೨೧ ದಿನಗಳಲ್ಲಿ ೩೦ ಲಕ್ಷಕ್ಕೂ ಮೀರಿ ವೆಬ್‌ಸೈಟ್ ವೀಕ್ಷಣೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ೧೫ ಲಕ್ಷ ಹೆಚ್ಚು
ಜಂಬೂಸವಾರಿ ಮುಗಿಯುವ ಹೊತ್ತಿಗೆ
ಅರ್ಧಕೋಟಿ ದಾಟುವ ನಿರೀಕ್ಷೆ
ದಸರಾ ವೆಬ್‌ಸೈಟ್ https://mysoredasara.gov.in
ಮೈಸೂರು: ದಸರಾ ಮಹೋತ್ಸವ ಸಂಬಂಧವಾಗಿ ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರು ತಾವು ಕುಳಿತಲ್ಲೇ ಬೇಕಾದ ಮಾಹಿತಿಯನ್ನು ಪಡೆಯಲು ಜಿಲ್ಲಾಡಳಿತ ತೆರೆದಿರುವ ೨೦೨೫ರ ದಸರಾ ವೆಬ್‌ಸೈಟ್ ಮೊಟ್ಟ ಮೊದಲಿಗೆ ಅಭೂತಪೂರ್ವ ದಾಖಲೆ ಬರೆದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹತ್ತು ಲಕ್ಷ ವೀಕ್ಷಕರ ಸಂಖ್ಯೆ ಹೆಚ್ಚಳವಾಗುವ ಜತೆಗೆ ಜಂಬೂಸವಾರಿ ಮೆರವಣಿಗೆ ಹೊತ್ತಿಗೆ ಅರ್ಧಕೋಟಿ ದಾಟುವ ಸಾಧ್ಯತೆ ಇದೆ. ವಿಶೇಷವಾಗಿ ಈ ಬಾರಿಯ ದಸರಾ ವೆಬ್‌ಸೈಟ್‌ನಲ್ಲಿ ಜಿಲ್ಲಾಡಳಿತ ಸಾಕಷ್ಟು ಸುಧಾರಣೆ ತರುವ ಜತೆಗೆ ಟೀಕೆಗಳಿಗೆ ಆಸ್ಪದ ಕೊಡದಂತೆ ತಪ್ಪು ವ್ಯಾಕರಣ ದೋಷಗಳನ್ನು ಸರಿಪಡಿಸಿ ನಿತ್ಯವೂ ಅಪ್ಡೇಟ್ ಮಾಡುತ್ತಿರುವುದರಿಂದ ಈ ಪ್ರಮಾಣದಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಶಂಸೆಗೂ ಪಾತ್ರವಾಗಿದೆ.
ದಾಖಲೆ ಬರೆದ ವೀಕ್ಷಕರ ಸಂಖ್ಯೆ: ಕಳೆದ ಎರಡು ದಶಕಗಳಿಂದ ಪ್ರತಿವರ್ಷ ದಸರಾ ವೆಬ್‌ಸೈಟ್ ತೆರೆದರೂ ತೆರೆಮರೆಯಲ್ಲಿತ್ತು. ಕೆಲವೇ ವರ್ಗದ ಜನರು ಮಾತ್ರ ಬಳಸುತ್ತಿದ್ದರು. ಕೊರೊನಾ ಸಮಯದಲ್ಲಿ ಸರಳ ದಸರಾ ಆಚರಣೆ ಮಾಡಿದ್ದರಿಂದಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಕಳೆದ ವರ್ಷ ವೆಬ್‌ಸೈಟ್ ತೆರೆದರೂ ೩೭ ದಿನಗಳಲ್ಲಿ ೧೫ ಲಕ್ಷ ಜನರು ವೀಕ್ಷಣೆ ಮಾಡಿದ್ದರು. ಆದರೆ, ಈ ಬಾರಿ ೨೦೨೫ರ ವೆಬ್ ಸೈಟ್ ಅನ್ನು ಸೆ.೪ರಂದು ಅಧಿಕೃತವಾಗಿ ಚಾಲನೆ ನೀಡಿದ ಮೇಲೆ ಸೆ.೨೫ ರವರೆಗೆ ಅಂದರೆ ೨೧ ದಿನಗಳಿಗೆ ೩೦ ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ೨೦೨೨ರಲ್ಲಿ ೧೧ಲಕ್ಷ, ೨೦೨೩ರಲ್ಲಿ ೧೩ ಲಕ್ಷ ವೀಕ್ಷಿಸಿದ್ದರೆ, ೨೦೨೪ರಲ್ಲಿ ೧೫ ಲಕ್ಷ ಭೇಟಿ ನೀಡಿದ್ದಾರೆ.
ಈ ವರ್ಷ ೩೦ ಲಕ್ಷ ಜನರಿಗೂ ಮೀರಿ ವೀಕ್ಷಣೆ ಮಾಡುವ ಮೂಲಕ ಮೊದಲ ಬಾರಿಗೆ ದಾಖಲೆ ಬರೆದಿದೆ. ಪ್ರತಿದಿನ ಅಂದಾಜು ೧ರಿಂದ ೧.೨೫ ಲಕ್ಷ ವೀಕ್ಷಣೆ ಮಾಡುತ್ತಿದ್ದು, ಜಂಬೂಸವಾರಿ ಹೊತ್ತಿಗೆ ಅರ್ಧ ಕೋಟಿ ದಾಟಬಹುದು ಎಂದು ಜಿಲ್ಲಾಡಳಿತ ನಿರೀಕ್ಷೆ ಇಟ್ಟುಕೊಂಡಿದೆ.
” ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ತೆರೆದಿರುವ ವೆಬ್‌ಸೈಟ್ ವರ್ಣರಂಜಿತ ಹಾಗೂ ಆಕರ್ಷಣೀಯವಾಗಿದೆ. ಈ ಬಾರಿ ತಪ್ಪು, ವ್ಯಾಕರಣ ದೋಷಕ್ಕೆ ಅವಕಾಶ ಇಲ್ಲದಂತೆ ಮಾಡಲಾಗಿದೆ. ವೀಕ್ಷಕರಿಗೆ ಕುಳಿತಲ್ಲೇ ದಸರೆಗೆ ಸಂಬಂಽಸಿದ ಎಲ್ಲಾ ಮಾಹಿತಿ ದೊರೆಯುವಂತೆ ಮಾಡಿರುವುದರಿಂದ ೩೦ ಲಕ್ಷ ಜನರು ವೀಕ್ಷಣೆ ಮಾಡಿರುವುದು ದಾಖಲೆ. ಜಂಬೂಸವಾರಿ ಹೊತ್ತಿಗೆ ವೀಕ್ಷಕರ ಸಂಖ್ಯೆದುಪ್ಪಟ್ಟಾಗುವ ಸಾಧ್ಯತೆ ಇದೆ.”
-ಡಾ.ಪಿ.ಶಿವರಾಜು, ಅಪರ ಜಿಲ್ಲಾಧಿಕಾರಿ





