ಬೇಸಿಗೆ ರಜೆ ಆರಂಭಗೊಳ್ಳುತ್ತಿದ್ದಂತೆಯೇ ಎಲ್ಲೆಡೆ ಬೇಸಿಗೆ ಶಿಬಿರಗಳೂ ಆರಂಭಗೊಳ್ಳುತ್ತವೆ. ಮಕ್ಕಳು ಪಠ್ಯ-ಪುಸ್ತಕಗಳನ್ನು ಬದಿಗಿಟ್ಟು, ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ.
ಬೇಸಿಗೆ ಶಿಬಿರಗಳಲ್ಲಿ ಮಕ್ಕಳು ತಮ್ಮ ರಜೆ ದಿನಗಳನ್ನು ಸಂತೋಷದಿಂದ ಕಳೆದರೆ, ದುಡಿಯುವ ಪೋಷಕರಿಗೆ ತಮ್ಮ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂಬ ಧೈರ್ಯವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಪರಸ್ಪರ ದ್ವೇಷ, ಕಳ್ಳತನ, ವಂಚನೆ, ಅತ್ಯಾಚಾರ, ಕೊಲೆ ಪ್ರಕರಣಗಳೇ ಹೆಚ್ಚಾಗಿದ್ದು, ಸಮು ದಾಯಗಳ ನಡುವೆ ದ್ವೇಷ ಹೆಚ್ಚಾಗುತ್ತಿದೆ. ಆದ್ದರಿಂದ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಜೀವನ ಮೌಲ್ಯಗಳು, ಸಂಬಂಧಗಳು, ರಕ್ತದಾನ, ದೇಶಪ್ರೇಮ, ಹುತಾತ್ಮ ಯೋಧರ ಬಗ್ಗೆ ಮಾಹಿತಿ, ಗುರುಗಳ ಮಹತ್ವ ತಿಳಿಸುವುದು, ಎಲ್ಲ ಧರ್ಮಗಳು ಮತ್ತು ಆಚರಣೆಗಳನ್ನು ಗೌರವಿಸುವ ವಿಚಾರಗಳು, ಹೆಣ್ಣು ಮಕ್ಕಳನ್ನು ಗೌರವಿಸುವುದು ಹೀಗೆ ಸಾಮಾಜಿಕ ಕಳಕಳಿಯ ವಿಚಾರಗಳನ್ನು ತಿಳಿಸುವ ಜತೆಗೆ ಪರಸ್ಪರ ಕಾಳಜಿಯನ್ನೂ ಮೂಡಿಸಬೇಕು.
ಇವುಗಳೊಂದಿಗೆ ಮಕ್ಕಳು ನಾಟಕ, ಹಾಡುಗಾರಿಕೆ, ಚಿತ್ರಕಲೆ ಹೀಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು. ಇಂತಹ ಬೆಳವಣಿಗಳು ಬೇಸಿಗೆ ಶಿಬಿರದಲ್ಲಿ ಆದಾಗ ಮಾತ್ರ ಮಕ್ಕಳು ಸಂತೋಷದಿಂದ ಬೇಸಿಗೆ ಶಿಬಿರದಲ್ಲಿ ಭಾಗವಹಿಸುತ್ತಾರೆ.
-ಎಂ.ಎಸ್.ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು.





