ರಾಜ್ಯ ಸರ್ಕಾರ ಸತತವಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ವಿದ್ಯುತ್ ದರ ಏರಿಕೆಯ ಬೆನ್ನಲ್ಲೆ ಹಾಲಿನ ದರವನ್ನೂ ಏರಿಕೆ ಮಾಡುವ ಮೂಲಕ ಯುಗಾದಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರಿಗೆ ಶಾಕ್ ನೀಡಿದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸತತವಾಗಿ ಹಾಲಿನ ದರ ಮತ್ತು ವಿದ್ಯುತ್ ದರ ಏರಿಕೆ ಮಾಡುತ್ತಿರುವುದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ದುಡಿಯುವ ವರ್ಗಕ್ಕೆ ಈ ಬೆಲೆ ಏರಿಕೆ ನೀತಿಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೂ ಎರಡು ಬಾರಿ ಹಾಲಿನ ದರವನ್ನು ಏರಿಕೆ ಮಾಡಿದೆ. ಈಗ ಏಪ್ರಿಲ್ ೧ರಿಂದ ಜಾರಿಗೆ ಬರುವಂತೆ ಮತ್ತೊಮ್ಮೆ ೪ ರೂ. ಏರಿಕೆ ಮಾಡುವ ಮೂಲಕ ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದೆ. ಇದರೊಂದಿಗೆ ವಿದ್ಯುತ್ ದರ ಕೂಡ ಏರಿಕೆಯಾಗಿರುವುದು ಗ್ರಾಹಕರಿಗೆ ಹೊರೆಯಾಗಿದೆ. ಬಡವರ ಪರವಾಗಿದ್ದೇವೆ ಎನ್ನುವ ಸರ್ಕಾರ ಹೀಗೆ ಬೆಲೆ ಏರಿಕೆ ಮಾಡುವುದರಿಂದ ಬಡವರಿಗಾಗುವ ಅನುಕೂಲವಾದರೂ ಏನು? ಆದ್ದರಿಂದ ಸರ್ಕಾರ ಈ ಬೆಲೆ ಏರಿಕೆ ನೀತಿಯನ್ನು ಕೈಬಿಡಲಿ.
-ಪಿ.ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು.





