ಕೆ.ಬಿ.ರಮೇಶನಾಯಕ
ಕೆಆರ್‌ಎಸ್, ಕಬಿನಿ ಅಣೆಕಟ್ಟೆಯಿಂದ ಒಟ್ಟು ೧೦೦ ಟಿಎಂಸಿ ಹೆಚ್ಚುವರಿ ನೀರು
ಮೈಸೂರು: ರಾಜ್ಯದಲ್ಲಿ ಮಳೆ ಸಮೃದ್ಧವಾಗಿದ್ದು, ಮೈಸೂರು ಭಾಗದ ರೈತರ ಜೀವನಾಡಿ ಕಾವೇರಿ ಹಾಗೂ ಕಪಿಲಾ ನದಿಗಳು ಮೈದುಂಬಿ ಹರಿಯುತ್ತಿವೆ. ಮತ್ತೊಂದೆಡೆ ತಮಿಳುನಾಡಿಗೆ ಕಳೆದ ಐದು ತಿಂಗಳುಗಳಲ್ಲಿ ದಾಖಲೆ ಪ್ರಮಾಣದಲ್ಲಿನೀರು ಹರಿದಿದೆ. ಒಟ್ಟಾರೆ ನಿಗದಿತ ಪ್ರಮಾಣಕ್ಕಿಂತ ೧೦೦ ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಹೋಗಿದೆ.
ಕಳೆದ ಒಂದು ದಶಕದಲ್ಲಿ ತಮಿಳುನಾಡಿಗೆ ಹರಿಸಿರುವ ನೀರಿನ ಅಂಕಿ ಅಂಶಗಳಲ್ಲಿಈ ವರ್ಷ ದಾಖಲೆಯಾಗಿದೆ. ಇದರಿಂದಾಗಿ ತಮಿಳುನಾಡು ಕಾವೇರಿ ನೀರಿಗಾಗಿ ನ್ಯಾಯಾಲಯದ ಮೊರೆ ಹೋಗುವುದಕ್ಕೆ ಅವಕಾಶ ಇಲ್ಲದಂತಾಗಿದೆ. ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ನೀರನ್ನು ಹರಿಸುತ್ತಲೇ ಇರುವ ಪರಿಣಾಮವಾಗಿ ನವೆಂಬರ್ ತಿಂಗಳ ಹೊತ್ತಿಗೆ ಅಂದಾಜು ೨೫ ಟಿಎಂಸಿ ನೀರು ಹರಿಯಬಹುದು ಎನ್ನುವ ನಿರೀಕ್ಷೆ ಹೊಂದಲಾಗಿದೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ವರುಣನ ಆರ್ಭಟದಿಂದಾಗಿ ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳು ತುಂಬಿ ತುಳುಕಿವೆ. ರೈತರ ಕೃಷಿ ಚಟುವಟಿಕೆಗಳಿಗೆ ನಾಲೆಗಳಿಗೆ ನಿಗಿದಿತ ದಿನಕ್ಕಿಂತ ಮುಂಚೆಯೇ ನೀರು ಬಿಡಲಾಯಿತು.
ನೂರು ಟಿಎಂಸಿ ನೀರು ಹೆಚ್ಚಳ: ಒಂದು ದಶಕದಿಂದ ತಮಿಳುನಾಡಿಗೆ ಹರಿದಿರುವ ಪ್ರಮಾಣ ನೋಡಿದರೆ, ೨೦೨೫ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ ನೀರು ಹರಿದಿದೆ.
ಕಾವೇರಿ ನೀರು ಹಂಚಿಕೆ ವಿವಾದದ ತೀರ್ಪಿನ ಪ್ರಕಾರ ತಮಿಳುನಾಡು ರಾಜ್ಯಕ್ಕೆ ೧೭೭.೨೫ ಟಿಎಂಸಿ ಅಡಿ ನೀರನ್ನು ಹರಿಸಬೇಕಾಗಿತ್ತಾದರೂ, ಅಕ್ಟೋಬರ್ ೯ರವರೆಗೆ ೨೮೨ ಟಿಎಂಸಿ ಅಡಿ ನೀರನ್ನು ಹರಿಸಲಾಗಿದ್ದು, ೧೦೫ ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಹರಿದಿದೆ. ಇದರಲ್ಲಿ ಕಬಿನಿ ಜಲಾಶಯದಿಂದ ೧೦೧. ೧೧೫ ಟಿಎಂಸಿ ಅಡಿ, ಕೆಆರ್‌ಎಸ್ ಜಲಾಶಯದಿಂದ ೧೩೬.೪೭೨ ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ೨೦೧೯ರಲ್ಲಿ ೧೭೭ ಟಿಎಂಸಿಗಿಂತ ಹೆಚ್ಚುವರಿಯಾಗಿ ೫೦ ಟಿಎಂಸಿ ಸೇರಿ ೨೨೭ ಟಿಎಂಸಿ ನೀರು ಹರಿಸಲಾಗಿತ್ತು. ಆದರೆ, ಆಗಸ್ಟ್ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿರುವ ಕಾರಣ ದಾಖಲೆ ಪ್ರಮಾಣದಲ್ಲಿ ನೀರು ಹರಿದು ಹೋಗುವುದಕ್ಕೆ ಕಾರಣವಾಗಿದೆ.
ತಮಿಳುನಾಡು ಕ್ಯಾತೆಗೆ ಇಲ್ಲ ಅವಕಾಶ: ಮಳೆ ಕೈಕೊಟ್ಟು ಬರಗಾಲ ಕಾಣಿಸಿಕೊಂಡಿದ್ದರೆ ತಮಿಳುನಾಡಿಗೆ ನೀರು ಹರಿಸುವಂತೆ ಒತ್ತಡ ಹೇರುವ ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಽಕಾರದ ಮೊರೆ ಹೋಗಿ ನೀರು ಹರಿಸುವಂತೆ ಬೇಡಿಕೆ ಇಡಲಾಗುತ್ತಿತ್ತು. ಆದರೆ, ಜೂನ್ ತಿಂಗಳಿಂದ ಅಕ್ಟೋಬರ್ ೯ರವರೆಗೆ ಹರಿದಿರುವ ನೀರಿನ ಪ್ರಮಾಣದಿಂದಾಗಿ ತಮಿಳುನಾಡು ಕ್ಯಾತೆ ತೆಗೆಯಲು ಅವಕಾಶವೇ ಸಿಗದಂತಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೇರಿ ರಾಜ್ಯಗಳಿಗೆ ಹಂಚಿಕೆಯಾಗಿ ರುವಂತೆ ತಮಿಳುನಾಡಿಗೆ ವಾರ್ಷಿಕ ೧೭೭.೨೫ ಟಿಎಂಸಿ ನೀರು ಕೊಡಬೇಕು ಎನ್ನುವುದು ತೀರ್ಪಿನಲ್ಲಿ ಇದೆ. ಕೆಲವೊಮ್ಮೆ ಮಳೆ ಬಂದಾಗ ಸಂಕಷ್ಟದ ಸೂತ್ರ ಅನುಸರಿಸಿ ನೀರು ಹರಿಸುವಂತೆ ಹೇಳಿತ್ತು.
” ಕೊಡಗು, ಕೇರಳ ಭಾಗದಲ್ಲಿ ನಿರಂತರವಾಗಿ ಮಳೆಯಾಗಿ ಜಲಾಶಯಗಳು ಭರ್ತಿಯಾಗಿದ್ದರಿಂದ ದಾಖಲೆ ಪ್ರಮಾಣದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿದೆ. ನಮಗೆ ಲಭ್ಯವಿರುವ ನೀರನ್ನು ಬಳಸಿಕೊಂಡು ಮೈಸೂರು-ಚಾಮರಾಜನಗರ ಜಿಲ್ಲೆಗಳ ಒಣ ಪ್ರದೇಶಗಳಿಗೆ ನೀರು ಪೂರೈಸಲು ಯೋಜನೆಗಳನ್ನು ರೂಪಿಸಲಾಗಿದೆ.”
-ಕೆ.ಮಹೇಶ್, ಅಧೀಕ್ಷಕ ಅಭಿಯಂತರರು, ಕಬಿನಿ ಮತ್ತು ವರುಣ ನಾಲಾ ವೃತ್ತ





