Mysore
25
scattered clouds

Social Media

ಬುಧವಾರ, 14 ಜನವರಿ 2026
Light
Dark

ಒಂದೇ ರಾತ್ರಿ 53.4 ಮಿ.ಮೀ ದಾಖಲೆ ಮಳೆ

ಹಲವೆಡೆ ವಸತಿ ಪ್ರದೇಶಗಳು, ಜಮೀನುಗಳಿಗೆ ನೀರು ನುಗ್ಗಿ ಅಪಾರ ನಷ್ಟ 

ಮಂಡ್ಯ: ಗುರುವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಧಾರಾಕಾರ ವಾಗಿ ಮಳೆ ಸುರಿದಿದ್ದು,೫೩.೪ ಮಿ.ಮೀ. ದಾಖಲೆ ಮಳೆಯಾಗಿದ್ದು, ಹಲವೆಡೆ ವಸತಿ ಪ್ರದೇಶಗಳು ಹಾಗೂ ಜಮೀನುಗಳಿಗೆ ನೀರು ನುಗ್ಗಿದ್ದು, ಸಾಕಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ.

ವಾಡಿಕೆಗಿಂತ ಶೇ.೯೨೬.೯ರಷ್ಟು ಮಳೆಯಾಗಿದ್ದು, ಅಕ್ಟೋಬರ್ ತಿಂಗಳಲ್ಲಿ ಕೇವಲ ಒಂದೇ ದಿನದಲ್ಲಿ ಈ ಪ್ರಮಾಣದ ಮಳೆಯಾಗಿರುವುದು ದಾಖಲೆಯಾಗಿದೆ. ಶ್ರೀರಂಗಪಟ್ಟಣದಲ್ಲಿ ಸಿಡಿಎಸ್ ನಾಲೆ ಒಡೆದಿದ್ದು, ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಹಾಳಾಗಿವೆ.

ಮಂಡ್ಯ ನಗರದ ಚಿಕ್ಕಮಂಡ್ಯ ಕೆರೆಯಂಗಳದಲ್ಲಿನ ಕೆಎಚ್‌ಬಿ ಬಡಾವಣೆಯ ೨-೩ ರಸ್ತೆಗಳು ಧಾರಾಕಾರ ಮಳೆ ನೀರಿನಲ್ಲಿ ಮುಳುಗಿ ರಸ್ತೆಗಳ ಸಂಪರ್ಕ ಕಡಿತಗೊಂಡಿತ್ತು. ಮನೆಯ ಒಳಗಿದ್ದವರು ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಮಳೆ ನೀರು ಅಡ್ಡಿಯಾಗಿತ್ತು. ತಗ್ಗು ಪ್ರದೇಶದಲ್ಲಿನ ಕೆಲವು ಮನೆಗಳಿಗೂ ನೀರು ನುಗ್ಗಿತ್ತು.

ಮನೆಯ ಕಾಂಪೌಂಡ್ ಆವರಣದೊಳಗೆ ಹಾಗೂ ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳು ಮಳೆ ನೀರಿನಿಂದ ಅರ್ಧಭಾಗ ಮುಳುಗಿದ್ದವು. ಇದರಿಂದ ಹತ್ತಾರು ಕಾರುಗಳಿಗೂ ಹಾನಿಯಾಗಿದೆ. ಕೆಎಚ್‌ಬಿ ಬಡಾವಣೆ ರಸ್ತೆಗಳಲ್ಲಿ ಸುಮಾರು ಒಂದೂವರೆಯಿಂದ ೨ ಅಡಿಯಷ್ಟು ನಿಂತಿತ್ತು. ಬಡಾವಣೆಯ ೪೫ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಎಸ್‌ಎಸ್‌ಎಸ್ ಶಾಲೆ ಆವರಣಕ್ಕೂ ನೀರು ನುಗ್ಗಿತ್ತು. ಇದರಿಂದ ಶಾಲೆಗೆ ಮಕ್ಕಳು ಬರಲು ಕಷ್ಟವಾಗಿತ್ತು.

ಪ್ರತಿ ಬಾರಿ ಮಳೆಯಾದಾಗಲೆಲ್ಲಾ ಕೆರೆಯಂಗಳದ ಮೂರು ಬಡಾವಣೆಗಳು ಸಮಸ್ಯೆಗೆ ಸಿಲುಕುತ್ತವೆ. ಇತ್ತೀಚೆಗೆ ಬೀಡಿ ಕಾರ್ಮಿಕರ ಕಾಲೋನಿಯ ಹಿಂಭಾಗದಲ್ಲಿ ದೊಡ್ಡ ನಾಲೆಗೆ(ರಾಜಕಾಲುವೆ) ತಡೆಗೋಡೆ ನಿರ್ಮಿಸಿದ್ದರಿಂದ ಬೀಡಿ ಕಾರ್ಮಿಕರ ಕಾಲೋನಿಗೆ ಮಳೆ ನೀರು ನುಗ್ಗಿರಲಿಲ್ಲ. ಆದರೆ, ದೊಡ್ಡಸೇತುವೆ ಬಳಿ ತಡೆಗೋಡೆ ಕಾಮಗಾರಿಯಿಂದಾಗಿ ನಾಲೆಗೆ ಭಾರೀ ಪ್ರಮಾಣದ ಮಣ್ಣನ್ನು ಒತ್ತರಿಸಲಾಗಿತ್ತು.

ಇದರಿಂದ ನಾಲೆ ಮೇಲ್ಭಾಗದ ಹೊಳಲು, ಬಿ.ಹೊಸಹಳ್ಳಿ, ಸಂಪಹಳ್ಳಿ, ಗಾಣದಾಳು, ಕಲ್ಲಹಳ್ಳಿ ಗ್ರಾಮಗಳಿಂದ ಬಂದ ಮಳೆ ನೀರೆಲ್ಲಾ ಕೆಎಚ್‌ಬಿ ಬಡಾವಣೆಗೆ ನುಗ್ಗಿದೆ. ಇದರಿಂದ ಶುಕ್ರವಾರ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ಕೆಎಚ್‌ಬಿ ಬಡಾವಣೆಯು ಮತ್ತೆ ಕೆರೆಯಂತಾಗಿತ್ತು.

ವಾಡಿಕೆಗಿಂತ ಹೆಚ್ಚು ಮಳೆ: 

ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಶೇ.೯೨೬.೯ರಷ್ಟು ಮಳೆ ಸುರಿದಿದೆ. ಶ್ರೀರಂಗಪಟ್ಟಣದಲ್ಲಿ ಅತಿ ಹೆಚ್ಚು (೭೬.೩ಮಿ.ಮೀ.), ಮಳವಳ್ಳಿ ತಾಲ್ಲೂಕಿನಲ್ಲಿ ಅತಿ ಕಡಿಮೆ (೩೩.೪) ಮಳೆಯಾಗಿದೆ. ಉಳಿದಂತೆ ಮದ್ದೂರು ತಾಲ್ಲೂಕಿನಲ್ಲಿ ೮೨.೫ಮಿ.ಮೀ., ಮಂಡ್ಯದಲ್ಲಿ ೫೭.೮.ಮೀ.ಮೀ., ಕೆ.ಆರ್.ಪೇಟೆಯಲ್ಲಿ ೫೭.೪ಮಿ.ಮೀ., ಪಾಂಡವಪುರದಲ್ಲಿ ೭೬.೩ ಮಿ.ಮೀ., ನಾಗಮಂಗಲದಲ್ಲಿ ೩೯.೮ ಮಿ.ಮೀ. ಮಳೆ ಸುರಿದಿದೆ.

” ಜೆಸಿಬಿ ಯಂತ್ರಗಳಿಂದ ನಾಲೆಯ ಮಣ್ಣು ಹೊರಕ್ಕೆ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್) ಅವರು ಶುಕ್ರವಾರ ಮುಂಜಾನೆಯೇ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ, ಬೀಡಿ ಕಾರ್ಮಿಕರ ಕಾಲೋನಿ ಹಿಂಭಾಗದ ಸೇತುವೆ ಬಳಿ ನಾಲೆಗೆ ಅಡ್ಡಲಾಗಿದ್ದ ಹಾಕಿದ್ದ ಮಣ್ಣು ಮತ್ತು ನಾಲೆಯೊಳಗಿದ್ದ ಮಣ್ಣನ್ನು ಜೆಸಿಬಿ ಯಂತ್ರಗಳ ಮೂಲಕ ತೆಗೆದು ನಾಲೆಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ, ಆರೋಗ್ಯ ನಿರೀಕ್ಷಕರು, ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಭಾಗವಹಿಸಿದ್ದರು.”

Tags:
error: Content is protected !!