ಹೊಸ ರೀತಿಯ ತಂತಿಬೇಲಿ ಅಳವಡಿಕೆಯಿಂದ ಕಡಿಮೆಯಾಗುತ್ತಿರುವ ಕಾಡುಪ್ರಾಣಿಗಳ ಹಾವಳಿ
ಮಂಜು ಕೋಟೆ
ಎಚ್.ಡಿ.ಕೋಟೆ: ತಾಲ್ಲೂಕಿನ ಬಂಡಿಪುರ ಮತ್ತು ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನ ರೈತರು ಹುಲಿ ದಾಳಿಯಿಂದ ಜೀವ ರಕ್ಷಿಸಿಕೊಳ್ಳಲು ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಯನ್ನು ಉಳಿಸಿಕೊಳ್ಳಲು ಹೊಸ ರೀತಿಯ ತಂತಿ ಬೇಲಿಗೆ ಮೊರೆ ಹೋಗುತ್ತಿದ್ದಾರೆ.
ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಾಗಿರುವುದರಿಂದ ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹುಲಿ ದಾಳಿಯಿಂದ ಅನೇಕ ರೈತರು ಸಾವನ್ನಪ್ಪಿರುವುದರಿಂದ ತಮ್ಮನ್ನು, ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹೊಸ ರೀತಿಯ ತಂತಿಬೇಲಿಯತ್ತ ಆಕರ್ಷಿತರಾಗುತ್ತಿದ್ದಾರೆ.
ಇಲ್ಲಿಯವರೆಗೆ ಸೋಲಾರ್ ಹಾಗೂ ಇನ್ನಿತರ ತಂತಿ ಬೇಲಿಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಅಳವಡಿಸಲಾಗುತ್ತಿತ್ತು. ಆದರೆ ಆನೆ, ಜಿಂಕೆ, ಹಂದಿ ಇನ್ನಿತರ ಪ್ರಾಣಿಗಳು ಬುದ್ಧಿವಂತಿಕೆಯಿಂದ ಜಮೀನಿಗೆ ಲಗ್ಗೆ ಇಟ್ಟು ಬೆಳೆಗಳನ್ನು ತಿಂದು ನಾಶ ಮಾಡುವ ಜೊತೆಗೆ ರೈತರ ಮೇಲೂ ದಾಳಿ ಮಾಡುತ್ತಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಅರಣ್ಯ ಇಲಾಖೆಯವರು ಕೋಟ್ಯಂತರ ರೂ. ವೆಚ್ಚದಲ್ಲಿ ಕಾಡಂಚಿನಲ್ಲಿ ಅಳವಡಿಸಿರುವ ರೈಲ್ವೆ ಕಂಬಿ ತಡೆಗೋಡೆಗಳನ್ನೂ ದಾಟಿ ಕೆಲವೊಂದು ಪ್ರಾಣಿಗಳು ಗ್ರಾಮ ಮತ್ತು ಜಮೀನಿಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ದಮ್ಮನಕಟ್ಟೆಯ ಅರಣ್ಯ ಅಧಿಕಾರಿ ಸಿದ್ದರಾಜು ಅವರು ತಮ್ಮ ಸ್ನೇಹಿತರ ಸಹಕಾರ ದೊಂದಿಗೆ ರೈಲ್ವೆ ಕಂಬಿಗಳಿಗೆ ಗ್ಯಾಲರಿ ಮೆಶ್‌ಗಳನ್ನು ಅಳವಡಿಸುತ್ತಿದ್ದಾರೆ.
ಒಂದೆಡೆ ಅರಣ್ಯ ಅಧಿಕಾರಿಗಳು ಜಾಲರಿ ಹಾಕುವ ಕೆಲಸ ಮಾಡಿದರೆ ಮತ್ತೊಂದು ಕಡೆ ರೈತರು ಮತ್ತು ಗ್ರಾಮಸ್ಥರು ರೈಲ್ವೆ ಕಂಬಿಗೆ ಮತ್ತು ಪ್ರತ್ಯೇಕವಾಗಿ ಜಾಲರಿ ತಂತಿ ಬೇಲಿಯನ್ನು ಕೆಲವು ಭಾಗಗಳಲ್ಲಿ ಅಳವಡಿಸಿಕೊಂಡಿ ದ್ದಾರೆ. ಇಂತಹ ಸ್ಥಳದಲ್ಲಿ ವನ್ಯಪ್ರಾಣಿಗಳ ಹಾವಳಿ ಕಡಿಮೆಯಾಗಿದೆ. ಕಾಡಂಚಿನಲ್ಲಿರುವ ರೈತ ಮತ್ತು ಗುತ್ತಿಗೆದಾರರಾದ ದಾಸನಪುರದ ದೊರೆದಾಸ್ ಮುಂತಾದ ಅನೇಕ ರೈತರು ತಮ್ಮ ಜಮೀನುಗಳಿಗೆ ಜಾಲರಿ ತಂತಿ ಬೇಲಿಯನ್ನು ಅಳವಡಿಸಿ ಯಶಸ್ವಿಯಾಗಿರು ವುದರಿಂದ ಅನೇಕ ರೈತರು ಈ ಯೋಜನೆಯ ಮೂಲಕ ತಮ್ಮ ಪ್ರಾಣ ಮತ್ತು ಬೆಳೆಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳಿಗೆ ಸಹಾಯಧನ ನೀಡಲು ಮುಂದಾಗುತ್ತಿವೆ. ಅದೇ ರೀತಿ ರೈತರು ತಮ್ಮ ಜಮೀನುಗಳಲ್ಲಿ ಇತ್ತೀಚೆಗೆ ಅಳವಡಿಸಿಕೊಳ್ಳುತ್ತಿರುವ ಇಂತಹ ಜಾಲರಿ ತಂತಿಬೇಲಿ ಅಳವಡಿಕೆಗೆ ಕೂಡ ಸಹಾಯಧನ ನೀಡಿದರೆ ಮತ್ತಷ್ಟು ರೈತರು ತಮ್ಮ ಪ್ರಾಣ ಮತ್ತು ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನುಕೂಲವಾಗಲಿದೆ ಎನ್ನುವುದು ರೈತರ ಆಶಯವಾಗಿದೆ.
” ೨ ತಿಂಗಳುಗಳಿಂದ ನಮ್ಮ ಭಾಗದಲ್ಲಿ ಹುಲಿ ದಾಳಿಯಿಂದಾಗಿ ಅನೇಕ ರೈತರು ಸಾವನಪ್ಪಿದ್ದಾರೆ. ಪ್ರಾಣಿಗಳ ಹಾವಳಿಯಿಂದ ಬೆಳೆಗಳು ನಾಶವಾಗುತ್ತಿವೆ. ಜಾಲರಿ ತಂತಿ ಬೇಲಿಯನ್ನು ದೊರೆ ದಾಸ್ ಅವರು ಅಳವಡಿಸಿಕೊಟ್ಟಿರುವುದರಿಂದ ಪ್ರಾಣ ಭಯ ದೂರವಾಗಿ ಬೆಳೆ ರಕ್ಷಣೆ ಆಗುತ್ತಿದೆ.”
-ಸುಮಂತ್, ಸಂತೋಷ್, ರೈತರು
” ಎಚ್.ಡಿ.ಕೋಟೆ ತಾಲ್ಲೂಕಿನ ಬಂಡಿಪುರ ಮತ್ತು ನಾಗರಹೊಳೆ ಅರಣ್ಯ ವ್ಯಾಪ್ತಿಯ ಕಾಡಂಚಿನಲ್ಲಿ ಹುಲಿ ದಾಳಿಯಿಂದಾಗಿ ಮತ್ತು ಕಾಡು ಪ್ರಾಣಿಗಳ ಹಾವಳಿಯಿಂದಾಗಿ ಬೆಳೆಗಳು ನಾಶವಾಗಿ ರೈತರ ಪ್ರಾಣಕ್ಕೆ ಸಂಚಕಾರ ಒದಗಿ ಬರುತ್ತಿದೆ. ಹೀಗಾಗಿ ನಮ್ಮ ಜಮೀನಿಗೆ ಹೊಸ ರೀತಿಯ ಜಾಲರಿಯುಳ್ಳ ತಂತಿ ಬೇಲಿ ಅಳವಡಿ ಸುತ್ತಿದ್ದು, ಪ್ರಾಣಿಗಳ ಹಾವಳಿ ಮತ್ತು ಪ್ರಾಣ ಭಯ ಕಡಿಮೆಯಾಗಿದೆ. ಅನೇಕ ರೈತರಿಗೆ ಈ ಯೋಜನೆಯನ್ನು ಕಡಿಮೆ ದರದಲ್ಲಿ ಒದಗಿಸುತ್ತಿದ್ದೇನೆ. ಆಸಕ್ತ ರೈತರು ಮೊ.ಸಂ. ೯೯೦೦೭೨೦೮೩೮ ಸಂಪರ್ಕಿಸಬಹುದು.”
-ದೊರೆದಾಸ್, ರೈತ ಮುಖಂಡ, ಗುತ್ತಿಗೆದಾರ, ದಾಸನಪುರ





