Mysore
29
haze

Social Media

ಗುರುವಾರ, 26 ಫೆಬ್ರವರಿ 2026
Light
Dark

‘ದುರಸ್ತಿ ನೆಪದಲ್ಲಿ ರಸ್ತೆ ಅಗೆದು ಸಂಚಾರಕ್ಕೆ ಅಡಚಣೆ’

ಎಸ್.ಪ್ರಶಾಂತ್

ಗಂಗೋತ್ರಿ ಬಡಾವಣೆ ರಸ್ತೆಗೆ ಬೇಕಿದೆ ಕಾಯಕಲ್ಪ

ದೂಳುಮಯವಾದ ರಸ್ತೆ, ಅಪಾಯಕ್ಕೆ ಎಡೆಮಾಡುತ್ತಿರುವ ಗುಂಡಿಗಳು

ಮೈಸೂರು: ಕಳೆದ ಕೆಲ ತಿಂಗಳಿನಿಂದ ನಗರದ ಗಂಗೋತ್ರಿ ಬಡಾವಣೆ ಹಾಗೂ ಮಾರುತಿ ಟೆಂಪಲ್ ರಸ್ತೆಯಲ್ಲಿ ದೂಳಿನ ‘ಲೋಕ’ವೇ ಸೃಷ್ಟಿಯಾಗಿದೆ. ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದಂತೆಯೇ ದೂಳು ಮೇಲೇಳುತ್ತದೆ. ಇದರಿಂದಾಗಿ ವಾಹನ ಸವಾರರಷ್ಟೇ ಅಲ್ಲ,ರಸ್ತೆಯ ಅಕ್ಕಪಕ್ಕದ ನಿವಾಸಿಗಳೂ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ದೂಳುಮಯವಾದ ರಸ್ತೆ: ನಗರದ ವಿವಿಧ ಬಡಾವಣೆಗಳಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಹಾಗೂ ರಸ್ತೆ ಬದಿಯ ಕಾಮಗಾರಿಗಳ  ಉದ್ದೇಶಕ್ಕೆ ರಸ್ತೆಗಳನ್ನು ಅಗೆಯಲಾಗಿದೆ. ಈ ಮೊದಲೇ ರಸ್ತೆಗಳಲ್ಲಿದ್ದ ತಗ್ಗುಗಳು ಮತ್ತು ಕಾಮಗಾರಿಗಳಿಗೆ ಕೈಗೊಂಡಿರುವ ಅಗೆತದಿಂದ ಎಲ್ಲೆಡೆ ಭಾರೀ ಪ್ರಮಾಣದ ಮಣ್ಣು ಸಂಗ್ರಹ ಗೊಳ್ಳುತ್ತಿದೆ.

ಸಂಚಾರಕ್ಕೆ ಅಡ್ಡಿಯಾದ ರಸ್ತೆ : ಹದಗೆಟ್ಟಿರುವ ರಸ್ತೆಯ ಸ್ಥಿತಿ ನೋಡಿದರೆ ರಸ್ತೆಗಳಲ್ಲಿ ಹೊಂಡಗಳು ಇವೆಯೋ, ಹೊಂಡಗಳಲ್ಲಿ ರಸ್ತೆ ಇದೆಯೋ ಎಂಬ ಅನುಮಾನ ಕಾಡದಿರದು. ರಸ್ತೆಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಂದ ವಾಹನ ಸವಾರರು ಪ್ರಯಾಸದಿಂದ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇಲ್ಲಿ ಸಂಚರಿಸುವ ಸವಾರರು ನರಕಯಾತನೆ  ಅನುಭವಿಸುವಂತಾಗಿದೆ.

ಭಯದಲ್ಲೇ ಸಂಚಾರ: ಕೆಲಸ ಮುಗಿಸಿಕೊಂಡು  ರಾತ್ರಿ ತಮ್ಮ ಮನೆಗಳಿಗೆ ತೆರಳುವ ಸುತ್ತಮುತ್ತಲ ಬಡಾವಣೆಗಳ ನಿವಾಸಿಗಳ ಪಾಡಂತೂ ಹೇಳತೀರದಾಗಿದೆ. ವಾಹನಗಳನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಖಚಿತ. ಜೀವ ಕೈಯಲ್ಲಿ ಹಿಡಿದು ಗುಂಡಿಗಳನ್ನು ತಪ್ಪಿಸಿಕೊಂಡು ಹೋಗಲು ಸರ್ಕಸ್ ಮಾಡಬೇಕಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ರಸ್ತೆಯನ್ನು ದುರಸ್ತಿಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಗುಂಡಿಮಯ ರಸ್ತೆಗೆ ಕಾರಣ : ಕಳಪೆ ಕಾಮಗಾರಿ, ಮಳೆ ನೀರು, ಚರಂಡಿಗಳ ಹೂಳು ತೆಗೆಯದ ಕಾರಣ ರಸ್ತೆಗಳಲ್ಲೇ ನೀರು ನಿಲ್ಲುತ್ತದೆ. ರಸ್ತೆಯಲ್ಲಿ ಹಾಕಲ್ಪಟ್ಟ ಡಾಂಬರು, ಜಲ್ಲಿ ಕಿತ್ತುಬಂದು ಗುಂಡಿ ನಿರ್ಮಾಣಗೊಳ್ಳುವ ಮೊದಲೇ ದುರಸ್ತಿಗೆ ಮುಂದಾಗದಿರುವುದು, ಅಪಘಾತಗಳಿಗೆ ಎಡೆಮಾಡಿಕೊಡುವ ಗುಂಡಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಮುಚ್ಚದಿರುವುದು ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾಗಿದೆ.

” ಗುಂಡಿ ಬಿದ್ದ ರಸ್ತೆಯನ್ನು ಸರಿಪಡಿಸುವ ಕಾರಣದಿಂದ ಇದ್ದ ಹಳೆಯ ರಸ್ತೆಯನ್ನು ಅಗೆದು ಕಿತ್ತು ಹಾಕಲಾಗಿದೆ. ಈಗ ರಸ್ತೆಯನ್ನು ಅಭಿವೃದ್ಧಿ ಪಡಿಸದೇ ಹಾಗೆಯೇ ಬಿಡಲಾಗಿದೆ. ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ವಾಹನ ಸಂಚಾರದಿಂದ ಇಡೀ ರಸ್ತೆ ಧೂಳುಮಯವಾಗಿದೆ.”

– ಪ್ರಕಾಶ್(ಪಕ್ಕಿ),ಆಟೋ ಚಾಲಕ

” ಅವ್ಯವಸ್ಥೆಯಿಂದಾಗಿ ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಸುತ್ತಮುತ್ತಲಿನ ಮನೆಗಳು ಮತ್ತು ಅಂಗಡಿಗಳು, ವಾಹನ ಗಳ ಸಂಚಾರದಿಂದ ದೂಳುಮಯವಾಗುತ್ತಿವೆ. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ.”

– ರಮೇಶ್ ತಾಯೂರು, ಸ್ಥಳೀಯ ನಿವಾಸಿ

 

 

 

Tags:
error: Content is protected !!