ಮಲ್ಕುಂಡಿ ಚನ್ನಪ್ಪ
ಮಲ್ಕುಂಡಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡ ದುರಸ್ತಿಗೆ ಪೋಷಕರು, ಗ್ರಾಮಸ್ಥರ ಆಗ್ರಹ
ಮಲ್ಕುಂಡಿ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿಗಳು ಶಿಥಿಲಗೊಂಡು, ಬೀಳುವ ಹಂತಕ್ಕೆ ತಲುಪಿದ್ದು, ಮಕ್ಕಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೨೦ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳೇ ಇದ್ದಾರೆ. ಶಾಲೆಯ ೪ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮಳೆ ಬಂದಾಗ ಸೋರುವ ಕೊಠಡಿಗಳಲ್ಲಿಯೇ ಕುಳಿತು ಪಾಠ ಕೇಳುವ ಪರಿಸ್ಥಿತಿ ಉಂಟಾಗಿದೆ.
ಶಾಲೆಯ ಕೊಠಡಿಗಳು ಮಳೆ ಬಂದರೆ ಬಹಳ ಸೋರುತ್ತಿವೆ. ಆದರೆ, ಅಽಕಾರಿಗಳು ಇತ್ತ ಗಮನ ಹರಿಸಿಲ್ಲ. ಇದರಿಂದ ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಪಾಠ ಕೇಳಬೇಕಿದೆ ಎನ್ನುವುದು ಪೋಷಕರ ಆರೋಪ.
ಸುಮಾರು ೩೦ ವರ್ಷಗಳ ಹಿಂದೆ ಈ ಕಟ್ಟಡ ನಿರ್ಮಾಣವಾಗಿದ್ದು, ಬಹಳ ಸೋರುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ಗಮನಹರಿಸಿ ಶಾಲೆಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ.
ಒಂದು ವರ್ಷದಿಂದ ಶಾಲೆ ಕೊಠಡಿಗಳು ಸೋರುತ್ತಿವೆ. ಸರ್ಕಾರ ಗ್ಯಾರಂಟಿಯೋಜನೆಗಳ ಜಾರಿ ಜೊತೆಗೆ ಶಾಲೆ ಕೊಠಡಿಗಳ ಅಭಿವೃದ್ಧಿಗೂ ಮುಂದಾಗಬೇಕಿದೆ ಎಂದು ತಾಪಂ ಮಾಜಿ ಸದಸ್ಯ ಎಸ್.ಬಸವರಾಜ್ ಹೇಳಿದರು.
” ಶಾಲೆಯ ಮುಖ್ಯ ಶಿಕ್ಷಕರು ಮನವಿ ಸಲ್ಲಿಸಿದರೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸರ್ಕಾರದ ಗಮನಕ್ಕೆ ತಂದು ಕೊಠಡಿ ದುರಸ್ತಿಗೊಳಿಸಲಾಗುವುದು.”
-ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ





