Mysore
24
overcast clouds

Social Media

ಬುಧವಾರ, 01 ಜನವರಿ 2025
Light
Dark

ಓದುಗರ ಪತ್ರ: ಭ್ರೂಣ ಹತ್ಯೆಗಳಿಗೆ ಕಡಿವಾಣ ಎಂದು?

ಒಂಬತ್ತು ತಿಂಗಳ ಹಿಂದೆಯಷ್ಟೇ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಡೆದಿದೆ ಎನ್ನಲಾದ ಹೆಣ್ಣು ಭ್ರೂಣ ಹತ್ಯೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು.

ಈ ಪ್ರಕರಣ ಮಾಸುವ ಮುನ್ನವೇ ಈಗ ಮತ್ತೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆಯ ಜಾಲ ಪತ್ತೆ ಯಾಗಿರುವುದು ಆತಂಕ ಸೃಷ್ಟಿಸಿದೆ.

ಕಳೆದ ಬಾರಿ ಮಂಡ್ಯ ಜಿಲ್ಲೆಯ ಪಾಂಡವಪುರದ ಆರೋಗ್ಯಾಧಿಕಾರಿಗಳ ಕಚೇರಿಯ ಹಿಂಭಾಗವೇ ಭ್ರೂಣ ಹತ್ಯೆಯ ಜಾಲ ಪತ್ತೆಯಾಗಿತ್ತು. ಇಷ್ಟಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮವಹಿಸದ ಪರಿಣಾಮ ಈಗ ಮಂಡ್ಯ ಜಿಲ್ಲೆಯಲ್ಲಿಯೇ ಅತಿಹೆಚ್ಚು ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ದಾಖಲಾಗಿರುವುದು ವಿಷಾದಕರ ಸಂಗತಿ.

ರಾಜ್ಯದ 14 ಜಿಲ್ಲೆಗಳಲ್ಲಿ 6 ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ದಾಖಲಾಗಿದೆ. ಬಾಗಲಕೋಟೆ, ವಿಜಯಪುರ, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಪ್ರತಿ 1000 ಗಂಡು ಮಕ್ಕಳಿಗೆ ಕೇವಲ 624 ರಿಂದ 750 ಹೆಣ್ಣು ಮಕ್ಕಳ ಸರಾಸರಿ ಇದೆ ಎಂಬುದಾಗಿ ವರದಿಗಳು ಹೇಳುತ್ತಿವೆ. 2011ರ ಜನಗಣತಿ ಪ್ರಕಾರ ಪ್ರತಿ 1000 ಗಂಡು ಮಕ್ಕಳಿಗೆ 924 ಹೆಣ್ಣುಮಕ್ಕಳ ಸರಾಸರಿ ಇದ್ದದ್ದು ಈಗ ಇಳಿಕೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರೊಬ್ಬರು, ನಾವು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ ಭ್ರೂಣ ಹತ್ಯೆಗಳು ಮರುಕಳುಹಿಸುತ್ತಿವೆ ಎಂದು ಬೇಜವಾಬ್ದಾರಿಯ ಮತ್ತು ಅಸಹಾಯಕತೆಯ ಹೇಳಿಕೆ ನೀಡಿರುವುದು ವಿಷಾದನೀಯ.
ಈಗಾಗಲೇ ದಾಖಲಾಗಿರುವ ಇಂತಹ ಪ್ರಕರಣಗಳ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸದ ಹೊರತಾಗಿ ಭ್ರೂಣ ಹತ್ಯೆಗಳನ್ನು ತಡೆಗಟ್ಟಲು ಸಾಧ್ಯವಿಲ್ಲ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags: