ಸರಗೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿದ್ದು, ಪ್ರಯಾಣಿಕರಿಗೆ ಕಿರಿಕಿರಿಯಾಗುತ್ತಿದೆ. ಈ ನಿಲ್ದಾಣದ ಪಕ್ಕದಲ್ಲಿಯೇ ಕೊಳಚೆ ನೀರು, ಕಸದ ರಾಶಿಯೇ ಸಂಗ್ರಹವಾಗಿದ್ದು, ದುರ್ವಾಸನೆ ಬೀರುತ್ತಿದೆ. ಅಲ್ಲದೆ ಅಕ್ಕಪಕ್ಕದ ಅಂಗಡಿ ಮುಂಗಟ್ಟಿನವರೂ ಕಸವನ್ನು ಇಲ್ಲಿಯೇ ತಂದು ಬೀಸಾಡುತ್ತಿದ್ದಾರೆ. ಈಗ ಮಳೆಗಾಲವಾದ್ದರಿಂದ ಆ ಕೊಳಚೆ ನೀರು ಮಳೆ ನೀರಿನೊಂದಿಗೆ ನಿಲ್ದಾಣದ ಮುಂಭಾಗದಲ್ಲಿಯೇ ಹರಿಯುತ್ತಿದ್ದು, ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಹರಸಾಹಸಪಡುವಂತಾಗಿದೆ.
ಈ ನಿಲ್ದಾಣಕ್ಕೆ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಬಂದು ಹೋಗುತ್ತಾರೆ. ಇಂತಹ ಜನನಿಬಿಡ ಪ್ರದೇಶದಲ್ಲಿನ ಅನೈರ್ಮಲ್ಯದ ವಾತಾವರಣದಿಂದಾಗಿ ಅವರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ದುರ್ವಾಸನೆ ತಾಳಲಾರದೆ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣವು ಸರಗೂರು ಪಟ್ಟಣದ ಕೇಂದ್ರ ಭಾಗದಲ್ಲಿಯೇ ಇದ್ದು, ಇದರ ಮುಂಭಾಗದಲ್ಲೇ ಪಟ್ಟಣ ಪಂಚಾಯಿತಿ ಇದ್ದರೂ ಇಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳಬೇಕಿದೆ.
-ಸಂಜಯ್, ಸರಗೂರು.





