ಕೆ.ಎಸ್. ಚಂದ್ರಶೇಖರ್ ಮೂರ್ತಿ
ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ
ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಽ, ನಾಥೂರಾಮ್ ಗೋಡ್ಸೆ ಹೊಡೆದ ಗುಂಡಿನಿಂದ ಪ್ರಾಣಬಿಟ್ಟರು. ಆ ದಿನವನ್ನು ದೇಶದಲ್ಲಿ ‘ಸರ್ವೋದಯ’ ದಿನವಾಗಿ ಆಚರಿಸಲಾಗುತ್ತಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಗ್ರಾಮ ಸ್ವರಾಜ್ ಮತ್ತು ಮಹಿಳಾ ಸಬಲೀಕರಣದ ಆಶಯದೊಂದಿಗೆ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರ ಸ್ಥಾಪನೆಯಾಯಿತು. ಶತಮಾನದ ಈ ಕೇಂದ್ರ ಈಗ ಅವಸಾನದ ಅಂಚಿಗೆ ತಲುಪಿದೆ.
ಶತಮಾನದಿಂದ ಅದೆಷ್ಟೋ ಶ್ರಮಿಕ ಜನರ ಜೀವಾಳವಾಗಿದ್ದ ಈ ಕೇಂದ್ರದ ಕಟ್ಟಡ, ಪ್ರಸ್ತುತ ಯಾವ ಕ್ಷಣದಲ್ಲಿ ಬೇಕಾದರೂ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಚಾವಣಿಯ ನಾಡ ಹೆಂಚುಗಳು ಜಾರಿ ಬೀಳುತ್ತಿದ್ದು, ಬಿಸಿಲು ಗಾಳಿ-ಮಳೆಗೆ ನಲುಗಿದ ಕಟ್ಟಡದ ಸುತ್ತಲೂ ಕುರುಚಲು ಗಿಡಗಳು ಬೆಳೆದು ನಿಂತಿವೆ. ಕಿಟಕಿಗಳು ಮುರಿದು ಹೋಗಿ, ಬಾಗಿಲು ತುಕ್ಕು ಹಿಡಿದಿದ್ದರೆ, ಕಾರ್ಖಾನೆ ಕಟ್ಟಡದ ಒಳಗೆ ದೂಳು -ದುಂಬು ತುಂಬಿಕೊಂಡು ಅನಾಥವಾಗಿದ್ದು, ಚಲನೆಯಿಲ್ಲದ ನೇಯ್ಗೆಯ ಚರಕಗಳು ಅಸಹಾಯಕರಂತೆ ನಿಂತಿವೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಬ್ರಿಟಿಷರಿಗೆ ಖಾದಿ ಬಟ್ಟೆ ಪೂರೈಕೆ ಮಾಡುತ್ತಿದ್ದ ಈ ಕೇಂದ್ರದ ಸ್ಥಿತಿ ಇಂದು ಅತ್ಯಂತ ಶೋಚನೀಯವಾಗಿದೆ. ಈ ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರವನ್ನು ಸ್ಥಾಪನೆ ಮಾಡಿದವರು ಇದೇ ಊರಿನವರೇ ಆದ ರಾಮಚಂದ್ರರಾವ್. ಅವರು ಸ್ವಾತಂತ್ರ್ಯ ಹೋರಾಟ ಗಾರರೂ, ಗಾಂಧಿವಾದಿಯೂ ಆಗಿದ್ದರು. ಅವರನ್ನು ತಗಡೂರು ರಾಮಚಂದ್ರರಾವ್ ಎಂದೇ ಗುರುತಿಸಲಾಗಿತ್ತು.
ಗಾಂಧೀಜಿಯವರ ಸ್ವದೇಶಿ ಮತ್ತು ಸ್ವಾವಲಂಬನೆಯ ಬದುಕಿನ ಸಂದೇಶ ಒಳಗೊಂಡ ಸರ್ವೋದಯ ಕರೆಗೆ ಓಗೊಟ್ಟು ೧೯೨೧ರಲ್ಲಿ ಈ ಕೇಂದ್ರವನ್ನು ರಾಮಚಂದ್ರರಾಯರು ಸ್ಥಾಪನೆ ಮಾಡುತ್ತಾರೆ. ಈ ಕೇಂದ್ರ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ನೆರವಾಗುವ ಮೂಲಕ ನೂರಾರು ಜನರ ಬದುಕಿಗೆ ಬೆಳಕಾಗಿತ್ತು.
ಈ ತಗಡೂರು ಖಾದಿ ಮತ್ತು ಗ್ರಾಮೋದ್ಯೋಗ ಕೇಂದ್ರದಲ್ಲಿ ನೂಲುಕಾರ್ತಿಯರಾಗಿ, ನೇಕಾರರಾಗಿ ಸಮೀಪದ ಕಿರುಗುಂದ, ಚಿನ್ನಂಬಳ್ಳಿ, ಅಳಗಂಚಿ ಮತ್ತಿತರ ಹಳ್ಳಿಗಳಿಂದ ದಿನ ನಿತ್ಯ ನೂರಾರು ಜನ ಕೆಲಸ ಮಾಡು ತ್ತಿದ್ದರು. ಆದರೆ ಕಾಲಾನುಕ್ರಮದಲ್ಲಿ ಜಾಗತೀಕರಣದ ಪ್ರಭಾವದಿಂದ ಕೇಂದ್ರವು ಬದಲಾವಣೆಗೆ ತೆರೆದುಕೊಳ್ಳುವ ಹಾದಿಯಲ್ಲಿ ಹಳ್ಳ ಹಿಡಿಯಿತು.
ತಗಡೂರಿನಲ್ಲಿ ಇಂದಿಗೂ ಕೂಡ ಹಲವು ನೂಲು ಕಾರ್ತಿಯರು ಕೆಲಸ ಮಾಡುತ್ತಿದ್ದಾರೆ. ಆದರೆ ನೇಕಾರರು, ತಮಗೆ ಸೂಕ್ತವಾದ ವೇತನ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಳೆದ ಮೂರು ತಿಂಗಳುಗಳಿಂದ ಕೆಲಸ ತೊರೆದಿದ್ದಾರೆ. ಇದರಿಂದ ನೂಲು ಶೇಖರಣೆಯ ಪ್ರಮಾಣ ಹೆಚ್ಚಾಗಿದೆ. ಆದರೆ, ನೇಕಾರರಿಲ್ಲದೆ ನೂಲು ಮೂಟೆಯಲ್ಲೇ ಉಳಿ ದಿದೆ. ಇದರಿಂದ ವ್ಯವಹಾರಕ್ಕೆ ಹೊಡೆತ ಬಿದ್ದಿದ್ದು, ಇಲ್ಲಿನ ಕಾರ್ಮಿಕರಿಗೆ ಸಂಬಳ ಕೊಡುವುದೂ ದುಸ್ತರವಾಗಿದೆ ಎಂಬುದಾಗಿ ಕೆಲ ಕಾರ್ಮಿಕರ ಅಲವತ್ತುಕೊಳ್ಳುತ್ತಾರೆ.
೧೯೩೩ರಲ್ಲಿ ಗಾಂಧೀಜಿ ಅವರು ಅಸ್ಪೃಶ್ಯತಾ ನಿವಾರಣೆ ಯಾತ್ರೆ ಕೈಗೊಂಡರು. ಈ ಸಂದರ್ಭದಲ್ಲಿ ಮೈಸೂರು ಸಂಸ್ಥಾನಕ್ಕೆ ೧೯೩೪, ಜನವರಿ ೪ ರಂದು ಗಾಂಧೀಜಿ ಅವರು ಬರುತ್ತಿದ್ದಾರೆ ಎಂಬ ಸುದ್ದಿ ತಿಳಿದ ರಾಮಚಂದ್ರರಾವ್ ಅವರು, ಪತ್ರ ಬರೆದು ತಗಡೂರಿಗೆ ಬರುವಂತೆ ಮನವಿ ಮಾಡಿದರು. ಇದರ ನಡುವೆ ಗಾಂಧೀಜಿ ಅವರು ತಗಡೂರಿಗೆ ಬರುವುದನ್ನು ತಪ್ಪಿಸಲು ಕೆಲ ಕಾಣದ ಕೈಗಳು ಪ್ರಯತ್ನ ಮಾಡಿದವು.
ಆದರೆ, ರಾಮಚಂದ್ರರಾವ್ ಅವರು ಪಟ್ಟುಹಿಡಿದು ಗಾಂಧೀಜಿ ಅವರನ್ನು ತಗಡೂರಿಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಗಾಂಧೀಜಿ ಅವರು ಈ ಭಾಗದಲ್ಲಿ ಖಾದಿ ಗ್ರಾಮೋದ್ಯೋಗ ಸ್ಥಾಪನೆಯ ಆಶಯ ವ್ಯಕ್ತಪಡಿಸಿದ್ದರು. ಅದನ್ನು ರಾಮಚಂದ್ರರಾವ್ ತಮ್ಮಂತೆಯೇ ಗಾಂಧಿವಾದಿಗಳಾಗಿದ್ದ ಕೆಲವರೊಡನೆ ಸೇರಿ ಈ ಬದನವಾಳು ಕೇಂದ್ರವನ್ನು ಸ್ಥಾಪಿಸಿದ್ದರು. ಆದರೆ, ಈಗ ಅದು ಅವಸಾನದತ್ತ ಸಾಗಿದೆ.
ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದರೆ, ಶತಮಾನದ ಖಾದಿ ಕೇಂದ್ರವು ಮತ್ತೆ ಜೀವಕಳೆ ಪಡೆಯಬಹುದು. ಆ ಮೂಲಕ ಹಲವು ಕುಟುಂಬಗಳ ಮನೆಯ ದೀಪ ಬೆಳಗಬಹುದು.
೨೦೧೫ರಲ್ಲಿ ನಡೆದ ಬದನವಾಳು ಸತ್ಯಾಗ್ರಹದ ಮುಂದಾಳತ್ವ ವಹಿಸಿದ್ದ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ… ಸರ್ಕಾರ ಏನು ಕ್ರಮ ಕೈಗೊಂಡಿಲ್ಲವೇ ಅಂದರೆ ದಶಕದ ಹಿಂದೆ ಅಂದರೆ ೨೦೧೫ರಲ್ಲಿ ನಡೆದ ಬದನವಾಳು ಸತ್ಯಾಗ್ರಹದ ಫಲ ಎಂಬಂತೆ ಸರ್ಕಾರ ಆಶ್ರಮ ಮಾಡುವು ದಕ್ಕಾಗಿ ಮೂರೂವರೆ ಕೋಟಿ ರೂ. ಅನುದಾನ ನೀಡಿ ಬದನವಾಳುವಿನಲ್ಲಿ ಗಾಂಧೀಜಿ ಅವರ ಸಾಬರಮತಿ ಆಶ್ರಮದ ಮಾದರಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಈ ಕಟ್ಟಡ ನಿಷ್ಪ್ರಯೋಜಕವಾಗಿದೆ. ಈಗ ರಾಜ್ಯ ಸರ್ಕಾರ ೪೦ ಕೋಟಿ ರೂ. ವೆಚ್ಚದಲ್ಲಿ ಬದನವಾಳು ಕೇಂದ್ರವನ್ನು ಅಭಿವೃದ್ಧಿ ಮಾಡುವ ಯೋಜನೆ ರೂಪಿಸಿದೆ. ಈ ೪೦ ಕೋಟಿ ರೂ. ಅನುದಾನದಲ್ಲಿ ಬದನವಾಳು ಕೇಂದ್ರ ಮಾತ್ರ ಅಲ್ಲದೆ ತಗಡೂರು ಮತ್ತು ಕಿರುಗುಂದ ಸೇರಿದಂತೆ ಈ ಆಸುಪಾಸಿನಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರಗಳನ್ನೂ ಸಮಗ್ರವಾಗಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಬೇಕು. ಈ ಬಗ್ಗೆ ನಾವು ಖಾದಿ ಮತ್ತು ಗ್ರಾಮೀಣ ಕೈಗಾರಿಕೆ ಇಲಾಖೆಗೆ ‘ಬದನವಾಳು ಖಾದಿ ಸೆಂಟರ್’ ಎಂಬ ವರದಿಯನ್ನು ನೀಡಿದ್ದೇವೆ
” ಬದನವಾಳು ಸತ್ಯಾಗ್ರಹ ಮತ್ತೆ ಆರಂಭವಾಗಿದೆ. ಬದನವಾಳು ಹೋರಾಟದ ಮೂಲಕ ಪ್ರತಿಯೊಂದು ಜಿಲ್ಲೆಯೂ ಗ್ರಾಮೋದ್ಯೋಗ, ಗ್ರಾಮ ಕೈಗಾರಿಕೆಗಳನ್ನು ತನ್ನದೇ ಬ್ರಾಂಡ್ ಆಗಿ ಪರಿಗಣಿಸಿ, ಅದನ್ನು ಸಲಹುವ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಆಯಾ ಜಿಲ್ಲೆಯ ನಾಗರಿಕರಿಗೆ ನಾವು ಕರೆ ಕೊಡುತ್ತೇವೆ. ಈ ಖಾದಿ ಕೇಂದ್ರಗಳಲ್ಲಿ ಜನರು ಒಂದು ಟವೆಲ್, ಒಂದು ಶಾಲು ಕೊಂಡರೂ ಸಾಕು ಎನ್ನುತ್ತಾರೆ ರಂಗಕರ್ಮಿ ಪ್ರಸನ್ನ ಹೆಗ್ಗೋಡು”
ರಾಮಚಂದ್ರ ರಾವ್ ವಾಸವಿದ್ದ ಮನೆಗೂ ದುರ್ಗತಿ: ಗಾಂಧಿವಾದಿ ತಗಡೂರು ರಾಮಚಂದ್ರರಾವ್ ಅವರು ೧೯೨೫ರಲ್ಲಿ ಖಾದಿ ಸಹಕಾರ ಸಂಘ ಸ್ಥಾಪನೆ ಮಾಡಿ ಸಮಾಜ ಸುಧಾರಣೆ ಮತ್ತು ಸ್ವದೇಶಿ ಚಳವಳಿಯನ್ನು ಬಲ ಪಡಿಸುವ ಜೊತೆಗೆ ಮೈಸೂರು ಸಂಸ್ಥಾನದ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೧೯೨೮ರಲ್ಲಿ ಮೈಸೂರು ರಾಜ್ಯದ ವಿರುದ್ಧ ಭಾಷಣ ಮಾಡಿದ್ದಕ್ಕಾಗಿ ಮತ್ತು ಸೈಮನ್ ಆಯೋಗದ ಭೇಟಿಯನ್ನು ವಿರೋಧ ಮಾಡಿದ್ದಕ್ಕಾಗಿ ಅವರು ಬಂಧನಕ್ಕೊಳಗಾಗಿದ್ದರು. ಹೀಗೆ ಸಾಕಷ್ಟು ಹೋರಾಟ ಮಾಡಿದ್ದ ರಾಮಚಂದ್ರ ರಾವ್ ಅವರು ತಾವು ಸ್ಥಾಪಿಸಿದ ಖಾದಿ ಗ್ರಾಮೋದ್ಯೋಗ ಕೇಂದ್ರ ಮತ್ತು ಅವರು ವಾಸಿಸುತ್ತಿದ್ದ ಮನೆಯು ದುಸ್ಥಿತಿಯ ಲ್ಲಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಮೈಸೂರಿನ ಗಾಂಧಿ ಎಂದೇ ಹೆಸರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ರಾಮಚಂದ್ರರಾವ್ ಅವರ ಹೋರಾಟಕ್ಕೆ ಅಪಚಾರ ಮಾಡಿದಂತಾಗಿದೆ.





