ಹೆರಿಗೆ ಸಮಯದಲ್ಲಿ ಅನಗತ್ಯವಾಗಿ ಸಿಸೇರಿಯನ್ ಮಾಡುವ ಖಾಸಗಿ ನರ್ಸಿಂಗ್ ಹೋಂಗಳ ವಿರುದ್ಧ ಕೆಪಿಎಂಇ ಅಧಿನಿಯಮ ಕಾಯ್ದೆ ಪ್ರಕಾರ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆಳಗಾವಿ ಅಧಿವೇಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿರುವುದು ಸ್ವಾಗತಾರ್ಹವಾಗಿದೆ. ಇದೊಂದು ಸರ್ಕಾರದ ದಿಟ್ಟ ಹೆಜ್ಜೆ ಎಂದೇ ಹೇಳಬಹುದಾದರೂ, ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡಲಾಗಿದೆ ಎಂದು ದೃಢಪಡಿಸುವವರು ಯಾರು? ಎಂಬಂತಾಗಿದೆ.
ರಾಜ್ಯದ ಬಹುತೇಕ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳಲ್ಲಿ ತಾಯಿ, ಮಗುವಿನ ಆರೋಗ್ಯದ ದೃಷ್ಟಿಯಿಂದ ಸಿಸೇರಿಯನ್ ಹೆರಿಗೆ ಮಾಡುವುದು ಅಗತ್ಯ ಎಂಬ ನೆಪ ಹೇಳಿ ಹಣಕ್ಕಾಗಿ ಸಿಸೇರಿಯನ್ ಹೆರಿಗೆ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಅನಗತ್ಯ ಸಿಸೇರಿಯನ್ ಹೆರಿಗೆ ಮಾಡುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ, ಕಾಯ್ದೆ ಕಾಗದದ ಮೇಲಿನ ಹುಲಿ ಎಂಬಂತಾಗದೇ ಕಟ್ಟು ನಿಟ್ಟಾಗಿ ಜಾರಿಗೆ ಬರುವುದು ಅಗತ್ಯವಾಗಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ , ಮೈಸೂರು





