ಮೈಸೂರು ದಸರಾ ಮಹೋತ್ಸವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಬರುವ ಪ್ರವಾಸಿಗರು ಸ್ವಚ್ಛತೆ ಕಾಪಾಡುವ ಜತೆಗೆ ಸಭ್ಯತೆಯಿಂದ ವರ್ತಿಸುವುದನ್ನೂ ಕಲಿಯಬೇಕಿದೆ. ಕೆಲ ದಿನಗಳಿಂದ ಹಿಂದೆ ಅರಮನೆಯ ಒಳಭಾಗದಲ್ಲಿ ಪ್ರವಾಸಿಗರೊಂದಿಗೆ ಬಂದಿದ್ದ ಬಾಲಕನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದು, ಇದನ್ನು ಬೇರೆ ರಾಜ್ಯದ ಪ್ರವಾಸಿಗನೊಬ್ಬ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅರಮನೆಯ ಭದ್ರತಾ ಪಡೆಗಳ ಕಾರ್ಯನಿರ್ವಹಣೆ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ. ಅರಮನೆ ಒಂದು ಪ್ರವಾಸಿ ತಾಣವಾಗಿರುವ ಜತೆಗೆ ಮಹಾರಾಜರು ವಾಸವಿದ್ದ ಸ್ಥಳ. ಹೀಗಾಗಿ ಅರಮನೆ ಎಂದರೆ ಮೈಸೂರಿಗರಿಗೆ ಪೂಜ್ಯನೀಯ ಭಾವ. ಬರುವ ಪ್ರವಾಸಿಗರು ಯಾರೇ ಆಗಿದ್ದರೂ ಈ ಭಾವನೆಗಳಿಗೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು. ಅರಮನೆ ಆವರಣದಲ್ಲಿ ಆ ಬಾಲಕ ಮೂತ್ರ ವಿಸರ್ಜನೆ ಮಾಡುತ್ತಿದ್ದರೂ ಅವರ ತಂದೆ-ತಾಯಿ ಮಗುವಿಗೆ ಬುದ್ದಿ ಹೇಳದೆ ಸುಮ್ಮನಿದ್ದದ್ದು ವಿಪರ್ಯಾಸ. ಮುಂದಾದರೂ ಬರುವ ಪ್ರವಾಸಿಗರು ಇಲ್ಲಿನ ಸಂಸ್ಕೃತಿಯನ್ನು ಗೌರವಿಸುವ ಜತೆಗೆ ತಮ್ಮ ಮಕ್ಕಳಿಗೂ ಗೌರವಿಸುವುದನ್ನು ಕಲಿಸಲಿ.
ಆರ್.ಯಶಸ್, ಮೈಸೂರು.