ಜಲಾಶಯ





